ಹುಲಿಗೆ ಹೊಸ ಯೋಜನೆ ಅಗತ್ಯ ಸಾರಿಸ್ಕ ಅರಣ್ಯದಲ್ಲಿ ಹುಲಿಗಳು ಕಳ್ಳಬೇಟೆಗೆ ಬಲಿಯಾದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಹುಲಿ ಅಭಯಾರಣ್ಯಗಳಲ್ಲಿ ತೆಗೆದುಕೊಂಡ ಸಂರಕ್ಷಣಾ ಕ್ರಮ ಕೊನೆಗೂ ಫಲ ನೀಡಲು ಆರಂಭಿಸಿದೆ. ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಬಿಡುಗಡೆ ಮಾಡಿ­ರುವ ಹುಲಿ ಗಣತಿ ವರದಿಯ ಪ್ರಕಾರ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ ೩೦ರಷ್ಟು ಏರಿಕೆಯಾಗಿದೆ. ೨೦೧೦ರಲ್ಲಿ ನಡೆದ ಗಣತಿ ಅನ್ವಯ ದೇಶದಲ್ಲಿದ್ದ ಹುಲಿಗಳ ಸಂಖ್ಯೆ ೧೭೦೬. ಅದು ಈಗ ೨೨೨೬ಕ್ಕೆ ಏರಿದೆ. ವಿಶ್ವದ ಒಟ್ಟು ಹುಲಿ­ಗಳ ಪೈಕಿ ಶೇ 70ರಷ್ಟು ಹುಲಿಗಳು ಭಾರತದಲ್ಲೇ ಇವೆ ಎನ್ನುವುದು ನಿಜಕ್ಕೂ ಆಶಾದಾಯಕ. ಅದರಲ್ಲೂ ಕರ್ನಾಟಕ ಮೊದಲ ಸ್ಥಾನವನ್ನು ಉಳಿಸಿ­ಕೊಂಡಿದೆ ಎನ್ನುವುದಂತೂ ಅರಣ್ಯ ಇಲಾಖೆ ತೆಗೆದುಕೊಂಡಿರುವ ಸಂರಕ್ಷಣಾ ಕ್ರಮಕ್ಕೆ ದೊರೆತ ಪ್ರತಿಫಲ. ಈ ಸಲದ ಹುಲಿ ಗಣತಿಯಲ್ಲಿ ಕ್ಯಾಮೆರಾಗಳನ್ನು ದೊಡ್ಡ ಮಟ್ಟದಲ್ಲಿ ಬಳಸಲಾಗಿದೆ. ೯೭೩೫ ಕ್ಯಾಮೆರಾ ಟ್ರಾಪ್‌ ಬಳಸಿದ್ದೇ ದಾಖಲೆ. ನೀಲಗಿರಿ ಅಭಯಾರಣ್ಯದ ಭಾಗವಾಗಿರುವ ಬಂಡೀಪುರ, ನಾಗರ­ಹೊಳೆ, ಮುದುಮಲೈ ಹಾಗೂ ವಯನಾಡು ಭಾಗದಲ್ಲಿ ಅತಿ ಹೆಚ್ಚು ಹುಲಿ­ಗಳ ಸಾಂದ್ರತೆಯಿದೆ. ಹಿಂದೆಯೂ ಈ ಪ್ರದೇಶ ಹುಲಿ ಸಂರಕ್ಷಣೆಗೆ ಹೆಸರಾ­ಗಿತ್ತು. ಈ ಪ್ರದೇಶಕ್ಕೆ ಹೊಂದಿ­ಕೊಂಡಿರುವ ಬಿಳಿಗಿರಿರಂಗನ ಬೆಟ್ಟದಲ್ಲೂ ಸಂತತಿ ಅಭಿವೃದ್ಧಿಯಾಗಿದೆ. ಆಹಾರ ಸರಪಳಿಯಲ್ಲಿ ಹುಲಿಗೆ ಅಗ್ರಸ್ಥಾನ. ಹುಲಿ ಸಂತತಿ ಹೆಚ್ಚಿದೆ ಎಂದರೆ ಬಲಿಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ, ಕಾಡಿನ ಆರೋಗ್ಯವೂ ಚೆನ್ನಾಗಿದೆ ಎಂದರ್ಥ. ಈ ಯಶೋಗಾಥೆಗೆ ಇಲಾಖೆಯ ಜೊತೆ­ಯಲ್ಲಿ ರಕ್ಷಣೆಯಲ್ಲಿ ಸಹಕಾರ ನೀಡಿದ ಕಾಡಿನಂಚಿನ ಗ್ರಾಮಸ್ಥರಿಗೂ, ಅರಣ್ಯ ರಕ್ಷಣೆ­ಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಘಟನೆ­ಗಳಿಗೂ ಅಭಿನಂದನೆ ಸಲ್ಲಬೇಕು. ಸಂರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಪ್ರದೇಶಗಳಲ್ಲಿ ಹುಲಿ ಸಂತತಿ ಈಗಾಗಲೇ ದಟ್ಟವಾಗಿದೆ. ಬಂಡೀಪುರ, ನಾಗರಹೊಳೆಯಲ್ಲಿ ನೂರು ಚದರ ಕಿ.ಮೀಗೆ ೧೨–೧೮ ಹುಲಿಗಳಿವೆ. ಬಿಳಿಗಿರಿರಂಗನಬೆಟ್ಟದಲ್ಲಿ ಈ ಪ್ರಮಾಣ ೧೦ರಷ್ಟಿರಬಹುದು ಎಂದು ರಾಜ್ಯದ ವನ್ಯಜೀವಿ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಕಾಡಿಗೆ ಹುಲಿ ವಲಸೆ ಆರಂಭ­ವಾಗಬಹುದು. ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಐದು ಹುಲಿಗಳು ಪತ್ತೆಯಾಗಿವೆ. ಕರ್ನಾಟಕದ ಮಹದೇಶ್ವರಬೆಟ್ಟ, ಭೀಮಗಡ, ಅಣಶಿ–ದಾಂಡೇಲಿ, ಕುದುರೆಮುಖ, ಸೋಮೇಶ್ವರ ಮತ್ತು ಮೂಕಾಂಬಿಕ ಅರಣ್ಯದಲ್ಲಿ ಹುಲಿ ಸಂತತಿ ಅಭಿವೃದ್ಧಿಗೆ ಅವಕಾಶವಿದೆ. ಅಲ್ಲಿಗೆ ಹುಲಿ ವಲಸೆ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಮಾನವ– ಹುಲಿ ಸಂಘರ್ಷ ತಪ್ಪಿ­ಸಲು ಕಾಡುಗಳ ನಡುವೆ ಕಾರಿಡಾರ್‌ ಅಭಿವೃದ್ಧಿಯಾಗಬೇಕು. ಕಾಡಿನಲ್ಲಿ ವಾಸಿಸುವ ಗ್ರಾಮಸ್ಥರ ಸ್ಥಳಾಂತರವಾಗುತ್ತದೆ ಮತ್ತು ಕಾಡಿನ ಹೊರ ವಲಯ ಘೋಷಣೆಯಾದರೆ ಗಣಿಗಾರಿಕೆಗೆ ತಡೆಯಾಗುತ್ತದೆ ಎನ್ನುವ ಕಾರಣದಿಂದ ಹುಲಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಸಂತತಿ ಹೆಚ್ಚ­ಳದ ಪರಿಣಾಮ ಈಗಾಗಲೇ ಮಾನವ– ಹುಲಿ ಸಂಘರ್ಷ ಕಾಣಿಸಿ­ಕೊ­ಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ನಡೆದ ಚಿಕ್ಕಮಗಳೂರು ಮತ್ತು ಬೆಳಗಾವಿ ಘಟನೆ­ಗಳು ಉದಾಹರಣೆ. ಈ ಘರ್ಷಣೆ ತಡೆಗೆ ಪರಿಣಾಮಕಾರಿ ಯೋಜನೆಯನ್ನು ಇಲಾಖೆ ರೂಪಿಸಬೇಕು. ಇಲ್ಲವಾದರೆ ಇಲಾಖೆಯ ಸಿಬ್ಬಂದಿ ಮತ್ತು ಅರಣ್ಯದಂಚಿನ ಜನ ಒತ್ತಡದಲ್ಲಿ ಸಿಲುಕಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.