ಕಲಿಕಾ ಬಿಕ್ಕಟ್ಟು ಪರಿಹರಿಸಿ ಗ್ರಾಮೀಣ ಭಾರತದಲ್ಲಿ ಮಕ್ಕಳ ಕಲಿಕಾ ಮಟ್ಟ ಕುಸಿದಿದೆ. ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಷ್ಟೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಹೀಗಿದ್ದೂ ಈ ಕಲಿಕಾ ಮಟ್ಟ ಕುಸಿಯುತ್ತಿರುವುದು ಕಳವಳಕಾರಿ. ಭವಿಷ್ಯದ ಪ್ರಜೆಗಳಿಗೆ ನಾವು ಎಂತಹ ಅಡಿಪಾಯ ಹಾಕುತ್ತಿದ್ದೇವೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಸಾಮಾನ್ಯ­ವಾದ ಲೆಕ್ಕಗಳನ್ನು ಬಿಡಿಸುವುದು ಅಥವಾ ಸರಳ ಇಂಗ್ಲಿಷ್‌ ವಾಕ್ಯ ರಚನೆಗೂ ಬಹುತೇಕ ಮಕ್ಕಳು ತಿಣುಕಾಡುವುದನ್ನು, ಸುಲಲಿತವಾಗಿ ಪಠ್ಯಪುಸ್ತಕ ಓದಲಾಗದ್ದನ್ನು, ಓದಿದರೂ ಸರಿಯಾಗಿ ಗ್ರಹಿಸಲು ಅಸಮರ್ಥರಾಗಿರುವು­ದನ್ನು ಸ್ವಯಂ ಸೇವಾ ಸಂಸ್ಥೆ ‘ಪ್ರಥಮ್‌’ನ 2014ರ ‘ಶಿಕ್ಷಣ ಸ್ಥಿತಿಗತಿ’ ವಾರ್ಷಿಕ ವರದಿ ಬೊಟ್ಟು ಮಾಡಿದೆ. ಇದು ಸಾಲದೆಂಬಂತೆ, ಗಣಿತ ಹಾಗೂ ಇಂಗ್ಲಿಷ್‌ ಕಲಿಕಾ ಸಾಮರ್ಥ್ಯ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮತ್ತಷ್ಟು ಕುಸಿದಿದೆ. ರಾಜ್ಯದ ಸ್ಥಿತಿಗತಿಯಂತೂ ಇನ್ನಷ್ಟು ದಿಗಿಲು ಹುಟ್ಟಿಸು­ವಂತಿದೆ. 8ನೇ ತರಗತಿಯ ಶೇ 37ರಷ್ಟು ಮಕ್ಕಳು ಮಾತ್ರ ಭಾಗಾಕಾರ ಲೆಕ್ಕಗಳನ್ನು ಮಾಡಬಲ್ಲರು, ಶೇ 69ರಷ್ಟು ಮಕ್ಕಳು 10ರಿಂದ 99ರವರೆಗಿನ ಅಂಕಿಗಳನ್ನೂ ಸರಿಯಾಗಿ ಗುರುತಿಸಲಾರರು, 1ರಿಂದ 8ನೇ ತರಗತಿಯ ಬಹುತೇಕ ಮಕ್ಕಳಿಗೆ ಕಳೆಯುವ ಲೆಕ್ಕಗಳೂ ಬಾರದು ಎಂಬಂತಹ ಕಟು ವಾಸ್ತವವನ್ನು ನಾವು ಅರಗಿಸಿಕೊಳ್ಳಬೇಕಾಗಿದೆ. ‘ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ ಸ್ಥಿತಿಗತಿ ಬಿಹಾರಕ್ಕಿಂತ ಕೆಟ್ಟದಾಗಿದೆ’ ಎಂಬ ಅಚ್ಚರಿಯ ಸಂಗತಿಯನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ನಾಲ್ಕು ವರ್ಷಗಳ ಹಿಂದೆ ಬಯಲು ಮಾಡಿದ್ದರು. ನಂತರದ ದಿನಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧನೆಯಾಗಿದೆ ಎಂಬ ನಂಬಿಕೆ ಇದೀಗ ಹುಸಿಯಾಗಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಆಶಾದಾಯಕ ಎನ್ನಬಹುದಾದ ಕೆಲ ಸಂಗತಿಗಳೂ ಇವೆ. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಜಾರಿಯಲ್ಲಿ ರಾಜ್ಯ ಪ್ರಗತಿ ಸಾಧಿಸಿದೆ. ಆದರೆ ಅಷ್ಟಕ್ಕೇ ನಾವು ಖುಷಿಪಡುವಂತಿಲ್ಲ. ಈ ಕಾಯ್ದೆ­ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಖಾಸಗಿ ಶಾಲೆಗಳ ಮೇಲೆ ನಿಗಾ ಇಡಲು ಸರ್ಕಾರ ವಿಫಲವಾಗಿದೆ ಎಂಬಂತಹ ಟೀಕೆಗಳ ಬಗ್ಗೆ ಗಮನ­ಹರಿಸಬೇಕಾಗಿದೆ. ವಿದ್ಯಾರ್ಥಿ-– ಶಿಕ್ಷಕರು, ತರಗತಿ– ಶಿಕ್ಷಕರ ಅನು­ಪಾತ­ದಲ್ಲಿ ಗಮನಾರ್ಹ ಏರಿಕೆ, ಬಳಸಬಹುದಾದ ಶೌಚಾಲಯಗಳ ಸಂಖ್ಯೆ ಹೆಚ್ಚಿರು­ವುದು ಸ್ವಾಗತಾರ್ಹ. ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಏರಿದೆ. ಇದು, ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಬೇಕೆಂಬ ಬೇಡಿಕೆಯ ಪರ ಮತ್ತು ವಿರೋಧ ಚರ್ಚೆಗಳು ಕಾವೇರುತ್ತಿರುವ ಈ ದಿನಗಳಲ್ಲಿ ಪ್ರಮುಖ ಸಂಗತಿ. ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸಿದರೆ ತಾನೇತಾನಾಗಿ ಅವರ ಶೈಕ್ಷಣಿಕ ಪ್ರಗತಿ ಆಗುತ್ತದೆ ಎಂಬ ತಪ್ಪು ಭಾವನೆ ಅನಕ್ಷ­ರ­ಸ್ಥರು, ಕಡಿಮೆ ಕಲಿತ ಪೋಷಕರಲ್ಲಿ ಮಾತ್ರವಲ್ಲದೇ ಅತ್ಯುನ್ನತ ಹುದ್ದೆ­ಗಳಲ್ಲಿರು­ವವರಲ್ಲೂ ಇದೆ. ಖಾಸಗಿ ಶಾಲೆಗಳ ಪಠ್ಯಕ್ರಮಕ್ಕೆ ತಕ್ಕಂತೆ ಮಕ್ಕಳನ್ನು ಓದಿ­ಸುವ ಸಾಮರ್ಥ್ಯ ಕಡಿಮೆ ಕಲಿತವರಿಗೆ ಇರದು, ಮಕ್ಕಳ ಶಿಕ್ಷಣಕ್ಕೆ ಅಗತ್ಯ­ವಾದಷ್ಟು ಸಮಯ ಕೊಡಲು ಕಲಿತವರಿಗೆ ಆಗದು. ಹೀಗಾಗಿ ಕಲಿಕೆಯಲ್ಲಿ ಮಕ್ಕಳ ಹಿಂದುಳಿ­ಯು­ವಿ­ಕೆಗೆ ಎಲ್ಲ ವರ್ಗದ ಪೋಷಕರೂ ಕಾರಣರಾಗುತ್ತಿ­ದ್ದಾರೆ. ಇಂತಹ ಸೂಕ್ಷ್ಮ ಸಮಸ್ಯೆಗಳಿಗೆ ತುರ್ತು ಪರಿಹಾರಗಳನ್ನು ಹುಡುಕದಿ­ದ್ದರೆ, ಕಲಿಕೆಯಲ್ಲಿ ಮುಂದಿ­ರುವ ಮತ್ತು ಹಿಂದುಳಿದಿರುವ ಮಕ್ಕಳ ನಡುವಿನ ಅಂತರ ಹೆಚ್ಚು­ತ್ತಲೇ ಹೋಗುತ್ತದೆ. ಸಾಮಾಜಿಕವಾಗಿ ಇದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.