ಕೆರೆಗಳನ್ನು ಉಳಿಸಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಒಡಲಲ್ಲಿ ಅದೆಷ್ಟು ಕೆರೆಗಳು ಕರಗಿಹೋಗಿವೆಯೊ? ಕೆರೆಗಳ ಅಂಗಳ­ದಲ್ಲಿ ಗಗನಚುಂಬಿ ಕಟ್ಟಡಗಳು, ಬಸ್‌ ನಿಲ್ದಾಣ, ಕ್ರೀಡಾಂಗಣ, ಮಾರು­ಕಟ್ಟೆ ಮುಂತಾದವುಗಳು ತಲೆಎತ್ತಿವೆ. ಕೆರೆಗಳು ಇರುವುದೇ ಕಬಳಿಸಲು ಎಂಬಂತಾಗಿದೆ ನಮ್ಮ ಮನೋಧರ್ಮ. ಒತ್ತುವರಿಯಲ್ಲಿ ರಿಯಲ್‌ ಎಸ್ಟೇಟ್‌ ಕುಳಗಳು, ಪ್ರಭಾವಿಗಳ ಪಾಲು ದೊಡ್ಡದು. ಆದರೆ ಕೆರೆಗಳ ರಕ್ಷಣೆಗೆ ಕೈಜೋಡಿಸಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೂ (ಬಿಡಿಎ) ಒತ್ತುವರಿಯ ಈ ಜಾಡ್ಯ ಸೋಕಿರುವುದು ವಿಪರ್ಯಾಸದ ಸಂಗತಿ. ಬೆಂಗ­ಳೂರು ಹೊರವಲಯದ ಗುಬ್ಬಲಾಳ ಗ್ರಾಮದ ವೆಂಕಟರಾಯನ ಕೆರೆಯ ಒಂದು ಭಾಗವನ್ನು ಬಿಡಿಎ ಒತ್ತುವರಿ ಮಾಡಿಕೊಂಡಿದ್ದಲ್ಲದೆ ಅಲ್ಲಿ 118 ನಿವೇಶನ­ಗಳನ್ನೂ ಹಂಚಿಕೆ ಮಾಡಿದೆ. ಇದು ಅಕ್ಷಮ್ಯ. ಬೇಲಿಯೇ ಎದ್ದು ಹೊಲ ಮೇಯುವುದು ಎಂದರೆ ಬಹುಶಃ ಇದೇ ಇರಬೇಕು. ಕೆರೆ ಅತಿ­ಕ್ರಮಣದ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದ ಈ ಒತ್ತುವರಿ ಬೆಳಕು ಕಂಡಿದೆ. ಇಲ್ಲದೇ ಹೋಗಿದ್ದರೆ ಬೆಂಗಳೂರಿನ ಮತ್ತೊಂದು ಕೆರೆ ನೆನಪಿನ ಕೋಶ ಸೇರುತ್ತಿತ್ತು. ಅಭಿವೃದ್ಧಿ ಪ್ರಾಧಿಕಾರವೇ ಕೆರೆ ನುಂಗಲು ಹೊರಟರೆ ಇನ್ನು ಕಾಯುವವರು ಯಾರು? ಒಂದು ಕಾಲದಲ್ಲಿ ಕೆರೆಗಳಿಂದ ಕಂಗೊಳಿಸುತ್ತಿದ್ದ ನಗರ ಈಗ ಕಾಂಕ್ರೀಟ್‌ ಕಾಡಾಗಿದೆ. ಮಳೆ ನೀರನ್ನು ಒಡಲಲ್ಲಿ ತುಂಬಿಸಿಕೊಳ್ಳುತ್ತಿದ್ದ ಕೆರೆಗಳು ಕಾಣೆ­ಯಾಗಿರುವುದರಿಂದ ನಗರದಲ್ಲಿ ಒಂದು ಜೋರು ಮಳೆ ಬಿದ್ದರೂ ರಸ್ತೆಗಳು ಜಲಾವೃತವಾಗುತ್ತವೆ. ಚರಂಡಿಗಳು ಉಕ್ಕೇರುತ್ತವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಧರ್ಮಾಂಬುಧಿ ಕೆರೆಯಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣ ತಲೆ ಎತ್ತಿದೆ. ಸಂಪಂಗಿ ಕೆರೆಯನ್ನು ಕಂಠೀರವ ಕ್ರೀಡಾಂಗಣ ನುಂಗಿದೆ. ಅಕ್ಕಿತಿಮ್ಮನಹಳ್ಳಿ ಕೆರೆಯಲ್ಲಿ ಹಾಕಿ ಕ್ರೀಡಾಂಗಣ ಬಂದಿದೆ. ಕೋರಮಂಗಲ ಕೆರೆಯಲ್ಲಿ ರಾಷ್ಟ್ರೀಯ ಕ್ರೀಡಾ ಗ್ರಾಮ ನಿರ್ಮಾಣವಾಗಿದೆ. ನಗರದ ಪ್ರಮುಖ ಕೆರೆಗಳೆಲ್ಲ ಹೀಗೆ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗಿವೆ. ಅಳಿದುಳಿದ ಕೆಲವೇ ಕೆರೆಗಳನ್ನಾದರೂ ಜತನದಿಂದ ಕಾಪಾಡಿಕೊಳ್ಳದಿದ್ದರೆ ನಗರದ ಬದುಕು ಮತ್ತಷ್ಟು ಅಸಹನೀಯ ಆಗುವುದರಲ್ಲಿ ಅನುಮಾನವೇ ಇಲ್ಲ. ವೆಂಕಟರಾಯನ ಕೆರೆಯಲ್ಲಿ ಬಿಡಿಎ ಹಂಚಿಕೆ ಮಾಡಿರುವ ನಿವೇಶನ­ಗಳಲ್ಲಿ 18 ಮನೆಗಳೂ ನಿರ್ಮಾಣವಾಗಿವೆ ಎಂದು ವರದಿಯಾಗಿದೆ. ದುಡಿ­ಮೆಯ ಅಷ್ಟೂ ಹಣ ಸುರಿದು ಮನೆ ಕಟ್ಟಿಕೊಂಡ ಕುಟುಂಬಗಳ ಪಾಡು ಈಗ ಏನಾಗಬೇಕು? ಬೆಂಗಳೂರಿನಲ್ಲಿ ನಿವೇಶನ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ. ಬಿಡಿಎ ತಪ್ಪಿಗೆ ಅಲ್ಲಿ ನಿವೇಶನ ಪಡೆದವರೆಲ್ಲ ಈಗ ಪರಿತಪಿಸುವಂತಾಗಿದೆ. ಇವರೆಲ್ಲರ ಹಿತ ಕಾಯುವುದು ಬಿಡಿಎ ಕರ್ತವ್ಯ. ಬಿಡಿಎ ಅಕ್ರಮವಾಗಿ ಇಲ್ಲಿ ಬಡಾವಣೆ ನಿರ್ಮಿಸಿದ್ದು ಹೇಗೆ? ಇದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮುಂದೆ ಈ ಚಾಳಿ ಮರುಕಳಿಸದಂತೆ ಎಚ್ಚರ ವಹಿಸಬೇಕು. ಕೆರೆಗಳ ಸಂರಕ್ಷಣೆಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಅದರಿಂದ ಪ್ರಯೋಜನ ಆದಂತಿಲ್ಲ. ಚರಂಡಿ ನೀರು ನೇರವಾಗಿ ಕೆರೆಗಳ ಒಡಲು ಸೇರುತ್ತದೆ. ಬಹುಪಾಲು ಕೆರೆಗಳು ನಿರ್ವಹಣೆ ಕೊರತೆಯಿಂದ ಸೊರಗಿವೆ. ಈ ದುರವಸ್ಥೆಗೆ ಬಿಬಿಎಂಪಿ ಮತ್ತು ಬಿಡಿಎ ಹೊಣೆಗೇಡಿ ಧೋರಣೆಯೇ ಪ್ರಮುಖ ಕಾರಣ. ಉಳಿದ ಕೆರೆಗಳನ್ನು ಸುಸ್ಥಿತಿಯಲ್ಲಿಡಲು ಸರ್ಕಾರ ಇನ್ನಾದರೂ ಕಟಿಬದ್ಧವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.