‘ತೇಜಸ್‌’ ತೇಜಸ್ಸು ದೇಶಿನಿರ್ಮಿತ ಅತ್ಯಾಧುನಿಕ ಲಘು ಯುದ್ಧ ವಿಮಾನ ‘ತೇಜಸ್‌ ಭಾರತೀಯ ವಾಯುಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಯಾಗಿದೆ. 1983ರಲ್ಲಿ ಈ ಯೋಜನೆ ಘೋಷಣೆಯಾಯಿತು. 32 ವರ್ಷಗಳ ನಂತರ, ಅಂತೂ ಸತತ ಪರಿಶ್ರಮಕ್ಕೆ ಮೊದಲ ಯಶಸ್ಸು ಸಿಕ್ಕಂತಾಗಿದೆ. ಈ ಮೂಲಕ ಯುದ್ಧ ವಿಮಾನಗಳ ಸಂಕೀರ್ಣ ತಂತ್ರಜ್ಞಾನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ವಿಶ್ವಕ್ಕೆ ತೋರಿಸಲಾಗಿದೆ ಎಂಬುದು ವಿಜ್ಞಾನಿಗಳ ಪ್ರತಿಪಾದನೆ. ಆದರೆ ಈ ಯುದ್ಧ ವಿಮಾನದ ಎಂಜಿನ್ ಹಾಗೂ ಇತರ ಕೆಲವು ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಹೀಗಿದ್ದೂ ವಾಯು­ಪಡೆಗೆ ‘ತೇಜಸ್’ ಸೇರ್ಪಡೆ ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿ ಹೊಸ­ದೊಂದು ಮೈಲುಗಲ್ಲು. 32 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಸಾಧ್ಯವಾದ ಯಶಸ್ಸು ಇದು. 2018ರೊಳಗೆ ಭಾರತೀಯ ವಾಯು­ಪಡೆಗೆ 20 ತೇಜಸ್ ಲಘು ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಭಾರತೀಯ ವಾಯುಪಡೆ­ಯಲ್ಲಿ ಹಳತಾಗಿರುವ ರಷ್ಯಾ ನಿರ್ಮಿತ ಮಿಗ್ ವಿಮಾನ­ಗಳ ಸ್ಥಾನವನ್ನು ಈ ಲಘು ಯುದ್ಧ ವಿಮಾನಗಳು ತುಂಬಲಿವೆ. ರಷ್ಯಾ ನಿರ್ಮಿತ ಮಿಗ್‌ 21 ವಿಮಾನ­ಗಳು ಸುಮಾರು ಐದು ದಶಕಗಳ ಕಾಲ ವಾಯುಪಡೆಗೆ ಒತ್ತಾಸೆ­ಯಾಗಿ ನಿಂತಿದ್ದವಲ್ಲದೆ, ಭಾರತ-– ಪಾಕಿಸ್ತಾನ ಮತ್ತು ಕಾರ್ಗಿಲ್‌ ಕದನದಲ್ಲಿ ನಿರ್ಣಾ­ಯಕ ಪಾತ್ರ ವಹಿಸಿದ್ದವು. ಆದರೆ ನಿರ್ವಹಣೆಯಲ್ಲಿನ ತೊಡಕು­ಗಳಿಂದ ಪದೇ ಪದೇ ಅಪಘಾತಕ್ಕೆ ಈಡಾಗುತ್ತಾ, ಸುಮಾರು 170 ಪೈಲಟ್‌­ಗಳು ಮತ್ತು ಕೆಲವು ನಾಗರಿಕರನ್ನು ಬಲಿ ತೆಗೆದುಕೊಂಡು ‘ಹಾರುವ ಶವ­ಪೆಟ್ಟಿಗೆ’ ಎಂಬ ಕುಖ್ಯಾತಿಗೆ ಒಳಗಾಗಿದ್ದವು. ಹೀಗಾಗಿ ಈ ವಿಮಾನಗಳನ್ನು ಕೈ­ಬಿಡದೇ ವಾಯುಪಡೆಗೆ ವಿಧಿಯಿಲ್ಲದಂತಾಯಿತು. ಆಗ, ಕುಂಟುತ್ತಾ ಸಾಗಿದ್ದ ‘ತೇಜಸ್‌’ ಯೋಜನೆಗೆ ತ್ವರಿತ ಚಾಲನೆ ಸಿಕ್ಕಿ ಮೂರು ದಶಕಗಳ ಕನಸಿನ ಯೋಜನೆ ಸಾಕಾರಗೊಳ್ಳುವಂತಾಯಿತು. ಹಲವು ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನೆರವಿನೊಂದಿಗೆ ಎಚ್‌ಎಎಲ್‌ ಹಾಗೂ ಡಿಆರ್‌ಡಿಒ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ತೇಜಸ್‌’ ಯೋಜನೆಗೆ ಸುಮಾರು ₨ 25 ಸಾವಿರ ಕೋಟಿ ವ್ಯಯವಾಗಿದೆ. ಇಂತಹ ಮಾಹಿತಿ ನಮ್ಮನ್ನು ಪುಳಕಿತಗೊಳಿಸುತ್ತ­ದಾ­ದರೂ ಈ ಸಾಧನೆಯ ಹಾದಿಯಲ್ಲಿ ದೇಶ ನಾನಾ ಸವಾಲುಗಳನ್ನು ಎದುರಿಸಿ­ದ್ದನ್ನು ಮರೆಯುವಂತಿಲ್ಲ. ಪೊಖ್ರಾನ್‌ ಅಣು ಪರೀಕ್ಷೆಯ ನಂತರ ಭಾರತಕ್ಕೆ ಯಾವುದೇ ತಂತ್ರಜ್ಞಾನ ವರ್ಗಾಯಿಸದಂತೆ ಅಮೆರಿಕ ದಿಗ್ಬಂಧನ ಹೇರಿತ್ತು. ಅಂತಹ ಸ್ಥಿತಿಯಲ್ಲೂ ಅತ್ಯಾಧುನಿಕ ಡಿಜಿಟಲ್‌ ತಂತ್ರಜ್ಞಾನವನ್ನು ಅಭಿ­ವೃದ್ಧಿ­ಪಡಿಸಿದ್ದಲ್ಲದೆ, ಅದರ ಉನ್ನತೀಕರಣಕ್ಕೂ ಅವಕಾಶ ಕಲ್ಪಿಸಿರುವ ‘ತೇಜಸ್‌’ನ ನಿರ್ಮಾತೃಗಳ ಪರಿಶ್ರಮ ಶ್ಲಾಘನೀಯ. ಪರೀಕ್ಷಾರ್ಥ ಹಾರಾಟ ಅನುಮತಿ ಪಡೆಯುವಾಗ ಕಂಡುಬಂದ ಕುಂದುಕೊರತೆಗಳನ್ನೆಲ್ಲ ನಿವಾರಿಸಿ­ಕೊಂಡು ಸರ್ವಸನ್ನದ್ಧವಾಗಿರುವ ‘ತೇಜಸ್‌’ನ ಕ್ಷಮತೆ ಯಾವ ಯುದ್ಧ ವಿಮಾನ­ಕ್ಕಿಂ­ತಲೂ ಕಡಿಮೆಯಿಲ್ಲ. ಶಕ್ತಿಶಾಲಿ ಎಂಜಿನ್‌, ಎಲ್ಲ ಬಗೆಯ ಶಸ್ತ್ರಾಸ್ತ್ರ ಬಳಕೆಯ ತಾಕತ್ತು, ದೂರಗಾಮಿ ರಾಕೆಟ್‌ ಬಳಕೆ, ಹಾರಾಡು­ವಾ­ಗಲೇ ಇಂಧನ ತುಂಬಿ­ಸಿ­ಕೊಳ್ಳುವ ಅವಕಾಶ, ಆಕಾಶ– ಭೂಮಿ– ಸಮುದ್ರ­ದೆಡೆಗೆ ಮುನ್ನುಗ್ಗ­ಬಲ್ಲ ವಿನ್ಯಾಸ, ರಾತ್ರಿ ವೇಳೆ ಮತ್ತು ಸರ್ವ ಋತುಗಳಲ್ಲೂ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಅದಕ್ಕಿದೆ. ತಾಸಿಗೆ 1948 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿ­ಸುತ್ತಾ 3 ಸಾವಿರ ಕೆ.ಜಿ. ಶಸ್ತ್ರಾಸ್ತ್ರಗಳನ್ನು ಅದು ಹೊತ್ತೊಯ್ಯ­ಬಲ್ಲದು. ಸಂಸತ್‌ ಮೇಲಿನ ದಾಳಿ, ಮುಂಬೈ ದಾಳಿಯಂತಹ ಘಟನೆಗಳ ಜೊತೆಗೆ, ನೆರೆ­ಹೊರೆಯ ರಾಷ್ಟ್ರಗಳಿಂದ ಪದೇ ಪದೇ ಎದುರಾ­ಗು­ತ್ತಿ­ರುವ ನಾನಾ ಬಗೆಯ ಆತಂಕಗಳಿಂದ ದೇಶದ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿ­ಕೊಳ್ಳುವಲ್ಲಿ ಈ ವಿಮಾನ­ಗಳು ಮಹತ್ವದ ಪಾತ್ರ ವಹಿಸಲಿವೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್‌ ಇನ್‌ ಇಂಡಿಯಾ’ ಆಕಾಂಕ್ಷೆಗೆ ತಕ್ಕಂತೆ ಸ್ವಾವ­ಲಂಬನೆಯ ಸಾಧನೆಗೂ ಪೂರಕ­ವಾಗಿವೆ. ಸಂಶೋಧನೆ ಹಾಗೂ ತಂತ್ರ­ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಇನ್ನೂ ಹೆಚ್ಚಿನ ಆವಿಷ್ಕಾರಗಳಿಗೆ ಅವಕಾಶವಾಗುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.