ಫ್ಲೆಕ್ಸ್‌ ಹಾವಳಿಗೆ ತಡೆಯೊಡ್ಡಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರ, ಪಟ್ಟಣಗಳಲ್ಲಿ ಫ್ಲೆಕ್ಸ್‌, ಕಟೌಟ್‌, ಬ್ಯಾನರ್‌ಗಳ ಹಾವಳಿ ವಿಪರೀತಕ್ಕೆ ಹೋಗಿದೆ. ರಾಜಕೀಯ ಮುಖಂಡರ ಭೇಟಿ, ಜಯಂತಿ, ಪುಣ್ಯತಿಥಿ, ಹಬ್ಬ, ಹರಿದಿನ, ಉತ್ಸವ, ಹೋರಾಟದಂಥ ಎಲ್ಲ ಸಂದರ್ಭ­ಗಳಲ್ಲೂ ಪ್ರದರ್ಶನ ಫಲಕಗಳು ಇರಲೇಬೇಕು ಎಂಬ ಅಲಿಖಿತ ನಿಯಮ­ವೊಂದು ಚಾಲ್ತಿಯಲ್ಲಿದೆಯೇನೊ ಎನ್ನುವ ಮಟ್ಟಿಗೆ ಈ ಪಿಡುಗು ವ್ಯಾಪಿಸಿದೆ. ಇದರಿಂದ ನೋಡುವ ಕಣ್ಣಿಗೂ ಕಿರಿಕಿರಿ, ನಗರ–ಪಟ್ಟಣಗಳ ಅಂದಕ್ಕೂ ಧಕ್ಕೆ. ಮೇಲಾಗಿ ಇಂತಹ ಫಲಕಗಳಲ್ಲಿ ಹೆಚ್ಚಿನವು ಅನಧಿಕೃತ. ಅರ್ಥಾತ್‌ ಅಕ್ರಮ. ಈ ಪಿಡುಗು ನಿಯಂತ್ರಿಸಲು ಪೌರಾಡಳಿತ ಸಂಸ್ಥೆಗಳಿಗೆ ಸಾಧ್ಯ­ವಾಗ­ದಿರುವುದು ಸೋಜಿಗದ ಸಂಗತಿ! ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆಗೆಸಲು ಬೆಂಗಳೂರಿನ ಮೇಯರ್‌ ಎನ್‌.ಶಾಂತಕುಮಾರಿ ಅವರು ಈಗ 15 ದಿನಗಳ ಗಡುವು ನೀಡಿದ್ದಾರೆ. ಅಷ್ಟರೊಳಗೆ ತೆರವು ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಯಾವುದಾದರೊಂದು ಸಮಸ್ಯೆ ಬಿಗಡಾಯಿಸಿದಾಗ ದಿಢೀರನೆ ಸಭೆ ಕರೆದು, ಅಧಿಕಾರಿಗಳ ವಿರುದ್ಧ ರೇಗಾಡುವುದೇ ಪರಿಹಾರ ಎಂದು ಆಡಳಿತಾರೂಢ ಜನಪ್ರತಿನಿಧಿಗಳು ಭಾವಿಸಿದಂತಿದೆ. ಇದಕ್ಕೆ ಮೇಯರ್‌ ಕೂಡ ಹೊರತಲ್ಲ. ಅನಧಿಕೃತ ಫ್ಲೆಕ್ಸ್‌ ತೆರವುಗೊಳಿಸಲು ಪಾಲಿಕೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರ ನೀಡುವಂತೆ ಉಪ­ಲೋಕಾಯುಕ್ತರು ಪತ್ರ ಬರೆದಿದ್ದರಿಂದ ಎಚ್ಚೆತ್ತ ಮೇಯರ್‌, ಅಧಿಕಾರಿಗಳ ಮೇಲೆ ಗೂಬೆ ಕೂರಿಸಲು ಹೊರಟಿರುವುದು ಒಪ್ಪತಕ್ಕ ನಡೆಯಲ್ಲ. ಕಸ ವಿಲೇವಾರಿಯಂಥ ತುರ್ತು ಕೆಲಸಗಳೇ ಕಗ್ಗಂಟಾಗಿ ಪರಿಣಮಿಸಿವೆ. ಜತೆಗೆ ಸಿಬ್ಬಂದಿ ಕೊರತೆಯೂ ಇದೆ. ಹೀಗಿರುವಾಗ ಎಲ್ಲದಕ್ಕೂ ಅಧಿಕಾರಿಗಳನ್ನೇ ಪೂರ್ಣ ಹೊಣೆ ಮಾಡುವುದು ಸರಿಯಲ್ಲ. ಹಾಗಿದ್ದರೆ ಜನಪ್ರತಿನಿಧಿಗಳ ಜವಾಬ್ದಾರಿಯೇನು? ಫ್ಲೆಕ್ಸ್‌, ಬ್ಯಾನರ್‌ಗಳ ಹಾವಳಿಗೆ ಪ್ರಧಾನ ಕಾರಣ ರಾಜಕೀಯ ಪಕ್ಷಗಳು ಮತ್ತು ಆ ಪಕ್ಷಗಳ ಪ್ರತಿನಿಧಿಗಳು. ಪ್ರಧಾನಿ, ಮುಖ್ಯಮಂತ್ರಿಗಳಿಂದ ಹಿಡಿದು, ಶಾಸಕರು, ಸಚಿವರು, ಸಂಸದರು, ವಿವಿಧ ಪಕ್ಷಗಳ ಪ್ರಮುಖರ ಹುಟ್ಟುಹಬ್ಬ, ಭೇಟಿ ಮತ್ತಿತರ ವಿಶೇಷ ಸಂದರ್ಭಗಳಿಗೆ ತಕ್ಕಂತೆ ಸ್ವಾಗತ, ಅಭಿನಂದನೆ ಇತ್ಯಾದಿಗಳ ಹೆಸರಿನಲ್ಲಿ ನಾಯಕರನ್ನು ಓಲೈಸುವ ಗೀಳು, ಫಲಕಗಳ ರೂಪದಲ್ಲಿ ಜಾಹೀರುಗೊಳ್ಳುತ್ತಿದೆ. ಈ ವಿಚಾರದಲ್ಲಿ ಪಕ್ಷಭೇದವೇ ಇಲ್ಲ. ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್‌, ಫ್ಲೆಕ್ಸ್‌ ಹಾಕುವುದು, ಭಿತ್ತಿಪತ್ರ ಅಂಟಿಸುವುದು ದಂಡನಾರ್ಹ ಕೃತ್ಯ. ಆದರೆ ದಂಡನೆಯ ಲವಲೇಶದ ಅಳುಕೂ ಇಲ್ಲದೆ ಈ ಹಾವಳಿ ಅಬಾಧಿತವಾಗಿ ಮುಂದುವರಿ­ದಿದೆ. ಇದರಿಂದ ಪೌರ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಕೈತಪ್ಪುತ್ತಿದೆ. ಬೆಂಗಳೂರಿನಲ್ಲಿ ಅಧಿಕೃತ ಜಾಹೀರಾತು ಫಲಕಗಳ ಸಂಖ್ಯೆ 2,260. ಅದೇ ಅನ­ಧಿಕೃತ ಫಲಕಗಳ ಸಂಖ್ಯೆ 23 ಸಾವಿರ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕರೇ ದೂರಿದ್ದಾರೆ. ಜಾಹೀ­ರಾತು ವಿಭಾಗದಿಂದ ಬಿಬಿಎಂಪಿಗೆ ವಾರ್ಷಿಕ ಸುಮಾರು ₨ 400 ಕೋಟಿ­ಯಷ್ಟು ಆದಾಯ ಸೋರಿಕೆ ಆಗುತ್ತಿದೆ ಎಂಬುದು ಒಂದು ಅಂದಾಜು. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿರುವ ಬಿಬಿಎಂಪಿ ಇಂತಹ ಆದಾಯದ ಮೂಲಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರ ಬಗ್ಗೆ ಏಕೆ ಯೋಚಿಸುತ್ತಿಲ್ಲ? ರಾಜಕೀಯ ಪಕ್ಷಗಳು ಸ್ವಯಂ ಶಿಸ್ತು ರೂಢಿಸಿಕೊಂಡರೆ ಈ ಹಾವಳಿಗೆ ಬಹುಮಟ್ಟಿಗೆ ತಡೆಬೀಳುತ್ತದೆ. ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಹಾಕುವವರ ವಿರುದ್ಧ ಪೌರಾಡಳಿತ ಸಂಸ್ಥೆಗಳು ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಿದರೆ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.