ಕಿವಿಮಾತಿಗೆ ಬೆಲೆಕೊಡಿ ಸುಗ್ರೀವಾಜ್ಞೆ ಎನ್ನುವುದು ಸಂವಿಧಾನ ಕೊಟ್ಟಿರುವ ಅತ್ಯಂತ ಮುಖ್ಯ­ವಾದ, ಆದರೆ ಅಪರೂಪಕ್ಕೆ ಬಳಸಬೇಕಾದ ಬ್ರಹ್ಮಾಸ್ತ್ರ. ಅದನ್ನು ತುಂಬ ವಿವೇಚನೆಯಿಂದ ಉಪಯೋಗಿಸಬೇಕು. ಅದನ್ನೇ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನೆನಪಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 8 ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಿದೆ. ಇವಕ್ಕೆಲ್ಲ ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿದೆ. ಈ ಪೈಕಿ ಒಂದೆರಡು ಸುಗ್ರೀವಾ­ಜ್ಞೆಗೆ ಸಹಿ ಹಾಕುವ ಮುನ್ನ ಪ್ರಣವ್‌ ಅವರು ಸರ್ಕಾರದಿಂದ ಸಮಜಾಯಿಷಿ ಕೇಳಿದ್ದರು ಎಂದೂ ವರದಿಯಾಗಿತ್ತು. ಸುಗ್ರೀವಾಜ್ಞೆಗೆ ಸಹಿ ಮಾಡುವ ರಾಷ್ಟ್ರ­ಪತಿಯವರೇ ಅದರ ದುರ್ಬಳಕೆ ವಿರುದ್ಧ ಈಗ ಕಿವಿ ಹಿಂಡಿದ್ದಾರೆ. ತಾವೊಬ್ಬ ರಬ್ಬರ್‌ ಸ್ಟ್ಯಾಂಪ್‌ ರಾಷ್ಟ್ರಪತಿಯಲ್ಲ, ಆದರೆ ಸಚಿವ ಸಂಪುಟದ ಶಿಫಾರಸು­ಗಳಿ­ಗೆಲ್ಲ ತೊಡರುಗಾಲು ಹಾಕಿ ಮುಜುಗರಕ್ಕೆ ಗುರಿ ಮಾಡುವ ಪ್ರವೃ­ತ್ತಿಯೂ ತಮ್ಮದಲ್ಲ ಎಂಬುದನ್ನು ನಯವಾಗಿಯೇ ತಿಳಿಸಿದ್ದಾರೆ. ‘ಮೇಲಿಂದ ಮೇಲೆ ಸುಗ್ರೀವಾಜ್ಞೆ ಹೊರಡಿಸುವುದು ಸತ್ಸಂಪ್ರದಾಯ ಅಲ್ಲ, ಸಂಸತ್‌ ಕಲಾಪಕ್ಕೆ ನಿರಂತರವಾಗಿ ಅಡ್ಡಿ ಮಾಡುವುದೂ ಸರಿಯಲ್ಲ’ ಎಂಬ ಬುದ್ಧಿಮಾತೂ ಹೇಳಿದ್ದಾರೆ. ಆಡಳಿತ ಮತ್ತು ಪ್ರತಿಪಕ್ಷಗಳೆರಡೂ ಇದನ್ನು ಗಂಭೀರ­ವಾ­ಗಿಯೇ ಪರಿಗಣಿಸಬೇಕು. ವಿರೋಧ ಪಕ್ಷಗಳ ಮೇಲುಗೈ ಇರುವ ರಾಜ್ಯ­ಸಭೆಯಲ್ಲಿ ಅನೇಕ ಪ್ರಮುಖ ಮಸೂದೆಗಳನ್ನು ಮಂಡಿಸಲು ಅವಕಾಶ ಸಿಗ­ಲಿಲ್ಲ ಅಥವಾ ಪ್ರತಿಪಕ್ಷಗಳು ಬಿಡಲಿಲ್ಲ ಎಂಬ ಕಾರಣ ಕೊಟ್ಟು ಸುಗ್ರೀ­ವಾಜ್ಞೆಯ ಹಾದಿ ತುಳಿ­ಯುವುದು ಜನತಂತ್ರದ ಮೂಲ ಆಶಯಗಳಿಗೇ ವಿರುದ್ಧ. ಆಡಳಿತ ಮತ್ತು ಪ್ರತಿಪಕ್ಷಗಳೆರಡೂ ಪರಸ್ಪರ ಸಮಾಲೋಚನೆ, ಚರ್ಚೆ ಮೂಲಕ ಭಿನ್ನಾಭಿ­ಪ್ರಾಯ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಗಲಾಟೆ, ಗದ್ದಲಕ್ಕೆ ಇಳಿಯು­ವುದು ಒಳ್ಳೆಯದಲ್ಲ. ಇದು ಎಲ್ಲ ರಾಜಕೀಯ ಪಕ್ಷ­ಗಳಿಗೂ ಅನ್ವಯಿಸು­ವಂಥದ್ದು. ಏಕೆಂದರೆ ಜನತಂತ್ರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸ್ಥಾನ ಆಗಾಗ ಅದಲುಬದಲು ಆಗುತ್ತಲೇ ಇರುತ್ತದೆ. ‘ಹಿಂದೆ ನೀವು ನಮಗೆ ಕಿರುಕುಳ ಕೊಟ್ಟಿದ್ದೀರಿ’ ಎಂದು ಮುಯ್ಯಿ ತೀರಿಸಿಕೊಳ್ಳುವ ಮನಸ್ಥಿತಿಯಿಂದ ಜನಪ್ರತಿನಿಧಿಗಳು, ಪಕ್ಷಗಳು ಹೊರ ಬರಬೇಕು. ಅದುವೇ ರಾಷ್ಟ್ರಪತಿಗಳ ಹಿತವಚನದ ಮೂಲ ಸಾರ. ಸಂಸತ್‌ ಅಧಿವೇಶನ ನಡೆಯದೇ ಇರುವ ಹೊತ್ತಿನಲ್ಲಿ ಕಾಯ್ದೆ ತಿದ್ದುಪಡಿ, ವಿಶೇಷ ಆದೇಶ ಹೊರಡಿಸುವ ತುರ್ತು ಅನಿವಾರ್ಯ ಇದ್ದಾಗ ಸಂವಿಧಾನ­ದಲ್ಲಿ ಸುಗ್ರೀವಾಜ್ಞೆಗೆ ಅವಕಾಶ ಕಲ್ಪಿಸಲಾಗಿದೆ. ಕಾನೂನು ರಚಿ­ಸುವ ಸಂಸತ್ತಿನ ಅಧಿಕಾರಕ್ಕೆ ಇದು ಪರ್ಯಾಯ ಅಲ್ಲ. ಅದನ್ನು ಆಡಳಿತ ನಡೆಸುವವರು ಮನ­ಗಾಣಬೇಕು. ಮಸೂದೆಯ ಉದ್ದೇಶ, ಅಗತ್ಯವನ್ನು ಮನ­ವರಿಕೆ ಮಾಡಿ­ಕೊಡ­ಬೇಕು. ಚರ್ಚೆ ನಡೆಯಬೇಕು. ಅದನ್ನು ಬಿಟ್ಟು, ಸುಗ್ರೀ­ವಾಜ್ಞೆ ಎಂಬ ಒಳದಾರಿ­ಯನ್ನೇ ನೆಚ್ಚಿಕೊಂಡು ಆಡಳಿತ ನಡೆಸುವುದು ಒಳ್ಳೆಯ­ದಲ್ಲ. ರಾಷ್ಟ್ರಪತಿಗಳು ಹೇಳಿದಂತೆ, ಭಿನ್ನಾಭಿಪ್ರಾಯ ಪ್ರಜಾಪ್ರಭು­ತ್ವದ ಜೀವಂತಿಕೆ ಲಕ್ಷಣ. ಆದರೆ ಅದನ್ನು ಜವಾಬ್ದಾರಿಯಿಂದ ಪ್ರಯೋ­ಗಿಸಬೇಕು. ಇತ್ತೀಚಿನ ದಶಕಗಳಲ್ಲಿ ಶಾಸನಸಭೆಗಳಲ್ಲಿ ಸಂವಾದಕ್ಕಿಂತ ಸಂಘ­ರ್ಷವೇ ಹೆಚ್ಚುತ್ತಿ­ರುವುದನ್ನು ಕಾಣುತ್ತಿ­ದ್ದೇವೆ. ರಾಷ್ಟ್ರಪತಿಗಳ ಕಳಕಳಿ ನಮ್ಮ ಜನಪ್ರತಿನಿಧಿಗಳಲ್ಲಿ ವಿವೇಕ ಬೆಳೆಸಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.