ಸೃಜನಶೀಲತೆಗೆ ಕುತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಗಳು ಹೆಚ್ಚುತ್ತಿವೆ ಎನ್ನುವುದಕ್ಕೆ ತಮಿಳು ಕಾದಂಬರಿಕಾರ ಪೆರುಮಾಳ್ ಮುರುಗನ್‌ ಅವರ ಪ್ರಕರಣ ಹೊಸ ಉದಾ­ಹರಣೆ. ಮುರುಗನ್‌ ಅವರು 2010ರಲ್ಲಿ ತಮಿಳಿನಲ್ಲಿ ಪ್ರಕಟಿಸಿದ ‘ಮಾಧೊರುಬಾಗನ್‌’ ಎನ್ನುವ ಕಾದಂಬರಿ, ಇತ್ತೀಚೆಗೆ ಇಂಗ್ಲಿಷ್‌ಗೆ ಅನುವಾದ­ವಾಗಿದೆ. ತಮಿಳಿನಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಪ್ರಕಟವಾದ ಈ ಕಾದಂ­ಬರಿಗೆ ಯಾವ ವಿರೋಧವೂ ವ್ಯಕ್ತವಾಗಿರಲಿಲ್ಲ. ಆದರೆ ಈ ಕಾದಂಬರಿಯ ಇಂಗ್ಲಿಷ್ ಅನುವಾದ ಪ್ರಕಟವಾದ ನಂತರ ಎದುರಾಗಿರುವ ವಿರೋಧದ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎನ್ನುವುದು ಸುವ್ಯಕ್ತ. ಮಕ್ಕಳಾಗದ ಮಹಿಳೆಯರು ತಮಿಳುನಾಡಿನ ದೇವಾಲಯ­ವೊಂದರ ಉತ್ಸವದಲ್ಲಿ ಪರ­ಪುರುಷ­ರೊಡನೆ ಕೂಡುವ ಆಚರಣೆಯನ್ನು ಕೇಂದ್ರವಸ್ತುವಾಗಿಟ್ಟುಕೊಂಡು ಈ ಕಾದಂಬರಿಯನ್ನು ಬರೆಯಲಾಗಿದೆ. ಬಲಪಂಥೀಯ ಹಿಂದೂ ಸಂಘಟನೆ­ಗಳು ಮತ್ತು ಜಾತಿ ಸಂಘಟನೆಯೊಂದು ಈ ಕಾದಂಬರಿಕಾರನ ವಿರುದ್ಧ ಪ್ರತಿಭಟನೆ ನಡೆಸಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೆ ಲೇಖಕನನ್ನು ಕರೆಸಿ ಕ್ಷಮಾ­ಪಣೆ ಬರೆಸಿಕೊಳ್ಳಲಾಗಿದೆ. ಜತೆಗೇ ಕಾದಂಬರಿಯ ಕೆಲವು ಭಾಗಗಳನ್ನು ಕಿತ್ತು ಹಾಕುವ ಮತ್ತು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ ಪ್ರತಿಗಳನ್ನು ಹಿಂತೆಗೆದು­ಕೊ­ಳ್ಳುವ ಒಪ್ಪಂದಕ್ಕೂ ಕಾದಂಬರಿಕಾರನ ಸಹಿ ಪಡೆಯಲಾಗಿದೆ. 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಸ್ಥಳೀಯ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ತಮ್ಮ ಕೃತಿ­ಗಳ ಮೂಲಕ ಅಪಾರ ಕೊಡುಗೆ ನೀಡಿರುವ ಹಿರಿಯ, ಸೃಜನಶೀಲ ಲೇಖಕ­ನೊಬ್ಬನಿಗೆ ಮಾಡಿರುವ ಘೋರ ಅವಮಾನವಿದು. ಕೆಲವೇ ಜನರು ಪೂರ್ವ­ಯೋಜಿತವಾಗಿ ರೂಪಿಸಿರುವ ಈ ಪ್ರತಿಭಟನೆಯ ಹಿಂದೆ ರಾಜಕೀಯ ದುರುದ್ದೇಶಗಳಿವೆ ಎನ್ನುವುದು ಸ್ಪಷ್ಟ. ದೇವಾಲಯದ ಉತ್ಸವದಲ್ಲಿ ನಡೆಯುವ ಈ ಕಟ್ಟುಪಾಡು ಒಂದು ಸಾಮಾಜಿಕ ಪಿಡುಗೇ ಸರಿ. ಇದನ್ನು ಕಾದಂಬರಿಯಲ್ಲಿ ಚಿತ್ರಿಸುವ ಮೂಲಕ ಮುರುಗನ್‌, ಸಮಾಜಕ್ಕೆ ಒಳಿತೇ ಮಾಡಿದ್ದಾರೆ. ಉತ್ಸವದ ಕುರುಡು ನಂಬಿಕೆಯ ಮೂಲಕ ಮಹಿಳೆಯರ ಶೋಷಣೆ ನಡೆಯುವುದನ್ನು ತಪ್ಪಿಸುವ ಬದಲು, ಜಿಲ್ಲಾಡಳಿತ ಪ್ರತಿಭಟನೆಕಾರರ ಪರವಾಗಿ ನಿಂತಿರುವುದು ಅಕ್ಷಮ್ಯ. ಮುರುಗನ್‌ ಅವರು ಸಂಸಾರ ಸಮೇತ ಊರನ್ನೇ ತ್ಯಜಿಸಿರುವುದು ನೋಡಿ­ದರೆ, ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ತಮ್ಮ ಭಾವನೆಗಳಿಗೆ ನೋವಾ­ಗಿದೆ ಎಂಬ ನೆಪವೊಡ್ಡಿ ಲೇಖಕರ ವಿರುದ್ಧ ಬಲಪಂಥೀಯರು ಮುಗಿಬೀಳುವ ಪ್ರವೃತ್ತಿ ಇತ್ತೀಚೆಗೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ. ಪ್ಯಾರಿಸ್‌ನಲ್ಲಿ ‘ಚಾರ್ಲಿ ಹೆಬ್ಡೊ’ ಪತ್ರಿಕೆಯ ಮೇಲೆ ನಡೆಸಿದ ದಾಳಿಗೂ, ತಮಿಳುನಾಡಿನಲ್ಲಿ ಈ ಲೇಖಕನ ವಿರುದ್ಧದ ದಾಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸೃಜನಶೀಲ ಬರಹಗಾರರಿಗೆ ರಕ್ಷಣೆ ಕೊಡಬೇಕಾದ ಜಿಲ್ಲಾಡಳಿತವೇ, ಬರಹಗಾರನ ಸ್ವಾತಂತ್ರ್ಯಹರಣಕ್ಕೆ ಕೈಜೋಡಿ­ಸಿರುವುದು ವಿಷಾದನೀಯ. ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿ­ತಿರು­ವುದು ನಾಚಿಕೆಗೇಡು. ‘ಈ ಲೇಖಕ ಸತ್ತಿದ್ದಾನೆ. ಅವನ ಪುಸ್ತಕ­ಗಳೆ­ಲ್ಲ­ವನ್ನೂ ಹಿಂತೆಗೆದುಕೊಳ್ಳಲಾಗಿದೆ. ದಯವಿಟ್ಟು ಅವನನ್ನು ಅವನಷ್ಟಕ್ಕೇ ಬಿಟ್ಟು­ಬಿಡಿ’ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿರುವ ಲೇಖಕ ಮುರುಗನ್‌ ಅವರ ಸಂವಿಧಾನದತ್ತ ಹಕ್ಕುಗಳ ರಕ್ಷಣೆಗೆ ಪ್ರಜ್ಞಾ­ವಂತರೆಲ್ಲರೂ ತಕ್ಷಣ ಮುಂದಾಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.