ಸರ್ಕಾರ ಗಮನ ಹರಿಸಲಿ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಮತ್ತು ಹಾಕಿ ಕರ್ನಾಟಕ ನಡುವಣ ಕಿತ್ತಾಟದಿಂದ ರಾಜ್ಯದಲ್ಲಿ ಹಾಕಿ ಕ್ರೀಡೆ ಬಡವಾಗುತ್ತಿದೆ. ಒಂದು ಕಾಲದಲ್ಲಿ ಹತ್ತು ಹಲವು ಅಂತರರಾಷ್ಟ್ರೀಯ ಹಾಕಿ ಆಟಗಾರರನ್ನು ಹೊಂದಿದ್ದ ಕರ್ನಾಟಕದಲ್ಲಿ ಇವತ್ತು ಈ ಕ್ರೀಡೆ ತನ್ನ ಹಿಂದಿನ ಹಿರಿಮೆಯನ್ನು ಕಳೆದುಕೊಂಡಿದೆ. ದಶಕಗಳ ಹಿಂದೆ ಆಟಗಾರರಿಂದ ಸದಾ ಗಿಜಿಗಿಜಿ ಎನ್ನುತ್ತಿದ್ದ ಬೆಳಗಾವಿ, ಗದಗ, ಹುಬ್ಬಳ್ಳಿಗಳಂತಹ ಊರುಗಳ ಹಾಕಿ ಮೈದಾನಗಳು ಇವತ್ತು ಭಣಗುಡುತ್ತಿವೆ. ಹಾಕಿ ವಲಯದಲ್ಲಿ ಇವತ್ತು ಆಟದ ಕುರಿತು ಚರ್ಚೆ ನಡೆಯುವುದಕ್ಕಿಂತ ಹೆಚ್ಚಾಗಿ ಎರಡು ಸಂಸ್ಥೆಗಳ ನಡುವಣ ಹಗ್ಗಜಗ್ಗಾಟದ ಬಗ್ಗೆಯೇ ಹೆಚ್ಚು ಮಾತುಗಳು ಕೇಳಿ ಬರುತ್ತಿವೆ. ಬೆಂಗಳೂರಿನ ಅಕ್ಕಿತಿಮ್ಮನ-ಹಳ್ಳಿ ಹಾಕಿ ಕ್ರೀಡಾಂಗಣದ ಮೇಲೆ ರಾಜ್ಯ ಹಾಕಿ ಸಂಸ್ಥೆ ತನ್ನ ಹಕ್ಕು ಸಾಧಿಸುತ್ತಿದೆ. ಆದರೆ ಅಧಿಕೃತ ರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ರಾಜ್ಯದ ತಂಡಗಳನ್ನು ಆಯ್ಕೆ ಮಾಡುವ ಅಧಿಕಾರ ಹಾಕಿ ಕರ್ನಾಟಕಕ್ಕೆ ಇದೆ. ಹಾಕಿ ಇಂಡಿಯ ಮತ್ತು ಕರ್ನಾಟಕ ರಾಜ್ಯ ಒಲಿಂಪಿಕ್‌ ಸಂಸ್ಥೆಗಳು ಹಾಕಿ ಕರ್ನಾಟಕಕ್ಕೆ ಮಾನ್ಯತೆ ನೀಡಿವೆ. ರಾಜ್ಯ ಹಾಕಿ ಸಂಸ್ಥೆಯವರು ಅಕ್ಕಿತಿಮ್ಮನಹಳ್ಳಿ ಕ್ರೀಡಾಂಗಣದಲ್ಲಿ ನಿತ್ಯವೂ ಲೀಗ್‌ ಪಂದ್ಯಗಳನ್ನು ನಡೆಸುತ್ತಿರುವುದರಿಂದ ತಮ್ಮ ಆಟಗಾರರಿಗೆ ಅನನುಕೂಲವಾಗಿದೆ ಎಂದು ಹಾಕಿ ಕರ್ನಾಟಕ ಅಸಮಾಧಾನ ಹೊರ ಹಾಕಿದೆ. ಈ ನಡುವೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ತಮಗೆ ಅನುಮತಿ ನೀಡಿದೆ ಎಂದು ಉಭಯ ಸಂಸ್ಥೆಗಳೂ ಹೇಳಿಕೊಂಡಿವೆ. ಎರಡೂ ಸಂಸ್ಥೆಗಳ ಆಟಗಾರರು ಏಕಕಾಲದಲ್ಲೇ ಮೈದಾನಕ್ಕಿಳಿದ ಪ್ರಸಂಗ ಉಂಟಾಗಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ಪೊಲೀಸರ ಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು. ಈ ಘಟನೆ ರಾಜ್ಯದ ಹಾಕಿ ಪ್ರತಿಷ್ಠೆಗೆ ಮಸಿ ಬಳಿದಿದೆ. ಹೀಗಾಗಬಾರದಿತ್ತು. ರಾಜ್ಯದ ಹಾಕಿಯಲ್ಲಿ ಇಂತಹದ್ದೊಂದು ಘರ್ಷಣೆ ಏಕಾಏಕಿ ಕಂಡುಬಂದಿದ್ದೇನಲ್ಲ. ರಾಷ್ಟ್ರ ಮಟ್ಟದಲ್ಲಿ ಅಧಿಕೃತ ಹಾಕಿ ಸಂಘಟನೆ ಇಬ್ಭಾಗ-ಗೊಂಡಾಗಲೇ ಇಲ್ಲಿಯೂ ಗುಂಪುಗಾರಿಕೆ ಶುರುವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ಇನ್ನೂ ನಡೆಯುತ್ತಿದೆ. ಇಂತಹ ಸಂದಿಗ್ಧದಲ್ಲಿ ಕರ್ನಾಟಕದ ಮಟ್ಟಿಗೆ ಸರ್ಕಾರವೇ ಮುಂದೆ ನಿಂತು ಆಟಗಾರರಿಗೆ ಅನನುಕೂಲವಾಗದಂತೆ ನೋಡಿಕೊಳ್ಳಬೇಕು. ಅಕ್ಕಿತಿಮ್ಮನಹಳ್ಳಿ ಕ್ರೀಡಾಂಗಣಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಕಿ ಸಂಸ್ಥೆ ತನ್ನ ಮನಸ್ಸಿಗೆ ಬಂದಂತೆ ವರ್ತಿಸುವಂತೇನೂ ಇಲ್ಲ. ಅದರ ಮೇಲೆ ಸರ್ಕಾರಕ್ಕೆ ಹಿಡಿತವೇ ಇಲ್ಲ ಎನ್ನುವುದೂ ಸರಿಯಲ್ಲ. ರಾಜ್ಯದ ಆಟಗಾರರ ಒಳಿತಿಗೆ ಪೂರಕವಾಗುವಂತಹ ದಿಟ್ಟ ಕ್ರಮಗಳನ್ನು ಕ್ರೀಡಾ ಇಲಾಖೆ ಕೈಗೊಳ್ಳಬಹುದಾಗಿದೆ. ಸರ್ಕಾರದ ಸಕಾರಾತ್ಮಕವಾದ ದೃಢ ನಿಲುವಿನಿಂದ ರಾಜ್ಯದಲ್ಲಿ ಹಾಕಿಯ ಏರುಗತಿ ಸಾಧ್ಯವಾದರೆ ಅದಕ್ಕಿಂತ ಸಂತಸದ ವಿಷಯ ಇನ್ನೊಂದಿಲ್ಲ. ಆದರೆ ಇವತ್ತು ಅದು ಆಗುತ್ತಿಲ್ಲ. ಎರಡೂ ಸಂಘಟನೆಗಳ ಆಡಳಿತಗಾರರು ಪರಸ್ಪರ ಕಿತ್ತಾಡುತ್ತಿದ್ದಾರೆ. ಸಂಧಾನದ ಮಾತುಕತೆಗಳೆಲ್ಲಾ ತಾತ್ಕಾಲಿಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈ ತೆರನಾದ ಗುಂಪುಗಾರಿಕೆ ಮತ್ತು ಗೊಂದಲದ ವಾತಾವರಣದಿಂದ ನಮ್ಮಲ್ಲಿ ಹಾಕಿ ಗುಣಮಟ್ಟ ಕುಸಿಯುವ ಅಪಾಯವಿದೆ. ಈ ರೀತಿ ಆಗದಂತೆ ಎಚ್ಚರ ವಹಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.