ಎಚ್ಚರಿಕೆ ಗಂಟೆ ಕೇಂದ್ರದ ಎನ್‌ಡಿಎ ಸರ್ಕಾರದ ಈವರೆಗಿನ ಸಾಧನೆಯ ಬಗ್ಗೆ ಎಚ್‌ಡಿ­ಎಫ್‌ಸಿ ಅಧ್ಯಕ್ಷ ದೀಪಕ್‌ ಪಾರೇಖ್‌ ಅವರು ಅಸಮಾ­ಧಾನ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬ­ರಾಗಿರುವ ಪಾರೇಖ್‌, ಕೈಗಾರಿಕೆ ಮತ್ತು ಉದ್ಯಮ ವಲಯದ ಸಮಷ್ಟಿ ದೃಷ್ಟಿಕೋನ ಹಾಗೂ ಭಾವನೆಗಳನ್ನು ಆಗಾಗ್ಗೆ ವ್ಯಕ್ತಪಡಿಸುತ್ತಾರೆ. ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ನೀತಿ ನಿರೂಪಣೆಗೆ ಸಂಬಂಧಿಸಿದ ನಿಷ್ಕ್ರಿಯತೆಯನ್ನೂ ಅವರು ಟೀಕಿಸಿದ್ದರು. ಇದೀಗ ಎನ್‌ಡಿಎ ಸರ್ಕಾರದ ಒಂಬತ್ತು ತಿಂಗಳ ಆಡಳಿತಾವಧಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣದಿರುವು­ದರಿಂದ ಉದ್ಯಮಿಗಳಲ್ಲಿ ಅಸಮಾಧಾನ ಮೂಡಲಾರಂಭಿಸಿದೆ ಎಂದು ಅವರು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ಮತ್ತು ವಿವಿಧ ಸರಕುಗಳ ಧಾರಣೆ ಇಳಿಕೆಯಿಂದ ಸರ್ಕಾರದ ಈ­ವರೆ­ಗಿನ ಅವಧಿ ಅದೃಷ್ಟದ್ದಾಗಿತ್ತು ಎಂಬುದನ್ನೂ ಪಾರೇಖ್‌ ಉಲ್ಲೇಖಿಸಿದ್ದಾರೆ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದಲ್ಲಿ ಉದ್ದಿಮೆ ನಡೆಸಲು ಅನೇಕ ಆಡಳಿತಾತ್ಮಕ ಅಡೆತಡೆಗಳಿವೆ. ವಾಣಿಜ್ಯೋದ್ಯಮ ಸುಗಮ ವಹಿವಾಟಿಗೆ ಅನುವು ಮಾಡಿಕೊಡುವ ದೇಶಗಳನ್ನು ಒಳಗೊಂಡ ವಿಶ್ವಬ್ಯಾಂಕ್‌ ಸೂಚ್ಯಂಕದಲ್ಲಿ ಭಾರತ ಅತ್ಯಂತ ಕೆಳಗಿರುವುದೇ ಇದಕ್ಕೆ ಉದಾಹರಣೆ. ದೇಶದ ಈಗಿರುವ 142ನೇ ಸ್ಥಾನವನ್ನು ವರ್ಷದೊಳಗೆ 50ನೇ ಸ್ಥಾನದ ಆಸುಪಾಸಿಗೆ ತಂದು ನಿಲ್ಲಿಸುವುದಾಗಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಭರವಸೆ ನೀಡಿತ್ತು. ಅದು ಸಾಧ್ಯವಾಗಿಲ್ಲ. ಇದು ಅಧಿಕಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಮೋದಿ ಇಂತಹವುಗಳಿಗೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ ಎಂದೇ ಪರಿಗಣಿಸಲಾಗಿತ್ತು. ನೀತಿಯ ಮಟ್ಟದಲ್ಲೂ ಗೊಂದಲ ಮತ್ತು ಅನಿಶ್ಚಿತತೆ ಮೂಡಿದೆ. ವಿಮೆ, ಗಣಿ ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದ ಶಾಸನಬದ್ಧ ಕ್ರಮಗಳ ಗತಿಯೂ ಅನಿಶ್ಚಿತವಾಗಿದೆ. ಹಿಂದಿನ ತೆರಿಗೆ ಕಾನೂನನ್ನು ರದ್ದುಮಾಡುವುದಾಗಿ ಸರ್ಕಾರ ಹೇಳಿತ್ತಾದರೂ ಅದಿನ್ನೂ ಅಸ್ತಿತ್ವದಲ್ಲೇ ಇದೆ. ಜಪಾನ್‌ನ ಆರ್ಥಿಕ ನೆರವಿಗೆ ಸಂಬಂಧಿಸಿದ ವಿಷಯದಿಂದಾಗಿ ದೆಹಲಿ– ಮುಂಬೈ ಕೈಗಾರಿಕಾ ಕಾರಿಡಾರ್‌ ಯೋಜನೆ ನನೆಗುದಿಯಲ್ಲಿದೆ. ‘ಭಾರತದಲ್ಲೇ ತಯಾರಿಸಿ’ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವ ಪ್ರಯತ್ನಕ್ಕಿಂತ ಅದರ ಪ್ರಚಾರದ ಭರಾಟೆಯೇ ಹೆಚ್ಚಾಗಿದೆ. ಬ್ಯಾಂಕಿಂಗ್‌ ವಲಯದಲ್ಲಿನ ಸುಧಾರಣೆಗಳು ಇನ್ನಷ್ಟೇ ಕಾರ್ಯರೂಪಕ್ಕೆ ಬರಬೇಕಿದೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಷೇರು ಮಾರುಕಟ್ಟೆ ಸ್ಥಿರವಾಗಿದ್ದರೂ ಬಂಡವಾಳ ಹಿಂತೆಗೆತ ಯೋಜನೆ ಮಂದಗತಿಯಲ್ಲಿದೆ. ನೀತಿ ನಿರೂಪಣೆ ಹಾಗೂ ಜಾರಿಗೆ ಸಂಬಂಧಿಸಿದ ಕೆಲವು ವಲಯಗಳಲ್ಲಿ ಸರ್ಕಾರ ತನ್ನ ಉದ್ದೇಶಗಳನ್ನು ಹೊರಗೆಡವಿರಬಹುದು ಅಥವಾ ಕೆಲವು ಸುಧಾರಣಾ ಕ್ರಮಗಳಿಗೂ ಮುಂದಾಗಿರಬಹುದು. ಆದರೆ ಹೇಳಿಕೆಗೂ ಜಾರಿಗೂ ಸಾಕಷ್ಟು ವ್ಯತ್ಯಾಸ ಇರುವುದರಿಂದ ಮಾತು– ಕೃತಿಯ ನಡುವಿನ ಅಂತರ ಹೆಚ್ಚುತ್ತಲೇ ಹೋಗುತ್ತಿದೆ. ಅಪಾರ ಆಶಾವಾದ ಇದೆಯಾದರೂ ಅದು ಆದಾಯ ತರುವ ಅಂಶವಾಗಿ ಪರಿವರ್ತನೆಗೊಳ್ಳುತ್ತಿಲ್ಲ ಎಂಬ ಪಾರೇಖ್‌ ಮಾತು ಗಳನ್ನು ಎಚ್ಚರಿಕೆಯ ಕರೆಗಂಟೆಯಾಗಿ ಸರ್ಕಾರ ಗ್ರಹಿಸಬೇಕು. ಅವರು ಸರ್ಕಾರದ ಎದುರಾಳಿ ಅಲ್ಲ. ಹೀಗಾಗಿ, ಬೋಧಪ್ರದವಾಗಿರುವ ಹಾಗೂ ಗಂಭೀರವಾದ ಅವರ ಹೇಳಿಕೆಗಳತ್ತ ಸರ್ಕಾರ ಲಕ್ಷ್ಯ ಹರಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.