ಪ್ರಯೋಗಶೀಲ ನಡೆ ಹೊಸ ರಾಜಕೀಯ ಆಶಯದೊಂದಿಗೆ ಆಮ್‌ ಆದ್ಮಿ ಪಾರ್ಟಿ ದೆಹಲಿಯಲ್ಲಿ ಎರಡನೇ ಸಲ ಅಧಿಕಾರಕ್ಕೆ ಬಂದಿದೆ. ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಎಂಟನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎಲ್ಲಾ ಖಾತೆಗಳನ್ನು ಸಂಪುಟದ ಸಹೋದ್ಯೋಗಿಗಳಿಗೆ ಕೇಜ್ರಿವಾಲ್‌ ಹಂಚಿಕೆ ಮಾಡಿದ್ದಾರೆ. ಯಾವುದೇ ಖಾತೆಯನ್ನು ತಮ್ಮ ಬಳಿ ಅವರು ಇಟ್ಟುಕೊಂಡಿಲ್ಲ. ಒಟ್ಟಾರೆ ಹೊಣೆಗಾರಿಕೆ ನಿಭಾಯಿಸುವುದಕ್ಕಾಗಿ ತಮ್ಮನ್ನು ಮುಕ್ತವಾಗಿರಿಸಿಕೊಳ್ಳುವ ಈ ಕ್ರಮ ಒಂದು ರೀತಿ ಪ್ರಯೋಗಶೀಲವಾದದ್ದು. ಹಲವು ಪ್ರಯೋಗಗಳಿಗೆ ಎಎಪಿ ನಾಯಕರು ಮುಂದಾಗಿದ್ದಾರೆ. ಈ ಪ್ರಯೋಗಗಳು ಎಷ್ಟರಮಟ್ಟಿಗೆ ಸಫಲವಾಗಲಿವೆ ಎನ್ನುವುದರ ಮೇಲೆ ಸರ್ಕಾರದ ಯಶಸ್ಸು ಅವಲಂಬಿಸಿದೆ. ಚುನಾವಣೆಗೆ ಮೊದಲು ಕೇಜ್ರಿವಾಲ್‌ ಅನೇಕ ಭರವಸೆಗಳನ್ನು ನೀಡಿದ್ದಾರೆ. ಜನ ಅವರಿಂದ ಆಕಾಶದಷ್ಟು ನಿರೀಕ್ಷಿಸಿದ್ದಾರೆ. ಅರ್ಧ ದರದಲ್ಲಿ ವಿದ್ಯುತ್‌, ಉಚಿತ ನೀರು, ವೈಫೈ ಸೇರಿದಂತೆ ಎಲ್ಲಾ ಆಶ್ವಾಸನೆಗಳನ್ನು ಈಡೇರಿಸುವ ತುರ್ತು ಅಗತ್ಯವಿದೆ. ಅದಕ್ಕೆ ಅಗತ್ಯವಿರುವ ಸಂಪನ್ಮೂಲ ಹೊಂದಿಸುವ ಜವಾಬ್ದಾರಿ ರಾಜ್ಯದ ಮೇಲಿದೆ. ರಾಜಧಾನಿ ಮತದಾರರು ಪರ್ಯಾಯ ರಾಜಕಾರಣಕ್ಕಾಗಿ ಎಎಪಿಯತ್ತ ಒಲಿದಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರ, ಮಾದರಿಗಳನ್ನು ರೂಪಿಸಬೇಕಾದ ಅಗತ್ಯವಿದೆ. ಸರ್ಕಾರ ಸ್ವಲ್ಪ ಎಡವಿದರೂ ಜನ ಭ್ರಮನಿರಸನಗೊಳ್ಳುವ ಅಪಾಯವಿದೆ. ಅಧಿಕಾರ ಸ್ವೀಕಾರಕ್ಕೆ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಅರವಿಂದ ಕೇಜ್ರಿವಾಲ್‌, ಕೇಂದ್ರ ಮತ್ತು ರಾಜ್ಯದ ಮಧ್ಯೆ ರಚನಾತ್ಮಕ ಸಹಕಾರದ ಮಹತ್ವವನ್ನು ಪ್ರತಿಪಾದಿಸಿದ್ದಾರೆ. ಕೇಂದ್ರದ ಸಹಕಾರವಿಲ್ಲದೆ ದೆಹಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆ ಆಗಿದೆ. ಸೌಹಾರ್ದದ ನೆಲೆಯಲ್ಲಿ ಕೇಂದ್ರ– ರಾಜ್ಯ ಸಂಬಂಧದ ಆಶಯ ವ್ಯಕ್ತವಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಅದೇ ಅವಕಾಶ ಬಳಸಿಕೊಂಡು ಪೂರ್ಣ ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಹೊಸ ಮುಖ್ಯಮಂತ್ರಿ, ಪ್ರಧಾನಿ ಮುಂದಿಟ್ಟಿದ್ದಾರೆ. ದೆಹಲಿಗೆ ಪೂರ್ಣ ರಾಜ್ಯದ ಸ್ಥಾನ ಸಿಗುವುದರಿಂದ ಪೊಲೀಸ್‌ ಮತ್ತು ನಗರಾಭಿವೃದ್ಧಿ ಇಲಾಖೆಗಳು ಹೆಚ್ಚುವರಿಯಾಗಿ ದೊರೆಯಲಿವೆ. ಈ ಇಲಾಖೆಗಳ ಮೇಲೆ ರಾಜ್ಯ ಸರ್ಕಾರಕ್ಕೆ ಈಗ ನಿಯಂತ್ರಣವಿಲ್ಲ. ಐದು ವರ್ಷದೊಳಗೆ ದೆಹಲಿಯನ್ನು ಭ್ರಷ್ಟಾಚಾರ­ಮುಕ್ತ ರಾಜ್ಯವಾಗಿ ಮಾಡುವ ವಾಗ್ದಾನವನ್ನೂ ಕೇಜ್ರಿವಾಲ್‌ ನೀಡಿದ್ದಾರೆ. ಇದು ಸವಾಲಿನ ಪ್ರಶ್ನೆ. ಇದಕ್ಕೆ ಪೂರಕವಾಗಿ ವಿವಾದಾತ್ಮಕ ಲೋಕಪಾಲ ಮಸೂದೆಗೆ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ. ಕಳೆದ ಸಲ ಜನಲೋಕಪಾಲ ಮಸೂದೆಗೆ ಬೆಂಬಲ ಸಿಗಲಿಲ್ಲವೆಂದು ಅವರು ಅಧಿಕಾರ ತ್ಯಜಿಸಿದ್ದರು. ಈ ಬಾರಿ ಮಸೂದೆ ಅಂಗೀಕಾರಕ್ಕೆ ಬಹುಮತದ ಸಮಸ್ಯೆ ಇಲ್ಲ. ಆದರೆ, ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ಕೇಂದ್ರದ ಅನುಮೋದನೆ ಬೇಕು. ಎನ್‌ಡಿಎ ಸರ್ಕಾರದ ತೀರ್ಮಾನದ ಮೇಲೆ ಮಸೂದೆಯ ಭವಿಷ್ಯ ನಿಂತಿದೆ. ಈ ಕಾರಣಕ್ಕೆ ಮಸೂದೆ ಸಂಘರ್ಷಕ್ಕೆ ದಾರಿ ಮಾಡಬಹುದೇ ಎನ್ನುವ ಸಣ್ಣ ಅನುಮಾನವೂ ಇದೆ. ಕೇಜ್ರಿವಾಲ್‌ ಉತ್ತಮ ಆಡಳಿತದ ಆಶ್ವಾಸನೆ ನೀಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ವಿವಾದ ಸೃಷ್ಟಿಸಿದ್ದ ಕೆಲವರನ್ನು ಸಂಪುಟಕ್ಕೆ ತೆಗೆದುಕೊಳ್ಳದೆ ಸರಿಯಾದ ನಿರ್ಧಾರ ಮಾಡಿದ್ದಾರೆ. ವಿಐಪಿ ಸಂಸ್ಕೃತಿಗೆ ವಿರಾಮ ಹಾಕುವುದಾಗಿ ಪ್ರಕಟಿಸಿದ್ದಾರೆ. ವಾಸ್ತವಿಕ ಪ್ರಜ್ಞೆ, ವ್ಯಾವಹಾರಿಕ ನೆಲೆಯಲ್ಲಿ ಸರ್ಕಾರ ಕೆಲಸ ಮಾಡಿದರೆ ಒಳ್ಳೆಯ ಆಡಳಿತ ನೀಡಲು ಸಾಧ್ಯ. ಜೊತೆಗೆ 70 ಸದಸ್ಯ ಬಲದ ವಿಧಾನಸಭೆಯಲ್ಲಿ 67 ಶಾಸಕರು ಎಎಪಿ ಪಕ್ಷಕ್ಕೇ ಸೇರಿದವರು. ಈ ಮಟ್ಟದ ಭಾರಿ ಬಹುಮತದ ಗುಂಗಿನಲ್ಲಿ ಪ್ರಜಾಸತ್ತಾತ್ಮಕವಾದ ರೀತಿನೀತಿಗಳು ಪೇಲವವಾಗದಂತೆ ಎಚ್ಚರ ವಹಿಸುವುದೂ ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.