ಅಸಮಾನತೆ ತಗ್ಗಿಸಿ ವಿಶ್ವದಾದ್ಯಂತ ಸಂಪತ್ತಿನ ಅಸಮಾನ ಹಂಚಿಕೆ ತೀವ್ರವಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದಲ್ಲಿ ವಿಶ್ವದ ಜನಸಂಖ್ಯೆಯಲ್ಲಿನ ಕೇವಲ ಶೇ 1ರಷ್ಟು ಸಿರಿ­­ವಂತರ ಸಂಪತ್ತು, 2016ರ ಹೊತ್ತಿಗೆ ಜನಸಂಖ್ಯೆಯ ಇತರ ಶೇ 99ರಷ್ಟು ಜನರ ಬಳಿ ಇರುವ ಸಂಪತ್ತಿಗಿಂತ ಹೆಚ್ಚಿಗೆ ಇರಲಿದೆ . ಒಂಬತ್ತು ಜನರಲ್ಲಿ ಒಬ್ಬರು ವ್ಯಕ್ತಿಗೆ ತಿನ್ನಲೂ ಗತಿ ಇಲ್ಲದ ಸ್ಥಿತಿ ಇದೆ. ಬಡತನ ನಿರ್ಮೂ­ಲನೆಗಾಗಿ ಶ್ರಮಿಸು­ತ್ತಿರುವ ಅಂತರ­ರಾಷ್ಟ್ರೀಯ ಸೇವಾ ಸಂಸ್ಥೆ ಆಕ್ಸ್‌ಫಾಮ್‌ ಬಿಡುಗಡೆ ಮಾಡಿರುವ ಸಂಶೋ­ಧನಾ ವರದಿಯ ಈ ಅಂಕಿಅಂಶಗಳು ಸ್ವಿಟ್ಜರ್‌­ಲೆಂಡ್‌ನ ದಾವೋಸ್‌ನಲ್ಲಿ ನಡೆಯು­ತ್ತಿರುವ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಮಾವೇಶದಲ್ಲಿ ಪ್ರಮುಖ­ವಾಗಿ ಚರ್ಚೆಗೆ ಬರಲಿದೆ. ಬಡವ, ಬಲ್ಲಿದರ ನಡುವೆ ವಿಶ್ವದಾದ್ಯಂತ ತ್ವರಿತವಾಗಿ ಹೆಚ್ಚುತ್ತಿರುವ ಅಸಮಾನತೆ ತಗ್ಗಿಸುವ ಮಾರ್ಗೋ­ಪಾಯ ಕಂಡುಕೊಳ್ಳುವ ಬಗ್ಗೆ ಸಮಾ­ವೇಶ­ದಲ್ಲಿ ಪಾಲ್ಗೊಳ್ಳುವ ರಾಷ್ಟ್ರ ಪ್ರಮುಖರು, ಉದ್ಯಮ ದಿಗ್ಗಜರು, ಆರ್ಥಿಕ ಚಿಂತಕರ ಮೇಲೆ ಈ ವರದಿ ಖಂಡಿತವಾಗಿಯೂ ಒತ್ತಡ ಹೇರ­ಲಿದೆ. ವಿಶ್ವದ ಒಟ್ಟಾರೆ ಸಂಪತ್ತಿನ ಶೇ 50ಕ್ಕಿಂತ ಹೆಚ್ಚು ಸಂಪತ್ತು ಕೆಲವೇ ಕೆಲ ಜನರ ಬಳಿ ಕೇಂದ್ರೀ­ಕೃತ­ಗೊಳ್ಳಲಿರುವುದು ವಿಶ್ವ ಆರ್ಥಿಕತೆಗೆ ಸರಿಪಡಿಸಲಿಕ್ಕಾಗದ ಹಾನಿ ಉಂಟು ಮಾಡಲಿದೆ. ಇದೊಂದು ಬರೀ ಸಂಪತ್ತಿನ ಅಸಮಾನ ಹಂಚಿಕೆಯ ಸಮಸ್ಯೆಯಲ್ಲ. ಬಡ ಮತ್ತು ಶ್ರೀಮಂತ ದೇಶಗಳ ಅಂತರ ಹೆಚ್ಚಳದ, ಅರ್ಥ ವ್ಯವಸ್ಥೆಗೆ ಮಾರಕವಾದ ಮತ್ತು ಸಾಮಾಜಿಕ ಅಶಾಂತಿಗೂ ಕಾರಣ­ವಾಗ­ಲಿದೆ ಎನ್ನುವ ಸ್ಪಷ್ಟ ಸಂದೇಶವೂ ಈ ವರದಿಯಲ್ಲಿ ಇರುವುದು ಎಲ್ಲರ ಕಣ್ಣು ತೆರೆಸಬೇಕಾಗಿದೆ. ಸಂಪತ್ತು ಕೆಲವೇ ಕೆಲವರ ಸೊತ್ತಾಗಿ ಪರಿಣಮಿಸಿದರೆ ಜನಸಾಮಾನ್ಯರು ಸೊಲ್ಲೆತ್ತಲು ಮತ್ತು ತಮ್ಮ ಹಿತಾಸಕ್ತಿ ರಕ್ಷಿಸಿಕೊಳ್ಳಲೂ ಸಾಧ್ಯವಾ­ಗದ ಸ್ಥಿತಿ ಉಂಟಾಗಲಿದೆ. ಇಂತಹ ಅಸಮಾನ ಜಗತ್ತಿನ ಬಗ್ಗೆ ನಾಗರಿಕ ಸಮುದಾಯ ಎಚ್ಚೆತ್ತುಕೊಳ್ಳಬೇಕಾಗಿದೆ. ಸಿರಿವಂತರು ತಮ್ಮ ಸಂಪತ್ತು ಇನ್ನಷ್ಟು ಹೆಚ್ಚಳಗೊಳ್ಳಲು ರಾಜಕಾರಣಿಗಳ ಮೇಲೆ ನಿರಂತರವಾಗಿ ಪ್ರಭಾವ ಬೀರು­ತ್ತಲೇ ಇದ್ದಾರೆ. ಈ ಧನಿಕ ಕುಟುಂಬಗಳು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ನೀಡಿ ಲಾಭ ಬಾಚಿ­ಕೊಳ್ಳುತ್ತಿರುವುದು ಗುಟ್ಟಿನ ಸಂಗತಿ ಏನಲ್ಲ. ಇದನ್ನು ತಪ್ಪಿ­ಸಲು ವಿಶ್ವದ ವಿವಿಧ ದೇಶಗಳ ಸರ್ಕಾರಗಳು ಕೂಡಲೇ ಅಗತ್ಯ ಕ್ರಮ­ಗಳನ್ನು ಕೈಗೊಳ್ಳಬೇಕಿದೆ. ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆ, ಉಚಿತ ಆರೋಗ್ಯ, ಶಿಕ್ಷಣ ರಂಗಗಳಲ್ಲಿ ಹೆಚ್ಚು ಬಂಡವಾಳ ಹೂಡಿಕೆ, ತೆರಿಗೆ ಹೊರೆಯ ಸಮಾನ ಹಂಚಿಕೆ, ದುಡಿಮೆ– ಉಪ­ಭೋಗದ ಬದಲು ಬಂಡವಾಳ– ಸಂಪತ್ತಿನ ಮೇಲೆ ತೆರಿಗೆ, ಕನಿಷ್ಠ ವೇತನ ಜಾರಿ, ದುಡಿ­ಯುವ ವರ್ಗಕ್ಕೆ ಉತ್ತಮ ಜೀವ­ನೋಪಾ­ಯಕ್ಕೆ ನೆರವಾಗುವ ವೇತನ ನಿಗದಿ, ಸಮಾನ ವೇತನ ಜಾರಿ, ಆರ್ಥಿಕ ನೀತಿ ನಿರೂಪಣೆಗಳಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಮತ್ತು ಕಡು­ಬಡ­ವರಿಗೆ ಸುರಕ್ಷ­ತೆಯ ಭರವಸೆಯನ್ನು ಒದಗಿಸಬೇಕಾಗಿದೆ. ಇದಕ್ಕಾಗಿ ಸಂಪತ್ತಿನ ಅಸಮಾ­ನತೆ ನಿರ್ಮೂಲನೆ ಮಾಡಲು ಜಾಗತಿಕ ಗುರಿ ನಿಗದಿ ಮಾಡ­ಬೇಕಾದ ಹೊಣೆಗಾರಿಕೆ ದಾವೋಸ್‌ ಸಮಾ­ವೇಶದ ಮೇಲೆ ಇದೆ. ‘ಆಕ್ಸ್‌­ಫಾಮ್‌’ ನೀಡಿ­ರುವ ಈ ಸಲಹೆಗಳನ್ನು ದಾವೋಸ್‌ ಸಮಾ­ವೇಶವು ಅಂಗೀಕ­ರಿಸಿ ಎಲ್ಲ ದೇಶಗಳೂ ಅವುಗಳನ್ನು ಕಡ್ಡಾಯ­ವಾಗಿ ಪಾಲಿಸು­ವಂತೆ ಮಾಡಲು ಮನ­ವೊ­ಲಿಸು­ವಂತಾದರೆ, ಸಂಪತ್ತಿನ ಅಸಮಾನತೆ ತಗ್ಗಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲು ಸಾಧ್ಯವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.