ಅವಕಾಶವಾದಿ ರಾಜಕಾರಣ ದೆಹಲಿ ವಿಧಾನಸಭೆ ಚುನಾವಣೆ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ನಡುವಿನ ಜಿದ್ದಾಜಿದ್ದಿ ಕಣವಾಗಿ ಮಾರ್ಪಡುತ್ತಿದೆ. ಅಣ್ಣಾ ಹಜಾರೆ ಅವರ ಭ್ರಷ್ಟಚಾರ ವಿರೋಧಿ ಆಂದೋಲನದಲ್ಲಿ ಸಕ್ರಿಯರಾಗಿದ್ದ ಕೇಜ್ರಿವಾಲ್‌ ಮತ್ತು ಬೇಡಿ ಮುಖಾಮುಖಿ ಆಗಿರುವುದರಿಂದ ಈ ಚುನಾವಣೆಗೆ ಸಿಕ್ಕಾಪಟ್ಟೆ ಮಹತ್ವ ಬಂದಿದೆ. ಕೇಜ್ರಿವಾಲ್‌ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣ ಮಾಡಲು ಹೊರ­ಟಾಗ ಬೇಡಿ ಪ್ರಬಲವಾಗಿ ವಿರೋಧಿಸಿದ್ದರು. ರಾಜಕಾರಣದಿಂದ ಹೊರ­ಗುಳಿದು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುವ ಮಾತಾ­ಡಿದ್ದರು. ಕೇವಲ ಒಂದೇ ವರ್ಷದಲ್ಲಿ ಅವರ ರಾಗ ಬದಲಾಗಿದೆ. ಆಮ್‌ ಆದ್ಮಿ ಪಕ್ಷದ ಮುಖಂಡನಂತೆ ಅವರೂ ರಾಜಕೀಯ ಅಧಿಕಾರದತ್ತ ವಾಲಿ ಅವಕಾಶವಾದಿಯಾಗಿದ್ದಾರೆ. ಅಷ್ಟೇ ಅಲ್ಲ, ಇದರಿಂದ ಬಿಜೆಪಿ ಬಣ್ಣವೂ ಬಯ­ಲಾಗಿದೆ. ವ್ಯಕ್ತಿಗಿಂತ ಪಕ್ಷ, ನೀತಿ–ಸಿದ್ಧಾಂತ ದೊಡ್ಡದೆಂದು ಹೇಳುತ್ತಿದ್ದ ಬಿಜೆಪಿ, ಬೇಡಿ ಅವರಿಗೆ ರತ್ನಗಂಬಳಿ ಹಾಸಿದೆ. ಇದೊಂದು ಹತಾಶೆಯ ಕ್ರಮ. ದೆಹಲಿ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ. ಚುನಾವಣೆ ಸೋತರೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಇಂಥ ಪರಿಸ್ಥಿತಿ ತಪ್ಪಿಸಲು ಕಿರಣ್‌ ಬೇಡಿ ಅವರನ್ನು ಕರೆತರಲಾಗಿದೆ. ಅವರಿಗೆ ಮುಖ್ಯಮಂತ್ರಿ ಹುದ್ದೆಯ ಆಮಿಷ ತೋರಿಸಲಾಗಿದೆ. ದೆಹಲಿ ಬಿಜೆಪಿ ನಾಯಕರು ಕೇಜ್ರಿವಾಲ್‌ ಅವರನ್ನು ಎದುರಿಸುವುದು ಕಷ್ಟವಿದೆ ಎನ್ನುವ ಸತ್ಯ ಅರ್ಥವಾದ ಮೇಲೆ ಬೇಡಿ ಅವರನ್ನು ಕರೆತರಲಾಗಿದೆ. ರಾಮಲೀಲಾ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮತದಾರರನ್ನು ಮೋಡಿ ಮಾಡಲು ನರೇಂದ್ರ ಮೋದಿ ವಿಫಲರಾದ ಬಳಿಕ ಪಕ್ಷ ಆತಂಕ­ಕ್ಕೊಳಗಾಗಿತ್ತು. ಉಳಿದ ರಾಜ್ಯಗಳಂತೆ ದೆಹಲಿ ಮತದಾರರನ್ನು ಆಕ­ರ್ಷಿ­ಸುವುದು ಸುಲಭವಲ್ಲ ಎಂದು ಗೊತ್ತಾಗುತ್ತಿದ್ದಂತೆ ಕಿರಣ್‌ ಬೇಡಿ ಅವರನ್ನು ಕರೆತರಲಾಗಿದೆ. ವಿಪರ್ಯಾಸವೆಂದರೆ ಬೇಡಿ ಈಚಿನವರೆಗೂ ಮೋದಿ ಮತ್ತು ಬಿಜೆಪಿಯನ್ನು ಬೈದುಕೊಂಡು ತಿರುಗಾಡಿದ್ದರು. ‘ಈಗ ಮೋದಿ ಅವರಂಥ ನಾಯಕರಿಲ್ಲ’ ಎಂದು ಹೊಗಳಿಕೊಂಡು ತಿರುಗಾಡುತ್ತಿದ್ದಾರೆ. ಬೇಡಿ ಪ್ರವೇಶ­ದಿಂದ ಬಿಜೆಪಿಗೆ ಲಾಭವೂ ಆಗಬಹುದು. ನಷ್ಟವೂ ಆಗಬಹುದು. ಆದರೆ, ಪಕ್ಷದೊಳಗೆ ಭುಗಿಲೆದ್ದಿರುವ ಭಿನ್ನಮತವನ್ನು ಹೇಗೆ ನಿವಾರಿಸ­ಲಾಗುತ್ತದೆ ಎನ್ನುವುದರ ಮೇಲೆ ಯಶಸ್ಸು ಅವಲಂಬಿಸಿದೆ. ಬೇಡಿ ಸಕ್ರಿಯ ರಾಜಕಾರಣ ಮಾಡುವುದಕ್ಕೆ ಅಣ್ಣಾ ಹಜಾರೆ ಅವರ ಸಮ್ಮತಿಯಿಲ್ಲ. ಜನ­ಲೋಕಪಾಲ್ ಗಾಗಿ ಹೋರಾಡುತ್ತಾ ಪರ್ಯಾಯ ರಾಜಕಾರಣದ ಕನಸು ಬಿತ್ತಿದ್ದ ಹಜಾರೆ ಅವರ ಹೋರಾಟದ ಪ್ರಮುಖ ವ್ಯಕ್ತಿಗಳು ಮುಖ್ಯ­ವಾಹಿನಿಯ ರಾಜಕೀಯದ ಭಾಗವಾಗಿದ್ದು ವಿಪರ್ಯಾಸ. ಹಜಾರೆ ಅವ­ರನ್ನು ಭೇಟಿ ಮಾಡುವ ಬೇಡಿ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಕೇಜ್ರಿವಾಲ್‌ ಮತ್ತು ಕಿರಣ್‌ ಬೇಡಿ ಹಿಡಿದ ಹಾದಿಯಿಂದ ಅಸಮಾಧಾನಗೊಂಡಿರುವ ಹಜಾರೆ ಪರ್ಯಾಯ ರಾಜಕಾರಣ ಮಾಡಲು ಮತ್ತೊಂದು ತಂಡ ಕಟ್ಟುವುದಾಗಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.