ರೈಲು ಅಪಘಾತ ತಪ್ಪಿಸಿ ಬೆಂಗಳೂರಿನ ಆನೇಕಲ್‌ ಬಳಿ ಶುಕ್ರವಾರ ಮುಂಜಾನೆ ಬೆಂಗಳೂರು– ಎರ್ನಾಕುಲಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ ಒಂಬತ್ತು ಜನ ಸಾವನಪ್ಪಿದ್ದಾರೆ. ಬೆಂಗಳೂರಿನಿಂದ ರೈಲು ಹೊರಟು ಒಂದೂ­ಕಾಲು ಗಂಟೆಯಾಗುವಷ್ಟರಲ್ಲಿ ಬಿದರಗೆರೆ ದಿಣ್ಣೆ ಬಳಿ ಎಂಜಿನ್‌ನ ಚಕ್ರ­ವೊಂದು ಹಳಿ ತಪ್ಪಿ ಸಂಭವಿಸಿದ ಅಪಘಾತ ತೀವ್ರತರದ್ದು. ಅಪ್ಪಚ್ಚಿ­ಯಾದ ಬೋಗಿಯನ್ನು ಕತ್ತರಿಸಲು ಆಧುನಿಕ ಯಂತ್ರಗಳನ್ನು ಬಳಸ­ಬೇಕಾ­ಯಿತು. ರೈಲು ಅಪಘಾತದ ವಿಚಾರಣೆಯಲ್ಲಿ ಅಪಘಾತದ ಕಾರಣಗಳು ಪತ್ತೆ­ಯಾಗಬಹುದು. ಆದರೆ ಪದೇ ಪದೇ ಇಂತಹ ರೈಲು ಅಪಘಾತಗಳು ರಾಷ್ಟ್ರ­ದಲ್ಲಿ ಸಂಭವಿಸುತ್ತಿರುವುದು ಆತಂಕಕಾರಿ. ಈ ದುರಂತ ಭಾರತೀಯ ರೈಲ್ವೆಯ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿಯುತ್ತದೆ. ಭಾರತೀಯ ರೈಲ್ವೆ ವಿಶ್ವದಲ್ಲೇ ಅತಿ ದೊಡ್ಡ ನಾಲ್ಕನೇ ರೈಲು ಜಾಲವಾಗಿದೆ. ಅಮೆರಿಕ, ರಷ್ಯಾ, ಚೀನಾ ನಂತ­ರದ ಅಗ್ರಸ್ಥಾನ ಭಾರತಕ್ಕಿದೆ. ಅಗ್ಗದ ದರದಲ್ಲಿ ಸುರಕ್ಷಿತ ಪ್ರಯಾಣದ ಭರ­ವಸೆ ನೀಡುವ ಭಾರತೀಯ ರೈಲ್ವೆ, ಈಗ ಅತಿ ವೇಗದ ರೈಲುಗಳ ಆರಂಭಕ್ಕೆ ಮುಂದಾ­ಗುತ್ತಿದೆ. ಇದಕ್ಕಾಗಿ ಅನೇಕ ಹೊಸ ಯೋಜನೆಗಳನ್ನೂ ಪ್ರಕಟಿಸ­ಲಾ­ಗಿದೆ. ಇಂತಹ ಸಂದರ್ಭದಲ್ಲಿ ಈ ಬಗೆಯ ರೈಲ್ವೆ ದುರಂತಗಳು ಮರುಕಳಿ­ಸು­ವುದು ಸರಿಯಲ್ಲ. ರೈಲು ಅಪಘಾತಗಳನ್ನು ತಡೆಯಲು ಸರ್ಕಾರ ಆದ್ಯತೆ ನೀಡಬೇಕಾಗಿದೆ. ಭಾರತದಲ್ಲಿ ಪ್ರತಿದಿನ 9000 ಪ್ರಯಾಣಿಕ ರೈಲುಗಳು ಸಂಚರಿಸುತ್ತವೆ. ಈ ರೈಲುಗಳಲ್ಲಿ 1.80 ಕೋಟಿ ಪ್ರಯಾಣಿಕರು ದಿನನಿತ್ಯ ಸಂಚರಿಸುತ್ತಾರೆ ಎಂದರೆ ರೈಲ್ವೆ ಸೇವೆಯ ಅಗಾಧತೆ ಅರಿವಾಗುತ್ತದೆ. ಈ ರೈಲ್ವೆ ಪ್ರಯಾಣ ಸುರಕ್ಷಿತವಾಗಿರಬೇಕಾದುದು ಮುಖ್ಯ ಕಾಳಜಿಯಾಗಬೇಕು. ಏಕೆಂದರೆ ಪ್ರತಿ ಜೀವವೂ ಅಮೂಲ್ಯ. ಜೊತೆಗೆ ರೈಲು ಅಪಘಾತಗಳು, ಸುಗಮ ಸರಕು ಸಾಗ­ಣೆಗೂ ಅಡ್ಡಿಯಾಗುತ್ತವೆ. ಯಾಂತ್ರಿಕ ಸಮಸ್ಯೆ, ಮಾನವ ತಪ್ಪು ಹಾಗೂ ಕೆಲ­ವೊಮ್ಮೆ ವಿಧ್ವಂಸಕ ಕೃತ್ಯಗಳು ರೈಲು ಅಪಘಾತಗಳಿಗೆ ಕಾರಣವಾಗಬಹುದು. ಆದರೆ ರೈಲ್ವೆ ಪ್ರಯಾಣವನ್ನು ಸುರಕ್ಷಿತವಾಗಿಸಲು ಇಂದು ಅತ್ಯಾಧುನಿಕ ಸುರಕ್ಷಾ ತಂತ್ರಜ್ಞಾನಗಳು ಲಭ್ಯವಿವೆ. ಇದಕ್ಕಾಗಿ ರೈಲ್ವೆ ಹಳಿಗಳು, ಸೇತುವೆ ಹಾಗೂ ಸಿಗ್ನಲ್‌ಗಳನ್ನು ಅತ್ಯಾಧುನಿಕಗೊಳಿಸಬೇಕಾದುದು ಅವಶ್ಯ. ಜೊತೆಗೆ ಸುರಕ್ಷಾ ಕಾರ್ಯಾಚರಣೆಗಳ ನಿಗಾವಹಿಸುವ ರೈಲ್ವೆ ಸಿಬ್ಬಂದಿಯ ದಕ್ಷತೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳುವುದೂ ಮುಖ್ಯ. ಎನ್ ಡಿಎ ಸರ್ಕಾರದ ಎಂಟು ತಿಂಗಳ ಅವಧಿಯಲ್ಲಿ ಎರಡನೇ ರೈಲ್ವೆ ಸಚಿ­ವರಾಗಿ ಅಧಿಕಾರ ವಹಿಸಿಕೊಂಡಿರುವ ಸುರೇಶ್ ಪ್ರಭು ಅವರು ಈ ಮಾಸಾಂತ್ಯಕ್ಕೆ ರೈಲ್ವೆ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ರೈಲು ಪ್ರಯಾಣ ಸುರಕ್ಷತೆಗೂ ಹಣ ಹಂಚಿಕೆಗೆ ಗಮನ ನೀಡಬೇಕಾಗಿದೆ. ರೈಲ್ವೆ ಆಧುನಿಕತೆ, ವೇಗ ಮತ್ತು ಸುರಕ್ಷತೆ ವಿಚಾರದಲ್ಲಿ ಚೀನಾ, ಜಪಾನ್‌ ಹಾಗೂ ಯುರೋಪ್‌ನ ದೇಶಗಳಿಗಿಂತ ಭಾರತವು ಶತಮಾನಗಳಷ್ಟು ಹಿಂದೆಯೇ ಉಳಿದುಕೊಂಡು ಬಿಟ್ಟಿದೆ. ಪದೇಪದೇ ನಡೆಯುವ ಇಂತಹ ರೈಲು ಅಪಘಾತಗಳಿಂದ ಭಾರತೀಯ ರೈಲ್ವೆ ಬಗ್ಗೆ ಅಪನಂಬಿಕೆ ಮೂಡುತ್ತದೆ. ಇದು ಬದಲಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.