ದಾಳಿ ಖಂಡನೀಯ ಫ್ರಾ ನ್ಸ್‌ನ ವಿಡಂಬನಾತ್ಮಕ ವಾರಪತ್ರಿಕೆ ‘ಚಾರ್ಲಿ ಹೆಬ್ಡೊ’ದ ಪ್ಯಾರಿಸ್ ಪತ್ರಿಕಾ ಕಚೇರಿ ಮೇಲೆ ಮೂವರು ಬಂದೂಕು­ಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 8 ಪತ್ರಕರ್ತರು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ ಹತ್ಯೆಯಾಗಿದ್ದಾರೆ. ಮೂವರು ಶಂಕಿತರಲ್ಲಿ ಒಬ್ಬ ಶರಣಾಗತ­ನಾಗಿದ್ದಾನೆ. ಇದು ‘ಭಯೋತ್ಪಾದಕ ದಾಳಿ’ ಎಂದು ಫ್ರಾನ್ಸ್ ಅಧ್ಯಕ್ಷರು ಹೇಳಿದ್ದಾರೆ. ಫ್ರಾನ್ಸ್‌ನಲ್ಲಿ ಮುಸ್ಲಿಂ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಸಾಮಾಜಿಕ ವಾತಾವರಣವನ್ನು ಹದಗೆಡಿಸುವ ಇಂತಹ ದಾಳಿಗಳು ಖಂಡ­ನಾರ್ಹ. ಇಸ್ಲಾಮಿಕ್ ತೀವ್ರವಾದವೆಂಬುದು ಯುರೋಪಿನಾದ್ಯಂತ ಭದ್ರತಾ ಪಡೆಗಳಿಗೆ ಕೇಂದ್ರ ಕಾಳಜಿಯ ಸಂಗತಿ­ಯಾಗಿರುವ ಸಂದರ್ಭ ಇದು. ಇಂತಹ ಸನ್ನಿವೇಶದಲ್ಲಿ ಈ ದಾಳಿ ನಡೆದಿರು­ವುದು ಕಾಕತಾಳೀಯ. ಇರಾಕ್ ಹಾಗೂ ಸಿರಿಯಾಗಳಲ್ಲಿನ ಜಿಹಾದಿ ಗುಂಪುಗಳಿಗೆ ಸಾವಿರಾರು ಯುರೋಪಿ­ಯನ್ನರು ಸೇರಿಕೊಂಡಿರುವ ಕಾಲಘಟ್ಟ ಇದು. ಹೀಗಾಗಿ ಇಸ್ಲಾಮಿಕ್ ತೀವ್ರ­ವಾದ ಹಾಗೂ ಭಯೋತ್ಪಾದ­ನೆಯ ಆಮದಿನ ಆತಂಕವನ್ನು ಇಂತಹ ದಾಳಿಗಳು ಮತ್ತಷ್ಟು ಹೆಚ್ಚಿಸುತ್ತವೆ. ಫ್ರಾನ್ಸ್‌ನಲ್ಲಿ ಈ ಆತಂಕ ತೀವ್ರವಾ­ಗಿಯೇ ಇದೆ, ಐಎಸ್ಐಎಸ್ ಜಿಹಾದಿಗಳ ವಿರುದ್ಧದ ಅಮೆರಿಕ ನೇತೃತ್ವದ ವಾಯು ದಾಳಿಗಳಿಗೆ ಫ್ರಾನ್ಸ್ ಸರ್ಕಾರವೂ ಬೆಂಬಲ ನೀಡುತ್ತಿರುವುದರಿಂದ ಪ್ರತಿದಾಳಿಗಳ ಕುರಿತಾದ ಭೀತಿಯೂ ಇಲ್ಲಿ ಹೆಚ್ಚಿದೆ. ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಚೋದಕ ವಿಡಂಬನೆ­ಗಳಿಂದಾಗಿ ‘ಚಾರ್ಲಿ ಹೆಬ್ಡೊ’ ವಾರಪತ್ರಿಕೆ ವಿವಾದಗಳನ್ನು ಈ ಹಿಂದೆಯೂ ಸೃಷ್ಟಿಸಿಕೊಂಡಿತ್ತು. ಆದರೆ ರಾಜಕಾರಣಿಗಳು, ಅಧಿಕಾರಶಾಹಿ ಹಾಗೂ ವಿವಿಧ ಧರ್ಮಗಳನ್ನು ಪ್ರಶ್ನಿಸಲು ಅಥವಾ ಲೇವಡಿ ಮಾಡಲು ವಿಡಂಬನೆ­ಯನ್ನು ಸಶಕ್ತವಾಗಿ ಫ್ರೆಂಚ್ ಕ್ರಾಂತಿ ಸಂದರ್ಭದಿಂದಲೂ ಫ್ರಾನ್ಸ್ ನಲ್ಲಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಮರೆಯಲಾಗದು. ಈ ಬಗೆಯ ಹಾಸ್ಯ ಪ್ರಕಾರಕ್ಕೆ ಫ್ರೆಂಚರು ಮತ್ತು ಇತರ ಯುರೋಪಿಯನ್ನರು ಹೊಂದಿ­ಕೊಂಡೂ ಇದ್ದಾರೆ. ‘ಚಾರ್ಲಿ ಹೆಬ್ಡೊ’ ವಾರಪತ್ರಿಕೆಯೂ ಇಂತಹ ಫ್ರೆಂಚ್ ವಿಡಂಬನೆ ಪರಂಪರೆಯ ಮುಂದುವರಿಕೆಯೇ ಆಗಿತ್ತು. ಬಲಪಂಥೀಯ ರಾಜಕಾರಣ, ಬಂಡವಾಳಶಾಹಿ, ಕ್ರೈಸ್ತ ಧರ್ಮ. ಇಸ್ಲಾಂ,ಯಹೂದಿ – ಈ ಎಲ್ಲವೂ ಈ ಪತ್ರಿಕೆಯಲ್ಲಿ ವಿಡಂಬನೆಗಳಿಗೆ ವಸ್ತುಗಳಾಗಿದ್ದವು.ಆದರೆ ಇಂತಹ ವಿಡಂಬನೆ­ಗಳನ್ನು ಚಿಂತನೆಗೆ ಆಹಾರ ಎಂದು ಭಾವಿಸದೆ ಧರ್ಮದ ಅವಹೇಳನ ಎಂದು ಭಾವಿಸುವುದು ಸಮಸ್ಯೆಗೆ ಮೂಲ. ಪ್ರತಿರೋಧ ಹಾಗೂ ಬಹುತ್ವದ ದನಿ­ಗಳನ್ನು ಉಡುಗಿಸಲು ಯತ್ನಿಸುವ ಇಂತಹ ದಾಳಿ­ಗಳು ಖಂಡನೀಯ.ಮತಾಂಧತೆಯ ಜೊತೆಗೆ ಆಧುನಿಕ ಶಸ್ತ್ರಾಸ್ತ್ರಗಳ ಸೇರ್ಪಡೆ, ಸ್ವಾತಂತ್ರ್ಯಕ್ಕೆ ಬೆದರಿಕೆಯನ್ನುಂಟು ಮಾಡುವಂತಹ ಸಂಗತಿಗಳಾಗುತ್ತಿರುವುದು ದುರದೃಷ್ಟ­ಕರ. 2014ರಲ್ಲಿ ವಿಶ್ವದಲ್ಲಿ 61 ಪತ್ರಕರ್ತರ ಹತ್ಯೆಯಾಗಿದೆ. ಹೊಸ ವರ್ಷದ ಆರಂಭದಲ್ಲೇ ಈಗ ಈ ಹತ್ಯೆ, ಫ್ರಾನ್ಸ್ ಕಾಯ್ದುಕೊಂಡು ಬಂದ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಸಿದ ಹಲ್ಲೆಯಾಗಿದೆ. ಪತ್ರಿಕಾ ಕಚೇರಿಯ ಮೇಲೆ ದಾಳಿ ಹಾಗೂ ಪತ್ರಕರ್ತರ ಹತ್ಯೆ, ವೃತ್ತಿಯ ಮೇಲಿನ ದಾಳಿಯಷ್ಟೇ ಅಲ್ಲ, ಪ್ರಜಾಪ್ರಭುತ್ವ ಕುರಿತ ಅರಿವಿನ ಗ್ರಹಿಕೆಗೇ ಬಿದ್ದಂತಹ ದೊಡ್ಡ ಹೊಡೆತವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.