ಸಕಾರಾತ್ಮಕ ಹೆಜ್ಜೆ ಭಾರತದಲ್ಲಿ ನಡೆಯುವ ಲೋಕಸಭೆ ಹಾಗೂ ವಿಧಾನಸಭೆ ಚುನಾ­ವಣೆಗಳಲ್ಲಿ ತಾವಿದ್ದ ದೇಶದಿಂದಲೇ ಮತ ಚಲಾಯಿಸಲು ಅವ­ಕಾಶ ಕಲ್ಪಿಸಬೇಕು ಎಂಬುದು ಅನಿವಾಸಿ ಭಾರತೀಯರ (ಎನ್‌ಆರ್‌ಐ) ಬಹುದಿನಗಳ ಬೇಡಿಕೆ. ಅದೀಗ ಈಡೇರುವ ಕಾಲ ಬಂದಿದೆ. ಅಂಚೆ ಮೂಲಕ ಮತ ಚಲಾಯಿಸುವ ಹಕ್ಕನ್ನು ಅವರಿಗೆ ಕೊಡಬಹುದು ಎಂಬ ಚುನಾವಣಾ ಆಯೋಗದ ಸಲಹೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ಗೂ ಪ್ರಮಾಣಪತ್ರ ಸಲ್ಲಿಸಿದೆ. ದೇಶದ ಜನತಂತ್ರದ ಇತಿ­ಹಾ­ಸ­ದಲ್ಲಿ ಇದೊಂದು ಮಹತ್ವದ ಮೈಲುಗಲ್ಲಾಗಿ ದಾಖಲಾಗಲಿದೆ. ಅನಿ­ವಾಸಿಗಳ ಮತದಾನ ಹಕ್ಕಿನ ಬೇಡಿಕೆ ಬಗ್ಗೆ ಪರಿಶೀಲಿಸಲು ಚುನಾವಣಾ ಆಯೋಗ ಹಿರಿಯ ಅಧಿಕಾರಿಗಳನ್ನು ಒಳಗೊಂಡ 12 ಜನರ ಸಮಿತಿ ನೇಮಿ­ಸಿತ್ತು. ಅದು ನೀಡಿದ ಮುಖ್ಯ ಸಲಹೆಯೆಂದರೆ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಅನಿವಾಸಿಗಳಿಗೆ ಇ–ಮೇಲ್‌ ಮೂಲಕ ‘ಇ–ಮತಪತ್ರ’ ರವಾನಿಸ­ಬೇಕು; ಅವರು ಅದರಲ್ಲಿ ಮತ ಚಲಾಯಿಸಿ ಅಂಚೆ ಮೂಲಕ ತಮ್ಮ ಕ್ಷೇತ್ರದ ಚುನಾವಣಾ ಅಧಿಕಾರಿಗೆ ಕಳಿಸಬೇಕು. ಇಲ್ಲಿ ಮತದಾನದ ಮುಖ್ಯ ಲಕ್ಷಣ­ವಾದ ಗೋಪ್ಯತೆಯನ್ನೂ ಕಾಪಾಡಿಕೊಳ್ಳಬಹುದು. ಇದರಿಂದ ಮತ ಚಲಾ­ಯಿ­ಸುವ ಅನಿವಾಸಿಯ ಹಕ್ಕನ್ನು ಮಾನ್ಯ ಮಾಡಿದಂತಾಗುತ್ತದೆ. ಅಂಚೆ ಮತ­ದಾನ ಹೊಸದೇನಲ್ಲ. ಚುನಾವಣಾ ಸಿಬ್ಬಂದಿಗೆ ಈಗಾಗಲೆ ಇಂಥ ಸೌಲಭ್ಯ­ವಿದೆ. ಆದರೆ ಮತ ಚಲಾಯಿಸಲೇಬೇಕೆಂಬ ಹಂಬಲ ಹೊತ್ತ ಅನಿವಾಸಿಗಳು ಮಾತ್ರ ತಾವಿದ್ದ ದೇಶದಿಂದ ಭಾರತಕ್ಕೆ ಬಂದು ತಮ್ಮ ಹೆಸರಿರುವ ಮತಗಟ್ಟೆಗೆ ಖುದ್ದಾಗಿ ಹೋಗಬೇಕಿತ್ತು. ನಾನಾ ಕಾರಣಗಳಿಗಾಗಿ ಎಷ್ಟೋ ಜನರಿಗೆ ಚುನಾ­ವಣೆ ಹೊತ್ತಿಗೆ ಬರಲು ಆಗದೆ ಮತಾಧಿಕಾರದ ಹಕ್ಕಿನಿಂದ ವಂಚಿತರಾಗುತ್ತಿದ್ದರು. ಶಿಕ್ಷಣ, ಉದ್ಯೋಗ ಮತ್ತಿತರ ಕಾರಣಗಳಿಗಾಗಿ ಅಥವಾ ಒಳ್ಳೆಯ ಭವಿಷ್ಯ ಅರಸುತ್ತ ಹೋದ ಒಂದು ಕೋಟಿಗೂ ಹೆಚ್ಚು ಭಾರತೀಯರು ವಿದೇಶಗಳಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಭಾರತೀಯ ಪೌರತ್ವ ಮತ್ತು ಭಾವ­ನಾ­ತ್ಮಕ ನಂಟು ಉಳಿಸಿಕೊಂಡಿದ್ದಾರೆ. ದೇಶದ ಆರ್ಥಿಕತೆಗೂ ಕೊಡುಗೆ ನೀಡುತ್ತಿ­ದ್ದಾರೆ. ಇಷ್ಟೆಲ್ಲ ಇದ್ದರೂ ಮತ ಚಲಾವಣೆ ಅವಕಾಶ ತಮಗಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಅನಿವಾಸಿ ವೈದ್ಯ ಡಾ. ವಿ.ಪಿ. ಶಂಷೇರ್‌ ಎಂಬುವರು ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅದನ್ನು ಕೋರ್ಟ್‌ ಅಂಗೀಕರಿಸಿ ಎನ್‌ಆರ್‌ಐಗಳ ಮತದಾನ ಹಕ್ಕಿನ ಬೇಡಿಕೆ ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಈ ಎಲ್ಲ ಪ್ರಯತ್ನಗಳ ಫಲವಾಗಿ ಎನ್‌ಆರ್‌ಐಗಳಿಗೂ ಅಂಚೆ ಮತಾಧಿಕಾರ ನೀಡುವ ನಿಟ್ಟಿನಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ಕೇಂದ್ರ ಕಾನೂನು ಸಚಿವಾಲಯ ಕಾರ್ಯೋನ್ಮುಖವಾಗಿದೆ. ಈಗಾಗಲೆ ಏಷ್ಯದ 20 ದೇಶಗಳು ಸೇರಿದಂತೆ ವಿಶ್ವದಲ್ಲಿ 114 ದೇಶಗಳು ತಮ್ಮ ಅನಿ­ವಾಸಿ ನಾಗರಿಕರಿಗೆ ಅವರಿರುವ ಕಡೆಯಿಂದಲೇ ಮತ ಚಲಾಯಿಸುವ ಅವ­ಕಾಶ ಕೊಟ್ಟಿವೆ. ಅಂಥ ಅವಕಾಶ ಇನ್ನು ಹೊರದೇಶದಲ್ಲಿನ ಭಾರತೀಯ­ರಿಗೂ ಸಿಗುತ್ತದೆ ಎನ್ನುವುದು ಸ್ವಾಗತಾರ್ಹ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.