ಹೊಸ ಭರವಸೆ ಮೈತ್ರಿಪಾಲ ಸಿರಿಸೇನ ಅವರು ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ವಿದೇಶ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡ ರಾಷ್ಟ್ರ ಭಾರತ. ಈ ಭೇಟಿ, ಭಾರತ ಹಾಗೂ ಶ್ರೀಲಂಕಾ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಅಧ್ಯಾಯದ ಭರವಸೆಯನ್ನು ಮೂಡಿಸಿದೆ. ಈ ಮೂಲಕ ಶ್ರೀಲಂಕಾ ಅಧ್ಯಕ್ಷರು ತಮ್ಮ ಆದ್ಯತೆಯನ್ನು ಪ್ರದರ್ಶಿಸಿ­ದ್ದಾರೆ. ಈ ಭೇಟಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ವ್ಯಾಪಾರ ಹೆಚ್ಚಳ ಉದ್ದೇಶದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಹಾಗೆಯೇ ಇದೇ ಮೊದಲ ಬಾರಿಗೆ ಭಾರತದೊಂದಿಗೆ ನಾಗರಿಕ ಅಣು ಒಪ್ಪಂದವನ್ನೂ ಶ್ರೀಲಂಕಾ ಮಾಡಿಕೊಂಡಿರುವುದು ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ವಿಶ್ವಾಸಕ್ಕೆ ದ್ಯೋತಕವಾಗಿದೆ. ಉಭಯ ದೇಶಗಳ ಮೀನುಗಾರರ ವಿಚಾರಕ್ಕೆ ಸಂಬಂಧಿ­ಸಿ­ದಂತೆ ರಚನಾತ್ಮಕ ಹಾಗೂ ಮಾನವೀಯ ನೆಲೆಯಲ್ಲಿ ಪರಿಹಾರ­ಗಳನ್ನು ಕಂಡುಕೊಳ್ಳಲು ಸಿದ್ಧರಾಗಿರುವುದು ಸಕಾರಾತ್ಮಕ ನಡೆ. ಜೊತೆಗೆ ಮಾಲ್ಡೀವ್ಸ್ ಒಳಗೊಂಡ ಸಾಗರ ಭದ್ರತಾ ಸಹಕಾರದಲ್ಲಿನ ಪ್ರಗತಿಗೂ ಈ ಭೇಟಿಯಲ್ಲಿ ಒತ್ತು ನೀಡಿರುವುದು ಮುಖ್ಯವಾದದ್ದು. ಶ್ರೀಲಂಕಾದ ಈ ಹಿಂದಿನ ಅಧ್ಯಕ್ಷರಾಗಿದ್ದ ಮಹಿಂದಾ ರಾಜಪಕ್ಸೆ ಅವರು ಚೀನಾದತ್ತ ಹೆಚ್ಚಿನ ಒಲವು ಹೊಂದಿದ್ದರು. ಭಾರತ– ಶ್ರೀಲಂಕಾ ನಡುವಿನ ಆಯಕಟ್ಟಿನ ಬಾಂಧ­ವ್ಯಕ್ಕೆ ಈ ಬೆಳವಣಿಗೆ ಹಿತಕರವಾಗಿರಲಿಲ್ಲ. ಈಗ ಉಭಯ ದೇಶಗಳಲ್ಲೂ ಹೊಸ ನಾಯಕತ್ವ ಹೊಸ ಬಾಂಧವ್ಯದ ಬೆಳವಣಿಗೆಗೆ ಮುನ್ನುಡಿ ಬರೆದಿರು­ವುದು ಆಶಾದಾಯಕ. ಎಲ್‌ಟಿಟಿಇ ವಿರುದ್ಧದ ಶ್ರೀಲಂಕಾದ ಅಂತರ್ಯುದ್ಧ 2009ರಲ್ಲಿ ಮುಕ್ತಾಯಗೊಂಡು ಮಿಲಿಟರಿ ವಿಜಯ ಸಾಧ್ಯವಾಗಿತ್ತು. ಆದರೆ ಯುದ್ಧದ ನಂತರ ಜನರಲ್ಲಿ ವಿಶ್ವಾಸ ಹಾಗೂ ರಾಷ್ಟ್ರೀಯ ಏಕತೆಯನ್ನು ಪುನರ್ ಸ್ಥಾಪಿಸುವಲ್ಲಿ ಹೆಚ್ಚಿನ ಕೆಲಸಗಳಾಗಲಿಲ್ಲ ಎಂಬುದು ಶ್ರೀಲಂಕಾ ತಮಿಳರ ದೂರಾಗಿತ್ತು. ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರಿರುವುದರಿಂದ ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ಇದು ಭಾವನಾತ್ಮಕವಾದ ವಿಚಾರವಾಗಿ ಅನುರಣನಗೊಳ್ಳುತ್ತಿತ್ತು. ಆದರೆ ಶ್ರೀಲಂಕಾ ಜೊತೆಗಿನ ಬಾಂಧವ್ಯದಲ್ಲಿ ಭಾರತದ ಹಿತವನ್ನು ಕಡೆಗಣಿಸಲಾಗದು. ಸಮತೋಲನದ ಬಾಂಧವ್ಯ ಅಗತ್ಯ. ಈಗ ಈ ವಿಚಾರದ ರಾಜಕೀಯ ಪರಿಹಾರಕ್ಕೆ ಕಾಲ ಪಕ್ವವಾಗಿದೆ. ತಮಿಳು ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನಗಳ ಪುನರುಜ್ಜೀವಕ್ಕೆ ಸಿರಿಸೇನ ಮುಂದಾಗಿದ್ದಾರೆ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಬೆಂಬಲ ದಕ್ಕಲಿದೆ ಎಂಬ ಆಶಯವೂ ಶ್ರೀಲಂಕಾಗಿದೆ. ಇದಕ್ಕೆ ತ್ವದಿರುದ್ಧವಾಗಿ ರಾಜಪಕ್ಸೆ ಅವರು ಈ ವಿಚಾರದಲ್ಲಿ ಚೀನಾ ಹಾಗೂ ರಷ್ಯಾ ಸಹಕಾರ ಬಯಸಿದ್ದರು. ಜಿನೀವಾದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ (ಯುಎನ್‌ಎಚ್‌ಆರ್‌ಸಿ) ಸಭೆಯಲ್ಲಿ ಭಾರತ ಕೊಲಂಬೊವನ್ನು ಬೆಂಬಲಿಸಬೇಕೆಂಬ ಆಶಯವನ್ನು ಶ್ರೀಲಂಕಾ ಹೊಂದಿದೆ. ಈ ಮಧ್ಯೆ ಮುಂದಿನ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾಗೆ ನರೇಂದ್ರ ಮೋದಿಯವರು ಭೇಟಿ ನೀಡಲಿರುವುದೂ ಒಳ್ಳೆಯ ಬೆಳವಣಿಗೆ. ಕಳೆದ 25 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡಲಿರುವ ಮೊದಲ ಭೇಟಿಯಾಗಲಿದೆ ಇದು. ಇಂಧನ, ರಕ್ಷಣೆ, ಭದ್ರತೆ, ಶಿಕ್ಷಣ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ನಿಕಟವಾಗಿ ಉಭಯ ದೇಶಗಳು ಕಾರ್ಯ ನಿರ್ವಹಿಸಲಿದ್ದು ಮೈತ್ರಿ ಬಲವರ್ಧನೆಗೆ ಸಹಕಾರಿಯಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.