ರಾಜಕೀಯ ಬೇಡ ಕೇಂದ್ರ ಸರ್ಕಾರದ ಹಸ್ತಕ್ಷೇಪ ಪ್ರತಿಭಟಿಸಿ ಕೇಂದ್ರೀಯ ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್ ರಾಜೀನಾಮೆ ನೀಡಿದ್ದಾರೆ. ಲೀಲಾ ಅವರಿಗೆ ಬೆಂಬಲ ನೀಡಿ ಮಂಡಳಿಯ 12 ಸದ­ಸ್ಯರು ಸಾಮೂಹಿಕ ರಾಜೀನಾಮೆ ನೀಡಿದ ಬೆಳವಣಿಗೆಯಾಗಿದೆ. ‘ಡೇರಾ ಸಚ್ಚಾ ಸೌದಾ’ ಮುಖ್ಯಸ್ಥ ಗುರ್‌ಮೀತ್ ರಾಮ್ ರಹೀಮ್ ಸಿಂಗ್ ಮುಖ್ಯ ಪಾತ್ರದಲ್ಲಿರುವ ‘ಎಂಎಸ್‌ಜಿ: ದಿ ಮೆಸೆಂಜರ್ ಆಫ್ ಗಾಡ್’ ಹಿಂದಿ ಚಿತ್ರಕ್ಕೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಮಂಡಳಿ ಹಸಿರು ನಿಶಾನೆ ತೋರಿದ್ದು ಇದಕ್ಕೆ ಕಾರಣ. ಸಾರ್ವಜನಿಕ ಪ್ರದರ್ಶನಕ್ಕಾಗಿ ಈ ಚಿತ್ರಕ್ಕೆ ಅನುಮತಿ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿತ್ತು. ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಡೇರಾ ಸಚ್ಚಾ ಸೌದಾದ ಮುಖಂಡ ನನ್ನು ಪವಾಡಪುರುಷನಂತೆ ಚಿತ್ರದಲ್ಲಿ ಬಿಂಬಿಸಿರು­ವುದು ವಿವಾದದ ಕೇಂದ್ರಬಿಂದುವಾಗಿದೆ. ಇಂತಹ ವೈಭವೀಕರಣ ಅವರ ಅನುಯಾಯಿಗಳು ಹಾಗೂ ಸಿಖ್ಖರ ಕೆಲವು ಪಂಥಗಳ ನಡುವೆ ಸಂಘರ್ಷಕ್ಕೆ ಕಾರಣ­ವಾಗಬಹುದು ಎಂಬ ಕಾರಣವನ್ನು ನೀಡಿ ಅನುಮತಿ ನಿರಾಕರಿಸಲಾ­ಗಿತ್ತು. ಹೀಗಿದ್ದೂ ‘ಎಂಎಸ್‌ಜಿ’ಗೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಮಂಡಳಿ ಅನುಮತಿ ನೀಡಿದೆ. ಅದೂ ಚಿತ್ರವೊಂದಕ್ಕೆ ಅನುಮತಿ ನೀಡಲು ನ್ಯಾಯಮಂಡಳಿ ಸಾಮಾನ್ಯವಾಗಿ 15ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಕೇವಲ 24 ಗಂಟೆಗಳಲ್ಲಿ ಈ ಚಿತ್ರಕ್ಕೆ ಅನುಮತಿ ನೀಡಲಾಗಿದೆ ಎಂಬುದು ಚರ್ಚಾಸ್ಪದ. ಇಂತಹ ವಿಚಾರಗಳ ಬಗ್ಗೆ ಮೇಲ್ನೋ­ಟದ ಮೌಲ್ಯಮಾಪನವನ್ನೂ ನಡೆಸದೆ ರಕ್ಷಣಾತ್ಮಕವಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರತಿಕ್ರಿಯಿಸಿರುವುದು ಸರಿಯಲ್ಲ. ನ್ಯಾಯಮಂಡಳಿಯ ನಿರ್ಧಾರದಲ್ಲಿ ರಾಜಕೀಯ ಛಾಯೆಗಳಿವೆ ಎಂಬಂಥ ಸಾರ್ವಜನಿಕ ಶಂಕೆಗಳು ಪರಿಹಾರವಾಗಬೇಕು. ಪಂಜಾಬ್‌ನಲ್ಲಿರುವ ಅಕಾಲಿ ದಳ ಸರ್ಕಾರದ ಜೊತೆ ಬಿಜೆಪಿ ಬಾಂಧವ್ಯ ಅಷ್ಟೇನೂ ಹಿತಕರವಾಗಿಲ್ಲದಿರುವುದರಿಂದ ಡೇರಾ ಸಚ್ಚಾ ಸೌದಾ ಮುಖಂಡ­ನನ್ನು ಒಲಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ ಎಂಬಂಥ ಮಾತುಗಳಿವೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಈ ದೇವ­ಮಾನ­ವನ ಬೆಂಬಲ ಬಿಜೆಪಿಗೆ ನೆರವಾಗಿತ್ತು. ಅಲ್ಲದೆ ಸ್ವತಃ ಸೆನ್ಸಾರ್ ಮಂಡ­ಳಿಯ ಸಿಇಒ ರಾಕೇಶ್‌ಕುಮಾರ್ ಅವರೂ ಕಳೆದ ಆಗಸ್ಟ್‌ನಲ್ಲಿ ಪ್ರಾದೇಶಿಕ ಚಿತ್ರಕ್ಕೆ ಅನುಮತಿ ನೀಡಲು ₨70,000 ಲಂಚಕ್ಕೆ ಒತ್ತಾಯಿಸಿದ ಆರೋಪ­ದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ರಾಕೇಶ್‌ಕುಮಾರ್ ಅವರು 1997ರ ತಂಡದ ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ ಅಧಿಕಾರಿಯಾಗಿದ್ದಾರೆ. ಸಿನಿಮಾ ಬಗ್ಗೆ ತಿಳಿವಳಿಕೆ ಅಥವಾ ಸರಿಯಾದ ಹಿನ್ನೆಲೆಯೇ ಇಲ್ಲದವರು ಸೆನ್ಸಾರ್ ಮಂಡಳಿ ಸದಸ್ಯ ಅಥವಾ ಸಿಇಒ ಆಗುವುದು ಎಷ್ಟು ಸರಿ ಎಂಬಂಥ ಪ್ರಶ್ನೆಗಳೂ ಇಲ್ಲಿವೆ. ‘ಸಿಇಒ, ಭ್ರಷ್ಟ ಸದಸ್ಯರು ಹಾಗೂ ಸಚಿವಾಲಯದ ಹಸ್ತಕ್ಷೇಪಗಳಿಂದ ಸೆನ್ಸಾರ್ ಮಂಡಳಿ ಪ್ರತಿಪಾದಿಸಿಕೊಂಡು ಬಂದಿದ್ದ ಮೌಲ್ಯ­ಗಳಿಗೆ ಧಕ್ಕೆಯಾಗಿದೆ’ ಎಂದು ಲೀಲಾ ಸ್ಯಾಮ್ಸನ್ ನೇರ ಆರೋಪ ಮಾಡಿ­ದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ನೇಮಕಗೊಂಡಿದ್ದವರು ಎತ್ತಿದ ಆರೋಪ­ಗಳಿವು ಎಂದು ಇವನ್ನು ಹಗುರವಾಗಿ ತಳ್ಳಿಹಾಕಬಾರದು. ಹಾಗೆಯೇ ಲೀಲಾ ಹಾಗೂ ಇತರ ಸದಸ್ಯರ ಅವಧಿ 2014ರ ಏಪ್ರಿಲ್‌ನಲ್ಲೇ ಮುಕ್ತಾಯವಾಗಿದೆ. ಈಗ ಮಂಡಳಿಗೆ ಹೊಸ ಸದಸ್ಯರನ್ನು ಪಾರದರ್ಶಕ­ವಾಗಿ ಆಯ್ಕೆಮಾಡಬೇಕು. ಸೆನ್ಸಾರ್ ಮಂಡಳಿ ಹೆಚ್ಚು ಸ್ವಾತಂತ್ರ್ಯ ಹಾಗೂ ಸ್ವಾಯತ್ತತೆಯಿಂದ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.