ಶಾಂತಿಗಾಗಿ ಕೈಜೋಡಿಸಿ ಲಿಬಿಯಾದ ರಾಜಧಾನಿ ಟ್ರಿಪೋಲಿ ಸಮೀಪ ಈಜಿಪ್ಟ್ ನ 21 ಕ್ರಿಶ್ಚಿಯನ್ನರನ್ನು ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಸಾಮೂಹಿಕವಾಗಿ ಶಿರಚ್ಛೇದ ಮಾಡಿದ್ದಾರೆ. ಹೊಟ್ಟೆಪಾಡಿಗೆ ಉದ್ಯೋಗ ಅರಸಿ ನೆರೆಯ ಲಿಬಿಯಾಕ್ಕೆ ಹೋಗಿದ್ದ ಈ ಕ್ರಿಶ್ಚಿಯನ್ನರಿಗೂ ಮತ್ತು ಐಎಸ್‌ ನಡೆಸುತ್ತಿರುವ ಹೋರಾಟಕ್ಕೂ ಯಾವ ಸಂಬಂಧವೂ ಇರಲಿಲ್ಲ. ಇವರೆಲ್ಲ ಅಮಾಯಕರು. ಆದರೂ ಇವರನ್ನು ಒತ್ತೆ ಇಟ್ಟುಕೊಂಡು ತಲೆ ಕಡಿದು ಹಾಕಿದ್ದಾರೆ. ಈ ಕೃತ್ಯ ಅಮಾನುಷ ಹಾಗೂ ಮಾನವೀಯತೆಗೆ ಒಂದು ಕಳಂಕ. ಈ ಹಿಂದೆಯೂ ಉಗ್ರರು ಜೋರ್ಡನ್, ಜಪಾನ್‌ ಮುಂತಾದ ರಾಷ್ಟ್ರಗಳ ಒತ್ತೆಯಾಳುಗಳ ಶಿರಚ್ಛೇದ ಮಾಡಿದ್ದರು. ಇರಾಕ್‌ ಮತ್ತು ಸಿರಿಯಾದಲ್ಲಿ ತಮ್ಮದೇ ಮುಸ್ಲಿಂ ಸಮುದಾಯದೊಳಗಿನ ಅಲ್ಪಸಂಖ್ಯಾತ ಪಂಗಡವಾದ ಯೆಜಿದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ್ದರು. ಈಗ ರೋಮ್‌ ನಗರದ ಮೇಲೆ ದಾಳಿಗೆ ಸಿದ್ಧತೆ ನಡೆಸಿರುವುದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ. ಇದು ಗಂಭೀರವಾದ ಬೆದರಿಕೆ. ಏಕೆಂದರೆ ಕ್ರೈಸ್ತರ ಪವಿತ್ರ ಸ್ಥಳಗಳಲ್ಲೊಂದಾದ ವ್ಯಾಟಿಕನ್‌ ಸಹ ರೋಮ್‌ ಪಕ್ಕದಲ್ಲಿಯೇ ಇದೆ. ಇರಾಕ್‌ ಮತ್ತು ಸಿರಿಯಾದ ಕೆಲ ಭಾಗಗಳಿಗೆ ಸೀಮಿತವಾಗಿದ್ದ ಐಎಸ್‌ ಈಗ ಲಿಬಿಯಾದಲ್ಲೂ ನೆಲೆ ಕಂಡುಕೊಳ್ಳುತ್ತಿರುವುದು ಆತಂಕದ ವಿದ್ಯಮಾನ. ಸರ್ವಾಧಿಕಾರಿಯಾಗಿದ್ದ ಗಡಾಫಿ ಹತ್ಯೆ ನಂತರ ಲಿಬಿಯಾದಲ್ಲಿ ಅರಾಜಕತೆ ಮನೆ ಮಾಡಿದೆ. ಎರಡು ಸರ್ಕಾರಗಳು ಅಸ್ತಿತ್ವದಲ್ಲಿದ್ದು ಆ ದೇಶದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿವೆ. ಇವಕ್ಕೆ ಸವಾಲೊಡ್ಡುವಂತೆ ವಿವಿಧ ಉಗ್ರಗಾಮಿ ಬಣಗಳು ಕೂಡ ಸಕ್ರಿಯವಾಗಿದ್ದು ತಮ್ಮ ತಮ್ಮ ಶಕ್ತ್ಯಾನುಸಾರ ಪ್ರಮುಖ ನಗರ, ಪ್ರಾಂತಗಳ ಮೇಲೆ ಹತೋಟಿ ಸಾಧಿಸಿವೆ. ಇದರ ಲಾಭವನ್ನು ಪಡೆಯಲು ಐಎಸ್‌ ಹೊಂಚುಹಾಕುತ್ತಿದೆ. ಹೀಗಾಗಿಯೇ ಅದು ಇರಾಕ್‌, ಸಿರಿಯಾದ ಹೊರಗೆ ಇದೇ ಮೊದಲ ಸಲ ಸಾಮೂಹಿಕ ಶಿರಚ್ಛೇದ ನಡೆಸಿ ಸವಾಲೊಡ್ಡಿದೆ. ಆದರೆ, ತನ್ನ ಪ್ರಜೆಗಳ ಹತ್ಯೆಯನ್ನು ಈಜಿಪ್‌್ಟ ಹಗುರವಾಗಿ ತೆಗೆದುಕೊಂಡಿಲ್ಲ. ಲಿಬಿಯಾದೊಳಗಿನ ಐಎಸ್‌ ನೆಲೆಗಳ ಮೇಲೆ ಪ್ರತೀಕಾರ­ವಾಗಿ ವೈಮಾನಿಕ ದಾಳಿ ನಡೆಸಿ 50 ಉಗ್ರರನ್ನು ಕೊಂದಿದೆ. ಐಎಸ್‌ ಉಗ್ರರ ದಮನ ಕಾರ್ಯಾಚರಣೆಯನ್ನು ಲಿಬಿಯಾಗೂ ವಿಸ್ತರಿಸುವಂತೆ ಅಮೆರಿಕ ನೇತೃತ್ವದ ಪಡೆಗಳನ್ನು ಒತ್ತಾಯಿಸಿದೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯ ಒಡ್ಡಿರುವ ಐಎಸ್‌ ಉಗ್ರಗಾಮಿಗಳನ್ನು ಮಟ್ಟ ಹಾಕು­ವುದು ಅನಿವಾರ್ಯ. ಇದು ಬೆರಳೆಣಿಕೆಯಷ್ಟು ದೇಶಗಳಿಂದ ಆಗುವ ಕೆಲಸ ಅಲ್ಲ. ಏಕೆಂದರೆ ಭಯೋತ್ಪಾದನೆ ನಡೆಸುವ ಮತ್ತು ಪೋಷಿಸುವ ಸಂಘಟನೆ­ಗಳನ್ನು ಸದೆ ಬಡಿಯುವ ಪಾಶ್ಚಾತ್ಯ ದೇಶಗಳ ಸೇನಾ ಕಾರ್ಯಾ­ಚರಣೆ­ಗಳಿಗೆ ನೈಜೀರಿಯ, ಆಫ್ಘಾನಿಸ್ತಾನ, ಪಾಕಿಸ್ತಾನ ಮುಂತಾದ ಕಡೆ ಪೂರ್ಣ ಯಶಸ್ಸು ಸಿಕ್ಕಿಲ್ಲ ಎನ್ನುವುದನ್ನೂ ಗಮನಿಸಬೇಕು. ಅರಬ್‌ ಮತ್ತು ಇಸ್ಲಾಮಿಕ್‌ ದೇಶಗಳು ಕೂಡ ಉಗ್ರರ ಉಪಟಳದಿಂದ ನಲುಗುತ್ತಿವೆ. ಅವರನ್ನು ದಮನ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಆದರೂ ಐಎಸ್‌ ತನ್ನ ಬಲವನ್ನು ಹೆಚ್ಚಿಸಿ­ಕೊಳ್ಳುತ್ತಲೇ ಇದೆ. ಆದ್ದರಿಂದ ಇಡೀ ವಿಶ್ವವೇ ಈ ವಿಷಯದಲ್ಲಿ ಸಂಘಟಿತ­ವಾಗಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡ ಮಧ್ಯಪ್ರವೇಶ ಮಾಡಬೇಕು. ಉಗ್ರರ ಹಾವಳಿಯಿಂದ ಮುಕ್ತವಾದ ವಿಶ್ವ ವ್ಯವಸ್ಥೆ ಅಸ್ತಿತ್ವಕ್ಕೆ ತರಲು ಪ್ರತಿಯೊಂದು ದೇಶವೂ ಶ್ರಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.