ಐತಿಹಾಸಿಕ ಜನಸ್ಪಂದನ ಇತ್ತೀಚೆಗೆ 17 ಜನರನ್ನು ಬಲಿ ತೆಗೆದುಕೊಂಡ ಮೂರು ದಿನಗಳ ಭಯೋ­­ತ್ಪಾದಕ ದಾಳಿಗಳಿಂದ ಫ್ರಾನ್ಸ್‌ನ ಪ್ಯಾರಿಸ್ ನಗರ ನಲು­ಗಿತ್ತು. ಆದರೆ ಇದೇ ನಗರದಲ್ಲಿ ಕಳೆದ ಭಾನುವಾರ 30 ಲಕ್ಷ ಜನರು ಸಮಾ­ವೇಶಗೊಂಡು ಪ್ರದರ್ಶನ ನಡೆಸಿದ್ದು ಹೃದಯಸ್ಪರ್ಶಿ. 40 ರಾಷ್ಟ್ರಗಳ ನಾಯಕರು ಈ ಪ್ರದರ್ಶನದಲ್ಲಿ ಭಾಗವಹಿಸಿ ಬೆಂಬಲ ತೋರಿದರು. ಹೀಗಾಗಿ ಅಂದು ‘ಪ್ಯಾರಿಸ್‌ ವಿಶ್ವದ ರಾಜಧಾನಿ’ ಯಾಗಿ ಪರಿಣಮಿಸಿದೆ ಎಂದು ಫ್ರಾನ್ಸ್‌ನ ಅಧ್ಯಕ್ಷ ಫ್ರಾಂಕಾಯಿಸ್‌ ಹಾಲೆಂಡ್‌ ಬಣ್ಣಿಸಿದ್ದು ಸರಿಯಾ­ದದ್ದೇ. ಪ್ಯಾರಿಸ್‌ನಲ್ಲಷ್ಟೇ ಅಲ್ಲ ಫ್ರಾನ್ಸ್‌ನುದ್ದಕ್ಕೂ ಹಲವಾರು ಪಟ್ಟಣಗ­ಳಲ್ಲೂ ನಡೆದ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದ ಜನಸ್ತೋಮ ಸಂತ್ರಸ್ತ ಕುಟುಂಬಗಳ ನೋವಿಗಾಗಿ ಮಿಡಿಯಿತು. ದಾಳಿಯಿಂದ ನಲುಗಿರುವ ದೇಶದ ಪರವಾಗಿ ಈ ಸಂದರ್ಭದಲ್ಲಿ ವ್ಯಕ್ತವಾದ ಭಾರಿ ಬೆಂಬಲ ಮನಮುಟ್ಟು­ವಂತ­ಹದ್ದು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಪ್ರತಿಪಾದಿಸಿ­ದಂತಹ ರಾಷ್ಟ್ರ ಫ್ರಾನ್ಸ್‌. ವಿಡಂಬನಾತ್ಮಕ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ ಮೇಲೆ ದಾಳಿ ನಡೆಸಿ 8 ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಭಯೋತ್ಪಾದಕ­ರಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಾಗದು ಎಂಬ ಸಂದೇಶ­ವನ್ನು ಈ ಪ್ರದರ್ಶನ ಗಟ್ಟಿಯಾಗಿ ಸಾರಿದೆ. ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರಾದ ಬ್ರಿಟನ್‌ ಪ್ರಧಾನಿ ಡೇವಿಡ್‌ ಕ್ಯಾಮೆರಾನ್‌, ಜರ್ಮನ್ ಚಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಪರಸ್ಪರ ದ್ವೇಷ ಹೊಂದಿದ ರಾಷ್ಟ್ರಗಳಾದ ಇಸ್ರೇಲ್ ಹಾಗೂ ಪ್ಯಾಲೆ­ಸ್ಟೀನ್ ರಾಷ್ಟ್ರಗಳ ನಾಯಕರ ಪಾಲ್ಗೊಳ್ಳುವಿಕೆ ವಿಶೇಷವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಈ ಪರಿಯಲ್ಲಿ ಜಗತ್ತು ತೀವ್ರವಾಗಿ ಸ್ಪಂದಿಸಿದ್ದು ಅಪರೂಪ. ಆದರೆ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದ ಅನೇಕ ರಾಷ್ಟ್ರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಡೆದಿದೆ ಎಂಬುದು ವಿಪರ್ಯಾಸದ ಸಂಗತಿ. ಈಜಿಪ್ಟ್, ಟರ್ಕಿ, ಅಲ್ಜೀರಿಯಾ ಹಾಗೂ ರಷ್ಯಾಗಳಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಈ ಪ್ರದರ್ಶನಗಳು ಎತ್ತಿ ಹೇಳಿವೆ. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಭಯೋತ್ಪಾದಕ ದಾಳಿಗಳು ಆತಂಕ­ಕಾರಿ ಎಂಬುದನ್ನೂ ಸಾರಿ ಹೇಳಲು ಈ ಪ್ರದರ್ಶನ ಯತ್ನಿಸಿದೆ. ಭಯೋತ್ಪಾದನೆ ಪ್ರತಿರೋಧದ ಹೊಸ ಕಥನವಿದು. ಈ ಸಮಾವೇಶಗಳು 2008ರ ಮುಂಬೈ ದಾಳಿ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ವ್ಯಕ್ತವಾದ ಜನಸ್ಪಂದನವನ್ನು ನೆನಪಿ­ಸುವಂತಿದ್ದವು. ದಾಳಿಯ ಆಘಾತದಿಂದ ಚೇತರಿಸಿಕೊಂಡ ಕೂಡಲೇ ಮುಂಬೈ ವಾಸಿಗಳ ಪರವಾಗಿ ದೇಶದೆಲ್ಲೆಡೆ ಮತ್ತು ಜಗತ್ತಿನ ವಿವಿಧೆಡೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿತ್ತು. ಈ ಬಗೆಯ ದಾಳಿಗಳಿಗೆ ಎದೆಗುಂದುವುದಿಲ್ಲ ಎಂದು ನಾಗರಿಕರು ಸಾರಿ ಹೇಳಿದ್ದರು. ಮುಂಬೈನಲ್ಲಿ ಜನಜೀವನ ತ್ವರಿತ-­ಗತಿಯಲ್ಲಿ ಸಹಜ ಸ್ಥಿತಿಗೆ ಮರಳಿತ್ತು. ಯಾವ ಭಯೋತ್ಪಾದಕರಿಗೂ ತಮ್ಮ ಬದುಕಿನ ಹಳಿ ತಪ್ಪಿಸಲು, ಶಾಂತಿ ಮತ್ತು ಸ್ವಾತಂತ್ರ್ಯದ ಮೌಲ್ಯಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದರು. ಇಷ್ಟೆಲ್ಲ ಆದರೂ ಮುಂಬೈ ದಾಳಿಯ ಸಂಚುಕೋರರು ಈವರೆಗೂ ಪಾಕಿಸ್ತಾನದಲ್ಲಿ ಮುಕ್ತ­ವಾಗಿ ಓಡಾಡಿಕೊಂಡಿರುವುದು ವಿಷಾದಕರ. ಅಲ್ಲಿ ಅಧಿಕಾರಕ್ಕೆ ಬರುವ ಯಾವ ಸರ್ಕಾರವೂ ಅಪರಾಧಿಗಳನ್ನು ಶಿಕ್ಷಿಸಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಪ್ಯಾರಿಸ್‌ ದಾಳಿ ಮತ್ತು ಭಾನುವಾರದ ಮೆರವಣಿಗೆಯು ಪಾಕಿಸ್ತಾನಕ್ಕೂ ಸೂಕ್ತ ಸಂದೇಶವೊಂದನ್ನು ರವಾನಿಸುವಂತೆ ಇತ್ತು. ಕ್ಷುಲ್ಲಕ ಸಂಗತಿಗಳನ್ನು ಬದಿಗೊತ್ತಿ ಭಯೋತ್ಪಾದಕರನ್ನು ‘ಸಮಾನ ಶತ್ರು’ಗಳಾಗಿ ಕಂಡರೆ ಮಾತ್ರ ಭಯೋತ್ಪಾದನೆಯ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.