ತಾರತಮ್ಯ ತೊಲಗಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ದನಿ ಎತ್ತಿರುವುದು ಸಮಾಜದ ಸ್ವಾಸ್ಥ್ಯಕ್ಕೆ ಪೂರಕವಾಗಿದೆ. ಹೆಣ್ಣು ಮಕ್ಕಳ ಬಗ್ಗೆ ತೋರುವ ತಾರತಮ್ಯ ಧೋರಣೆ ಜನರ ‘ಮಾನಸಿಕ ಅಸ್ವಸ್ಥತೆ’ಯ ಪ್ರತಿಬಿಂಬ ಎಂಬ ಅವರ ಮಾತು, ಪ್ರಜ್ಞಾವಂತ ಸಮುದಾಯದ ಅಭಿಮತ­ವನ್ನು ಪ್ರತಿನಿಧಿಸುತ್ತದೆ. ಹೆಣ್ಣು ಭ್ರೂಣ ಹತ್ಯೆ ಸಮಾಜದ ಅತಿ ದೊಡ್ಡ ಪಿಡುಗು. ಹತ್ತು ವರ್ಷಗಳಲ್ಲಿ ದೇಶದಾದ್ಯಂತ ಸುಮಾರು 1.2 ಕೋಟಿ ಹೆಣ್ಣು ಭ್ರೂಣ ಹತ್ಯೆಗಳು ನಡೆದಿರುವುದು ಕಳೆದ ವರ್ಷ ಸಮೀಕ್ಷೆಯೊಂದ­ರಿಂದ ಬಹಿರಂಗಗೊಂಡು, ನಾಗರಿಕ ಸಮಾಜಕ್ಕೆ ಆಘಾತ ಉಂಟು ಮಾಡಿತ್ತು. 1972ರವರೆಗೂ ದೇಶದಲ್ಲಿ ಗರ್ಭಪಾತಕ್ಕೆ ಅವಕಾಶವೇ ಇರಲಿಲ್ಲ. ನಂತರ, ಹೆರಿಗೆ ವೇಳೆ ಸುಸೂತ್ರವಾಗಿ ಮಗುವಿನ ಜನನ ಆಗದಿದ್ದರೆ, ತಾಯಿಯ ಪ್ರಾಣಕ್ಕೆ ಕಂಟಕ ಹಾಗೂ ಮಾರಣಾಂತಿಕ ಕಾಯಿಲೆ ಕಂಡುಬಂದರೆ ಮಾತ್ರ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೆ ಇದನ್ನು ಗಂಡು ಮಕ್ಕಳ ಮೇಲಿನ ಕುರುಡು ವ್ಯಾಮೋಹಿಗಳು ದುರ್ಬಳಕೆ ಮಾಡಿಕೊಂಡದ್ದರಿಂದ ‘ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಕಾಯ್ದೆ’ಯನ್ನು 1996ರಿಂದ ಜಾರಿಗೆ ತರಲಾಯಿತು. ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ 2003ರಲ್ಲಿ ತಿದ್ದುಪಡಿಯನ್ನೂ ಮಾಡಲಾಯಿತು. ಇಷ್ಟಾದರೂ ಈ ಪಿಡುಗನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಏನೇ ಆದರೂ, ಲಿಂಗ ಪತ್ತೆ ಕೇಂದ್ರಗಳು ಮತ್ತು ವೈದ್ಯರ ನೆರವಿಲ್ಲದೆ ಭ್ರೂಣದ ಲಿಂಗ ಅರಿಯುವುದು ಹಾಗೂ ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಸಮಾಜಘಾತುಕ ಕೃತ್ಯಕ್ಕೆ, ಮತಿಹೀನ ಪೋಷಕರಷ್ಟೇ ವೈದ್ಯಲೋಕವೂ ಕಾರಣವಾಗುತ್ತದೆ. ‘ವೈದ್ಯರು ಇಂತಹ ಪಾಪಕೃತ್ಯದ ಮೂಲಕ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ’ ಎಂದು ಪ್ರಧಾನಿ ಸರಿಯಾಗಿಯೇ ಛೀಮಾರಿ ಹಾಕಿದ್ದಾರೆ. ಆಮಿಷಗಳಿಗೆ ಮರುಳಾಗಿ ಭ್ರೂಣದ ಮಾಹಿತಿ ನೀಡುವ, ಹತ್ಯೆಗೆ ಪ್ರಚೋದಿಸುವ ವೈದ್ಯ ಸಿಬ್ಬಂದಿ ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಲೇಬೇಕು. ಉದ್ದೇಶ­ಪೂರ್ವಕ ಗರ್ಭಪಾತ­ದಿಂದ ಗರ್ಭಿಣಿಯ ಆರೋಗ್ಯದ ಮೇಲೆ ಮಾರಕ ಪರಿಣಾಮಗಳಾಗುತ್ತವೆ. ಗರ್ಭಾಶಯಕ್ಕೆ ತೊಂದರೆ, ಮಾನಸಿಕ ಆಘಾತ, ಲೈಂಗಿಕ, ಕೌಟುಂಬಿಕ ಜೀವನದ ಮೇಲೂ ದುಷ್ಪರಿಣಾಮಗಳಾಗುವ, ಇಡೀ ಕುಟುಂಬ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುವ ಸಂಭವ ಇರುತ್ತದೆ. ಈ ಬಗೆಯ ಪರಿಣಾಮಗಳ ಅರಿವಿರುವ ಮಧ್ಯಮ ವರ್ಗದ ಸುಶಿಕ್ಷಿತ ಕುಟುಂಬಗಳಲ್ಲೇ ಹೆಚ್ಚಾಗಿ ಇಂತಹ ಪ್ರವೃತ್ತಿ ಕಂಡುಬರುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‌ ಸಹ ವಿಷಾದ ವ್ಯಕ್ತಪಡಿಸಿದೆ. ಯಾವುದೇ ಕಾನೂನು ಕಟ್ಟಳೆಗಳಿಗಿಂತ ಮಿಗಿಲಾದದ್ದು ಅರಿವು ಮತ್ತು ವಾಸ್ತವವನ್ನು ಅರಗಿಸಿಕೊಂಡು ಮುನ್ನಡೆಯುವ ಛಾತಿ. ಭ್ರೂಣ ಹತ್ಯೆಗೆ ಕಾರಣರಾದವರನ್ನು ಜೈಲಿಗೆ ಕಳುಹಿಸುವುದರಿಂದಷ್ಟೇ ಸಮಸ್ಯೆ ಬಗೆಹರಿಯದು. ಮೊದಲು ಪೋಷಕರಲ್ಲಿ ಗಂಡು– ಹೆಣ್ಣು ಎಂಬ ತಾರತಮ್ಯ ಹೋಗಬೇಕು. ದಂಪತಿ ತಮ್ಮದೇ ಭ್ರೂಣವನ್ನು ಕೊಲ್ಲುವಂತಹ ಕ್ರೌರ್ಯಕ್ಕೆ ಕಡಿವಾಣ ಹಾಕಿಕೊಂಡು, ಹುಟ್ಟುವ ಯಾವುದೇ ಮಗುವನ್ನು ಸಮಾನವಾಗಿ ಸ್ವೀಕರಿಸುವ ವಿಶಾಲ ಮನೋಭಾವ ರೂಢಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.