ಗೊಂದಲ ಬೇಡ ಪುರಾತನ ಕಾಲದಲ್ಲಿ ವಿಜ್ಞಾನದ ಬಗ್ಗೆ ಭಾರತೀಯರಿಗೆ ತಿಳಿಯದ ಸಂಗತಿಯೇ ಇರಲಿಲ್ಲ ಎನ್ನುವಂತಹ ಭಾವನೆಯನ್ನು ಮುಂಬೈನಲ್ಲಿ ನಡೆಯುತ್ತಿರುವ 102ನೇ ‘ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್’ ಸಮಾವೇಶದಲ್ಲಿ ಮೂಡಿಸಲು ಪ್ರಯತ್ನಿಸಲಾಗಿದೆ. ‘ಸಂಸ್ಕೃತದ ಮೂಲಕ ಪ್ರಾಚೀನ ವಿಜ್ಞಾನ’ ಕುರಿತಂತೆ ವಿಶೇಷ ಗೋಷ್ಠಿಯೊಂದನ್ನು ಏರ್ಪಡಿಸಲಾಗಿತ್ತು. ಈ ಗೋಷ್ಠಿಯಲ್ಲಿ ಎಂಟು ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದ್ದಾರೆ. 7000 ವರ್ಷಗಳ ಹಿಂದೆಯೇ ಗ್ರಹಗಳಿಂದ ಗ್ರಹಗಳಿಗೆ ಭಾರಿ ವಿಮಾನಗಳಲ್ಲಿ ಹಾರಾಟ ನಡೆಸಲಾಗುತ್ತಿತ್ತು ಎಂಬಂತಹ ವಿವಾದಾತ್ಮಕ ಮಾತುಗಳು ಇಲ್ಲಿ ಕೇಳಿಬಂದಿವೆ. ಪೈಥಾಗೊರಸ್ ಪ್ರಮೇಯ ಕಂಡು ಹಿಡಿದದ್ದು ಭಾರತೀಯರು. ಆದರೆ ಅದರ ಕೀರ್ತಿ ಸಂದದ್ದು ಗ್ರೀಕರಿಗೆ. ಹಾಗೆಯೇ ‘ಅರಬರಿಗಿಂತ ಮುಂಚೆಯೇ ನಮಗೆ ‘ಬೀಜಗಣಿತ’ ಗೊತ್ತಿದ್ದರೂ ಅದನ್ನು ‘ಆಲ್ಜಿಬ್ರಾ’ ಎಂದು ಕರೆಯಲು ಉದಾರವಾಗಿ ಅವಕಾಶ ಮಾಡಿಕೊಟ್ಟೆವು’ ಎಂಬಂಥ ಮಾತುಗಳನ್ನು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಈ ಬಗೆಯ ಉತ್ಪ್ರೇಕ್ಷಿತ ಪ್ರತಿಪಾದನೆಗಳಿಗೆ ಋಷಿಗಳ ಗ್ರಂಥಗಳಲ್ಲಿ ಆಧಾರಗಳಿವೆ ಎಂದು ಪ್ರತಿಪಾದಿಸಿಕೊಂಡರೂ ಈ ಮಾತುಗಳಿಗೆ ವಾಸ್ತವಾಂಶಗಳ ನೆಲೆಗಟ್ಟುಗಳಿಲ್ಲ. ಇದು ಕೆಲವರಿಗೆ ಸಾಂಸ್ಕೃತಿಕ ಅಭಿ-ಮಾನದ ಸಂಗತಿಯಾಗಿರಬಹುದು. ಆದರೆ ವಿಜ್ಞಾನ ಎನ್ನುವುದು ಹಳವಂಡವಲ್ಲ. ಆವಿಷ್ಕಾರಗಳ ನಡೆ. ಅದು ಮುಂದೆ ಸಾಗುತ್ತಲೇ ಇರಬೇಕು. ನಿಜ. ಭಾರತೀಯರು ದೊಡ್ಡ ಖಗೋಳಶಾಸ್ತ್ರಜ್ಞರಾಗಿದ್ದರು.ಲೋಹ-ವಿಜ್ಞಾನ ಎಂದರೆ ಏನೆಂಬುದೇ ಜಗತ್ತಿಗೆ ಗೊತ್ತಿಲ್ಲದಿದ್ದಾಗ ಭಾರತೀಯರು ಅದರಲ್ಲಿ ಸಾಧನೆ ಮೆರೆದಿದ್ದರು. ಆದರೆ, ಕಾರಣಗಳು ಏನೇ ಇರಲಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ತನ್ನ ಹೆಮ್ಮೆಯ ಸ್ಥಾನವನ್ನು ಈಗ ಕಳೆದುಕೊಂಡಿದೆ. ಆವಿಷ್ಕಾರ ಹಾಗೂ ವೈಜ್ಞಾನಿಕ ಸಂಶೋಧನೆಗಳಲ್ಲಿ ಹೆಚ್ಚಿನ ಪ್ರಗತಿಗಳಾಗಿಲ್ಲ. ದೇಶಿ ಯುದ್ಧವಿಮಾನವನ್ನೇ ನಮಗಿನ್ನೂ ಬಳಕೆಗೆ ತರಲಾಗಿಲ್ಲ. ಸಂಶೋಧನೆ ಹಾಗೂ ಅಭಿವೃದ್ಧಿಗೆ (ಆರ್ ಅಂಡ್ ಡಿ) ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1ಕ್ಕಿಂತ ಕಡಿಮೆ ಹಣ ವಿನಿಯೋಗಿಸಲಾಗುತ್ತಿದೆ ಎಂಬುದು ವಿಷಾದನೀಯ. ‘ವಿಜ್ಞಾನದ ಗಡಿಗಳನ್ನು ವಿಸ್ತರಿಸಬೇಕು’ ಎಂದು ಸಮಾವೇಶದ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ಸರಿಯಾದುದು. ನಾವು ಮಂಗಳ ಗ್ರಹಕ್ಕೆ ಗಗನನೌಕೆ ಕಳಿಸಿದ್ದೇವೆ. ಆದರೆ ವೈಜ್ಞಾನಿಕ ಸಂಶೋಧನೆ ಎಂಬುದು ದಿನನಿತ್ಯದ ಬದುಕಿನ ಅನೇಕ ಕ್ಷೇತ್ರಗಳಿಗೆ ವಿಸ್ತರಿಸಿಕೊಳ್ಳಬೇಕು. ಸೌಲಭ್ಯಗಳು ಹಾಗೂ ತಜ್ಞರ ಕೊರತೆಯಿಂದ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆ ಕುಂಟುತ್ತಿದೆ ಎಂಬುದು ಕಟುವಾಸ್ತವ. ವೈಜ್ಞಾನಿಕ ಪೇಟೆಂಟ್‌ಗಳ ವಿಚಾರದಲ್ಲಿ ಭಾರತ ಹಿಂದುಳಿದಿದೆ. ಮೂಲ ವಿಜ್ಞಾನ ಪದವಿಗೆ ಪ್ರವೇಶ ಪಡೆಯಲು ಯುವವಿದ್ಯಾರ್ಥಿಗಳಿಗೆ ಆಸಕ್ತಿಯೇ ಇಲ್ಲದಂತಹ ಸ್ಥಿತಿ ಇಂದಿನದು. ಈ ಪರಿಸ್ಥಿತಿ ಬದಲಾಗಬೇಕು. ಹಾಗೆಯೇ ವೈಜ್ಞಾನಿಕ ಮನೋಭಾವ ಬಿತ್ತುವುದು ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎಂಬುದನ್ನು ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಹೀಗಿರುವಾಗ, ಪ್ಲಾಸ್ಟಿಕ್ ಸರ್ಜರಿಯಲ್ಲಿ ನಮ್ಮ ಪ್ರಾಚೀನ ಭಾರತ ಸಾಧಿಸಿದ್ದ ಪರಿಣತಿಗೆ ಹಿಂದೂ ದೈವ ಗಣೇಶನೇ ಉದಾಹರಣೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಮೋದಿಯವರು ಹೇಳಿದ ಮಾತು ವಿವಾದಾತ್ಮಕ. ಪುರಾಣಗಳನ್ನು ವಿಜ್ಞಾನದೊಡನೆ ಬೆರೆಸಿ ಗೊಂದಲಗಳನ್ನು ಸೃಷ್ಟಿಸುವುದು ಬೇಡ. ವೈಜ್ಞಾನಿಕ ಪ್ರಗತಿಯತ್ತ ಮುನ್ನಡೆಯಲು ರಾಷ್ಟ್ರವನ್ನು ಸಜ್ಜುಗೊಳಿಸಬೇಕಾದುದು ಇಂದಿನ ಆದ್ಯತೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.