‘ಕಲ್ಲಿದ್ದಲು’ ವರಮಾನ ಕಲ್ಲಿದ್ದಲು ಗಣಿಗಳ ‘ಇ ಹರಾಜು’ ಪಾರದರ್ಶಕವಾಗಿ ನಡೆಯುತ್ತಿದ್ದು, ನಿರೀಕ್ಷೆಗಿಂತ ಹೆಚ್ಚು ಹಣವನ್ನು ಬೊಕ್ಕಸಕ್ಕೆ ತಂದುಕೊಡುತ್ತಿದೆ. ಸುಪ್ರೀಂ­ಕೋರ್ಟ್ ಸೂಚನೆಯಂತೆ 204 ಗಣಿಗಳನ್ನು 30 ವರ್ಷಗಳ ಅವಧಿಗೆ ಹರಾಜಿಗೆ ಇಡಲಾಗಿತ್ತು. ಈ ಪೈಕಿ 18 ಗಣಿಗಳ ಹರಾಜು ಪೂರ್ಣ­ಗೊಂಡಿದೆ. ಇವಿಷ್ಟರಿಂದಲೇ ಸುಮಾರು ರೂ 1 ಲಕ್ಷ ಕೋಟಿ ವರಮಾನ ದೊರೆ­ಯಲಿದೆ. ಇನ್ನುಳಿದ ಗಣಿಗಳ ಹರಾಜು ಮಾರ್ಚ್ ಮೊದಲ ವಾರದೊಳಗೆ ಪೂರ್ಣ­ಗೊಳ್ಳಲಿದೆ. ಕಲ್ಲಿದ್ದಲು ನಿಕ್ಷೇಪಗಳಿರುವ ಒಡಿಶಾ, ಜಾರ್ಖಂಡ್, ಛತ್ತೀಸ­ಗಡ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಅರುಣಾಚಲ ಪ್ರದೇಶಗಳಿಗೆ ಆಗ ಸುಮಾರು ರೂ 15 ಲಕ್ಷ ಕೋಟಿಯಷ್ಟು ಭಾರೀ ಆದಾಯ, ಅಂದರೆ ವರ್ಷಕ್ಕೆ ಸರಾಸರಿ ರೂ 50 ಸಾವಿರ ಕೋಟಿ ದೊರೆ­ಯಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಇದು ಸಣ್ಣ ಮೊತ್ತವಲ್ಲ. ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಈ ರಾಜ್ಯ­ಗಳಿಗೆ ಅನಾಯಾಸ ಆದಾಯ ಮೂಲವೊಂದು ಸಿಕ್ಕಿದೆ. ರೆ ರಾಜ್ಯಗಳಿಗೂ ಪರೋಕ್ಷವಾಗಿ ಪ್ರಯೋಜನ­ವಾಗುವ ಇನ್ನೊಂದು ಅಂಶವನ್ನೂ ಹರಾಜಿನಲ್ಲಿ ಅಳವಡಿಸಲಾಗಿದೆ. ಹೀಗಾಗಿ, ವಿದ್ಯುತ್ ಸ್ಥಾವರಗಳಿಗೆ ಪೂರೈಸುವ ಕಲ್ಲಿದ್ದ­ಲಿನ ಗಣಿಗಾರಿಕೆಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ದರವನ್ನು ಬಿಡ್ ಮಾಡಬಹುದು. ಇದೊಂದೇ ಬಾಬ್ತಿನಲ್ಲಿ ಖಾಸಗಿ ಗಣಿ ಕಂಪೆನಿಗಳಿಗೆ ರೂ 37,050 ಕೋಟಿ ಲಾಭವಾಗಿದೆ. ಇದನ್ನು ಅವು ವಿದ್ಯುತ್ ಉತ್ಪಾದನಾ ಸಂಸ್ಥೆ­ಗಳಿಗೆ ವರ್ಗಾಯಿಸ­ಬೇಕಾಗುತ್ತದೆ. ಅದಕ್ಕೆ ಅನುಗುಣವಾಗಿ ವಿದ್ಯುತ್ ದರಗಳೂ ಇಳಿದು ದೇಶದೆಲ್ಲೆಡೆಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂಬುದು ಇಲ್ಲಿ ಮುಖ್ಯವಾದುದು. ಭಾರತದ ಮಹಾ ಲೆಕ್ಕಪರಿಶೋಧಕರಾಗಿದ್ದ (ಸಿಎಜಿ) ವಿನೋದ್ ರಾಯ್ ಪರಿಶ್ರಮ ಮತ್ತು ಸುಪ್ರೀಂ ಕೋರ್ಟ್ ಕಳಕಳಿ ಈ ವಿದ್ಯಮಾನದ ಹಿಂದಿದೆ ಎಂಬು­ದನ್ನು ಮರೆಯುವಂತೆಯೇ ಇಲ್ಲ. ಸರ್ಕಾರದ ತಪ್ಪು ನೀತಿ, ಮನಸೋ ಇಚ್ಛೆ ನಡೆಯಿಂದಾಗಿ ಕಲ್ಲಿದ್ದಲು ಗಣಿಗಾರಿಕೆಯಿಂದ ಬೊಕ್ಕಸಕ್ಕೆ ರೂ1.86 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂಬ ಸಂಗತಿಯನ್ನು ರಾಯ್ ಅವರು 2012­­ರಲ್ಲಿ ಬೆಳಕಿಗೆ ತಂದಿದ್ದರು. ಆದರೆ ಈ ಲೆಕ್ಕಾಚಾರ ವಿಶ್ವಾಸಾರ್ಹ­ವಾದುದಲ್ಲ ಎಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಯುಪಿಎ ಸರ್ಕಾರ ಸ್ಪರ್ಧಾತ್ಮಕ ಹರಾಜು ನಡೆಸದೆ ತೋಚಿದ ದರಕ್ಕೆ ಖಾಸಗಿ ಕಂಪೆನಿ­ಗಳಿಗೆ ಗಣಿಗಳನ್ನು ಕೊಟ್ಟಿದ್ದರಿಂದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿತ್ತು. ಆದರೆ ಇದು ‘ಶುದ್ಧ ಸುಳ್ಳು, ನಷ್ಟದ ಅಂದಾಜನ್ನು ಉತ್ಪ್ರೇಕ್ಷೆ­ಗೊಳಿಸಲಾಗಿದೆ’ ಎಂದೇ ಯುಪಿಎ ಸರ್ಕಾರ ವಾದಿಸುತ್ತಲೇ ಬಂದಿ­­ತ್ತು. ಈಗ ಹರಾಜಿನಲ್ಲಿ ಪಾಲ್ಗೊಳ್ಳಲು ಖಾಸಗಿ ಸಂಸ್ಥೆಗಳು ನಡೆಸುತ್ತಿ­ರುವ ಪೈಪೋಟಿ, ಅದರಿಂದ ಬರುತ್ತಿರುವ ವರಮಾನ ನೋಡಿದರೆ ರಾಯ್ ಅವರ ವರದಿ ಅತಿರಂಜಿತ ಅಲ್ಲ ಎಂಬುದು ಸಾಬೀತಾಗಿದೆ. ಕೈಗಾರಿಕಾ ಪ್ರಗ­ತಿಗೆ ಮೂಲಾಧಾರವಾದ ಕಲ್ಲಿದ್ದಲು ನಮ್ಮ ರಾಷ್ಟ್ರೀಯ ಸಂಪತ್ತು. ಈ ದಶ­ಕದ ಕೊನೆಯೊಳಗೆ ಕಲ್ಲಿದ್ದಲು ಬಳಕೆಯಲ್ಲಿ ನಾವು ಅಮೆರಿಕವನ್ನು ಹಿಂದಿಕ್ಕಿ ವಿಶ್ವ­ದಲ್ಲಿ ಎರಡನೇ ಸ್ಥಾನಕ್ಕೆ ಏರಲಿದ್ದೇವೆ. ಆದ್ದರಿಂದಲೇ ಅದಕ್ಕೆ ಅಪಾರ ಬೇಡಿಕೆ, ಬೆಲೆ. ಅದನ್ನು ಅರ್ಥ ಮಾಡಿಕೊಂಡಿದ್ದರೆ ಯುಪಿಎಗೆ ಕಲ್ಲಿದ್ದಲು ಕಳಂಕ ಮೆತ್ತಿಕೊಳ್ಳುತ್ತಿರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.