ಹೊಣೆಗಾರಿಕೆ ಪ್ರದರ್ಶಿಸಿ ಭಯೋತ್ಪಾದನೆ ವಿರುದ್ಧದ ಭದ್ರತಾ ಕಾರ್ಯಾಚರಣೆಗಳ ನೇರ ವರದಿ­ಗಾರಿಕೆಗೆ ನಿಯಮಗಳನ್ನು ರೂಪಿಸುವ ವಿಚಾರ ಸರ್ಕಾರದ ಪರಿ­ಶೀಲನೆ­­ಯಲ್ಲಿದೆ ಎಂದು ಕೇಂದ್ರ ವಾರ್ತಾ ಸಚಿವ ಅರುಣ್ ಜೇಟ್ಲಿ ಹೇಳಿ­ದ್ದಾರೆ. ಭದ್ರತಾ ಕಾರ್ಯಾಚರಣೆಗಳ ಸ್ಥಳಗಳಿಂದ ವರದಿ ಮಾಡುವ ಸಂದರ್ಭದಲ್ಲಿ ಸ್ವತಃ ತಾವೇ ‘ಪಾತ್ರವಾಗಿರುವ ಆಕಾಂಕ್ಷೆ ಮಾಧ್ಯಮ­ಗಳದ್ದು’. ಆದರೆ ಇದಕ್ಕೆ ಅವಕಾಶ ನೀಡಬಾರದು ಎಂಬುದು ರಾಷ್ಟ್ರದ ಭದ್ರತಾ ಸಂಸ್ಥೆಗಳ ಅಭಿಪ್ರಾಯ. ಹೀಗಾಗಿ ಇದು ಸರ್ಕಾರದ ಗಂಭೀರ ಹಾಗೂ ತೀವ್ರತರ ಪರಿಗಣನೆಯಲ್ಲಿದೆ ಎಂದು ಸಚಿವರು ಹೇಳಿ­ದ್ದಾರೆ. ಟಿ.ವಿ. ಸುದ್ದಿ­ವಾಹಿನಿಗಳ ನಡುವಿನ ಪೈಪೋಟಿಯಲ್ಲಿ ರಾಷ್ಟ್ರೀಯ ಹಿತ ಬಲಿಯಾಗ­ಬಾರದು ಎಂಬುದರಲ್ಲಿ ಎರಡು ಮಾತಿಲ್ಲ. 26/11ರ ಮುಂಬೈ ದಾಳಿ ಸಂದರ್ಭ­ದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾ­ಚರಣೆ­ಯನ್ನು ಸುದ್ದಿ ವಾಹಿನಿ­ಗಳು ನೇರವಾಗಿ ಪ್ರಸಾರ ಮಾಡಿದ್ದ ಸಂಗತಿಯನ್ನು ಸಚಿ­ವರು ಪ್ರಸ್ತಾ­ಪಿಸಿ­ದ್ದಾರೆ. ಈ ದಾಳಿಯ ಸಂಚು­ಕೋರರು ಟಿ.ವಿ.ಗಳ ವರದಿ­ಯನ್ನು ಆಧ­ರಿಸಿ ಉಗ್ರ­ರಿಗೆ ಸೂಚನೆಗಳನ್ನು ನೀಡುತ್ತಿದ್ದರು ಎಂಬುದನ್ನು ಗುಪ್ತಚರ ಸಂಸ್ಥೆಗಳು ಹೇಳಿದ್ದವು. ಇದರಿಂದಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾ­ಚರಣೆಗೆ ತೊಡ­ಕುಂಟಾಗಿತ್ತು. ಅಲ್ಲದೆ, ಕ್ಷಣಕ್ಷಣದ ನೇರ ವರದಿ ಮುಂಬೈ ಹೋಟೆಲ್ ನಲ್ಲಿ ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಭಯೋ­ತ್ಪಾದಕರಿಗೇ ಅನುಕೂಲವಾಗಿ ಪರಿಣಮಿಸಿದ್ದು ವಿಪರ್ಯಾಸ. ಹೀಗಾಗಿ ವರದಿಗಾರಿಕೆಗೆ ಸಂಬಂ­ಧಿಸಿ­ದಂತೆ ಮಾಧ್ಯಮಗಳ ಹೊಣೆ­ಗಾರಿ­ಕೆಯ ವಿಚಾರ ಪ್ರಸ್ತುತ­ವಾದದ್ದು. ಈ ಬಗೆಯ ನೇರ ವರದಿಗಾರಿಕೆಗೆ ಸಂಬಂಧಿಸಿದಂತೆ ಕೆಲ­ವೊಂದು ಮಿತಿಗಳನ್ನು ಅಳವಡಿಸಿಕೊಳ್ಳಬೇಕು ಎಂಬ ವಿಚಾರ ಈ ಹಿಂದೆಯೂ ಚರ್ಚೆಗೆ ಒಳಪಟ್ಟಿತ್ತು. ವಾಸ್ತವವಾಗಿ ಭಯೋತ್ಪಾದನೆ ಅಥವಾ ಬೇರೆ ಯಾವುದೇ ಸಾಮಾ­ಜಿಕವಾಗಿ ಸೂಕ್ಷ್ಮವಾದ ವಿಚಾರಗಳ ವರದಿಗಾರಿಕೆಯಲ್ಲಿ ಮಾಧ್ಯಮ­ಗಳೇ ಸ್ವಯಂ ನಿಯಂತ್ರಣ ಸಾಧಿಸುವುದು ಮಾಧ್ಯಮಗಳ ಮುಂದಿರಬೇಕಾದ ಆದರ್ಶ. ಆದರೆ ಮುಂಬೈ ದಾಳಿ ಸಂದರ್ಭದಲ್ಲಿ, ಸುದ್ದಿ ಹಾಗೂ ಪ್ರಚಲಿತ ವಿದ್ಯ­ಮಾನ­ಗಳ ಖಾಸಗಿ ಚಾನೆಲ್ ಗಳಿಗೆ ಸಂಬಂಧಿಸಿದ ಸಂಘಟನೆ ನ್ಯೂಸ್ ಬ್ರಾಡ್ ಕಾಸ್ಟರ್‌್ಸ್ ಅಸೋಸಿಯೇಷನ್ (ಎನ್‌ಬಿಎ) ನೀಡಿದ್ದ ಸೂಚನೆ­ಗಳನ್ನೂ ಟಿ.ವಿ. ವಾಹಿನಿಗಳು ಕಡೆಗಣಿಸಿದ್ದವು ಎಂಬುದನ್ನು ಮರೆಯುವಂತಿಲ್ಲ. ಮಾಧ್ಯಮ­­ಗಳು ಇಂದು ಸಶಕ್ತವಾಗಿವೆ. ಆದರೆ ಮಿತಿಗಳ ಅರಿವೂ ಇರ­ಬೇಕು. ಜನರ ಬದುಕುವ ಹಕ್ಕು ದೊಡ್ಡದು. ಹೀಗಾಗಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ವರದಿ ಮಾಡುವಾಗ ಭಯೋತ್ಪಾದಕರಿಗೆ ಅನು­ಕೂಲ­ವಾಗುವ ಎಂತಹದೇ ಮಾಹಿತಿ­ಗಳನ್ನು ಬಿಟ್ಟುಕೊಡಬಾರದು ಎಂಬ ಸರ್ಕಾರದ ನಿಲುವು ಸರಿ­ಯಾದುದು. ಹಾಗೆಯೇ ಭಯೋತ್ಪಾದನೆ ವಿಚಾರ­ಗಳಿಗೆ ಸಂಬಂಧಿಸಿದ ವರದಿಗಾರಿಕೆಯಲ್ಲೂ ವಿಶ್ವಾಸಾರ್ಹತೆ ಪಡೆಯ­ಬೇಕಾದ ಅಗತ್ಯ ಮಾಧ್ಯಮ­ಗಳಿಗಿದೆ. ಈ ವಿಚಾರದಲ್ಲಿ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮ­ಗಳೆ­ರಡೂ ಸ್ವಯಂ ನಿಯಂತ್ರಣ ಸಾಧಿಸುವುದು ಮುಖ್ಯ. ಇಂತಹ ಸೂಕ್ಷ್ಮ ವಿಚಾರ­ಗಳಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿ­ಸುವ ಕೆಲಸಗಳನ್ನೂ ಮಾಧ್ಯಮ­ಗಳು ಮಾಡಬೇಕಿದೆ. ಮಾಹಿತಿಗಳ ವಿಶ್ವಾಸಾ­ರ್ಹತೆ­ಯನ್ನು ಒರೆಗೆ ಹಚ್ಚುವುದು ಮಾಧ್ಯಮಗಳ ಪ್ರಾಥಮಿಕ ಕರ್ತವ್ಯ ಎಂಬು­ದನ್ನು ಎಂದಿಗೂ ಮರೆಯ­ಬಾರದು. ಭಯೋತ್ಪಾದನೆ ಜೊತೆಗೆ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವರದಿಗಾರಿಕೆ ಮಾಡುವ ಹೊಣೆಗೇಡಿತನವನ್ನೂ ಮಾಧ್ಯಮಗಳು ಪ್ರದರ್ಶಿಸಿವೆ. ಜನರ ಮನ­ಗಳಲ್ಲಿ ಭಯೋತ್ಪಾದನೆ ಬಿತ್ತುವ ಉದ್ದೇಶ ಹೊಂದಿದ ತೀವ್ರವಾದಿಗಳ ಪ್ರಚಾರ ಸಾಧನಗಳಾಗಿ ಮಾಧ್ಯಮ­ಗಳು ಬಳಕೆಯಾಗಬಾರದು. ಸಮ­ತೋಲಿತ ಮಾಹಿತಿ ನೀಡುವುದು ಮಾಧ್ಯಮ­ಗಳ ಹೊಣೆಗಾರಿಕೆ. ಆಧುನಿಕ ಕಾಲದಲ್ಲಿ ಮಾಧ್ಯಮಗಳ ಸೆನ್ಸಾರ್‌ಷಿಪ್ ಸಾಧ್ಯವಿಲ್ಲ ಎಂಬುದನ್ನು ಸ್ವತಃ ಜೇಟ್ಲಿ ಅವರೇ ಒಪ್ಪಿಕೊಂಡಿದ್ದಾರೆ. ಆದರೂ ನಿಯಮಗಳನ್ನು ರೂಪಿಸುವ ಪ್ರಕ್ರಿಯೆ­ಯಲ್ಲಿ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿ­ಸು­ವುದೂ ಅಗತ್ಯ. ಮಾಧ್ಯಮಗಳು ಈ ಬಗ್ಗೆ ಸರ್ವಸಮ್ಮತ ಅಭಿಪ್ರಾಯ ತಳೆಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.