ಅಸಮರ್ಥನೀಯ ದಾಳಿ ಭಾರತದ ಹಿರಿಯ ನಾಗರಿಕರೊಬ್ಬರ ಮೇಲೆ ಅಮೆರಿಕದಲ್ಲಿ ಪೊಲೀಸರು ನಡೆಸಿರುವ ದಾಳಿ ಕುರಿತಂತೆ ತನಿಖೆ ಶುರುವಾಗಿದೆ. ತನಿಖೆಯ ನೇತೃತ್ವವನ್ನು ಎಫ್‌ಬಿಐ ವಹಿಸಿದೆ. ಅಮೆರಿಕಕ್ಕೆ ಹೊಸಬರಾದ 57 ವರ್ಷದ ಸುರೇಶ್‌­ಭಾಯ್‌ ಪಟೇಲ್‌ ಮ್ಯಾಡಿಸನ್‌ನಲ್ಲಿರುವ ತಮ್ಮ ಮಗನ ಮನೆ ಮುಂದೆ ಅಡ್ಡಾಡುತ್ತಿದ್ದ ಸಂದರ್ಭದಲ್ಲಿ ಈ ಹಲ್ಲೆ ನಡೆದಿರು­ವುದು ಆಘಾತ­ಕಾರಿ. ಅವರ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ತಮ್ಮ ಬಳಿ ಬಂದು ಪ್ರಶ್ನೆ­ಗಳನ್ನು ಕೇಳಿದ ಪೊಲೀಸ್ ಅಧಿಕಾರಿಗಳ ಜೊತೆ ಇಂಗ್ಲಿಷ್‌­ನಲ್ಲಿ ಮಾತ­ನಾಡಲು ಸಾಧ್ಯವಾಗದಿದ್ದುದೇ ಈ ಆಕ್ರಮಣಕ್ಕೆ ಕಾರಣ­ವಾಗಿ­ರು­­ವುದು ಆತಂಕಕಾರಿ. ಅಮೆರಿಕದಲ್ಲಿ ಜನಾಂಗೀಯ ಅಸಮಾನತೆಯ ಚಾರಿ­ತ್ರಿಕ ಸಮಸ್ಯೆ ಇದೆ. ಆದರೆ ಜಗತ್ತಿನ ‘ದೊಡ್ಡಣ್ಣ’ನಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವಂತೆ ಇತರ ದೇಶಗಳಿಗೆಲ್ಲ ಅಮೆರಿಕ ಉಪದೇಶ ನೀಡುತ್ತಿರುತ್ತದೆ. ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ವಿಶ್ವದ ಎಲ್ಲೆಡೆಯೂ ಮೂಗು ತೂರಿಸುವ ದೇಶದಲ್ಲೇ ಇಂತಹ ಕೃತ್ಯ ನಡೆದಿರುವುದು ವಿಪರ್ಯಾಸ. ಈ ಘಟನೆಯಿಂದ ಭಾರತೀಯರಿಗೆ ಆಗಿರುವ ಆಘಾತ, ಆತಂಕ ಹಾಗೂ ಅಸಮಾಧಾನವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅಥವಾ ಸರ್ಕಾರ­ದಲ್ಲಿನ ಅವರ ಪ್ರತಿನಿಧಿ ಖುದ್ದಾಗಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಮುಟ್ಟಿಸಬೇಕು. ಶ್ವೇತವರ್ಣೀಯ ಪೊಲೀಸ್‌ ಅಧಿಕಾರಿಗಳು ಇತ್ತೀಚೆಗೆ ಆಫ್ರಿಕನ್‌ ಅಮೆರಿಕನ್ನರನ್ನು ಹತ್ಯೆ ಮಾಡಿದ ಆಘಾತಕಾರಿ ಘಟನೆಯ ಬೆನ್ನಲ್ಲೇ ಈ ಘಟನೆ ನಡೆದಿದೆ. ವಿಶ್ವದಾದ್ಯಂತ, ಅದರಲ್ಲೂ ವಿಶೇಷವಾಗಿ ಅಮೆರಿಕದ ಒಳಗೆ ಜನಾಂದೋಲನ ಸೃಷ್ಟಿಯಾಗುತ್ತಿರುವ ಈ ಹೊತ್ತಿನಲ್ಲಿ ಅಲ್ಲಿನ ಆಡಳಿತವು ತನ್ನ ಭದ್ರತಾ ವ್ಯವಸ್ಥೆಯ ಬಗ್ಗೆ ಪುನರ್‌­ಪರಿಶೀಲನೆ ನಡೆಸಬೇಕಾಗಿದೆ. ಎಲ್ಲ ಜನಾಂಗದವರನ್ನೂ ಶ್ವೇತ ವರ್ಣೀಯ­ರಷ್ಟೇ ಸರಿಸಮನಾಗಿ ಕಾಣಬೇಕಾದ ಅಗತ್ಯದ ಬಗ್ಗೆ ಪೊಲೀಸರನ್ನು ಸಂವೇ­ದನಾ­­ಶೀಲರನ್ನಾಗಿಸಬೇಕಾಗಿದೆ. ಪೊಲೀಸರ ಕಠೋರ ವರ್ತನೆ ಅಮೆರಿಕದಲ್ಲಿ ಇತ್ತೀಚೆಗೆ ಸಾಕಷ್ಟು ಗಲಭೆಗಳಿಗೆ ಕಾರಣವಾಗಿದೆ. ಇದು ಹೀಗೇ ಮುಂದುವ­ರಿ­ದರೆ ಹಳೆಯ ಸಾಮಾಜಿಕ ವ್ರಣಗಳು ಹಾಗೂ ಸುದೀರ್ಘ ಕಾಲದ ಜನಾಂ­ಗೀಯ ಪೂರ್ವಗ್ರಹಗಳನ್ನು ಬಡಿದೆಬ್ಬಿಸಿದಂತೆ ಆಗುತ್ತದೆ. ಅಮೆರಿಕವು ಆಷಾಢ­ಭೂತಿತನ ಮತ್ತು ಕಲ್ಪಿತ ಕೆಡುಕುಗಳ ನೆಪದಲ್ಲಿ ಇತರ ದೇಶಗಳ ವಿಚಾರದಲ್ಲಿ ಮಧ್ಯಪ್ರವೇಶಿಸುತ್ತಾ ‘ದೊಡ್ಡಣ್ಣ’ನಂತೆ ವರ್ತಿಸುತ್ತದೆ ಎಂಬ ಅಭಿಪ್ರಾಯ ಪಶ್ಚಿಮ ಏಷ್ಯಾ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿದೆ. ಭಾರತೀಯ ವ್ಯಕ್ತಿ ಮೇಲಿನ ದಾಳಿ ಇಂತಹ ನಂಬಿಕೆಯನ್ನು ಬಲಗೊಳಿಸು­ವಂತಿದೆ. ಮೊದಲು ಅವರನ್ನು ತಪಾಸಣೆ ಮಾಡಿ ಯಾವುದೇ ಶಸ್ತ್ರಾಸ್ತ್ರ ಇಲ್ಲ ಎಂಬುದು ಖಚಿತವಾಗಿದ್ದರೂ ಅಧಿಕಾರಿಗಳು ಹಲ್ಲೆ ನಡೆಸಿದ್ದು ಅಸಮರ್ಥ­ನೀಯ. ಇತರ ಜನಾಂಗದವರು ಎದುರಿಸುವ ಇಂತಹ ಕಠಿಣ ವರ್ತನೆಗಳ ಬಗ್ಗೆ ಅಮೆರಿಕದ ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.