ಹಾದಿ ಸುಲಭವಲ್ಲ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್‌ ಕುಮಾರ್‌ ಮತ್ತೆ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ರಾಜಕೀಯ ಅನಿಶ್ಚಯ ಕೊನೆಗೊಂಡಿದೆ. ಆದರೆ, ಈ ಹೊಸ ಬೆಳವಣಿಗೆ ರಾಜಕೀಯ ಮರುಹೊಂದಾಣಿಕೆಗೆ ದಾರಿಯಾಗುವ ಸಾಧ್ಯತೆಯಿದೆ. ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ನಿತೀಶ್‌ ಜವಾಬ್ದಾರಿ ಹೊತ್ತಿದ್ದಾರೆ. ಅವರ ಮುಂದಿರುವುದು ಕಠಿಣವಾದ ಹಾದಿ. ಅಕ್ಟೋಬರ್‌ ಒಳಗೆ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಜೀತನ್‌ ರಾಂ ಮಾಂಝಿ ಅವರ ಜತೆಗಿನ ಕಿತ್ತಾಟದಿಂದ ಹಾನಿಗೊಳಗಾಗಿರುವ ಪಕ್ಷವನ್ನು ಪುನರ್‌ಸಂಘಟಿಸಿ, ಚುನಾವಣೆಗೆ ಸಜ್ಜುಗೊಳಿಸುವುದು ಹುಡುಗಾಟದ ವಿಷಯವಲ್ಲ. ಉಳಿದಿರುವ ಕಡಿಮೆ ಅವಧಿಯಲ್ಲಿ ಈ ಕೆಲಸ ಮಾಡಬೇಕಿದೆ. ಹಳಿ ತಪ್ಪಿರುವ ಆಡಳಿತವನ್ನು ತಕ್ಷಣ ಸರಿದಾರಿಗೆ ತರಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿಂದಿನ ಸರ್ಕಾರದ ನಿರ್ಧಾರಗಳನ್ನು ಪುನರ್‌ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. ಮಾಂಝಿ ಅವರು ಕುರ್ಚಿ ಖಾಲಿ ಮಾಡಿದರೂ ರಾಜಕೀಯ ಗೊಂದಲ ಸಂಪೂರ್ಣ ನಿವಾರಣೆಯಾದಂತೆ ಕಾಣುವುದಿಲ್ಲ. ಮಾಂಝಿ ಹಾಗೂ ನಿತೀಶ್‌ ಕುಮಾರ್‌ ಅವಕಾಶವಾದಿಗಳಾಗಿ ವರ್ತಿಸಿದ್ದಾರೆ. ಮಹಾದಲಿತ ಸಮುದಾಯದ ನಾಯಕ ಮಾಂಝಿ, ಜಾತಿ ಬಲದಿಂದ ನಿತೀಶ್‌ ವಿರುದ್ಧೆ ತಿರುಗಿಬಿದ್ದಿದ್ದಾರೆ. ಇಬ್ಬರೂ ನಾಯಕರ ನಡುವಿನ ಕಿತ್ತಾಟದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಕೆಲಸ ಮಾಡಿದೆ. ರಾಜಕೀಯದಲ್ಲಿ ಪಳಗಿರುವ ನಿತೀಶ್‌ ಅವರು ಸಂಯಮದಿಂದ ಸಮಸ್ಯೆ ನಿವಾರಿಸಬಹುದಿತ್ತು. ಅವರೂ ಅವಸರ ಮಾಡಿದರು. ಅಧಿಕಾರದ ಮೋಹಕ್ಕೆ ಒಲಿದರು.ಮಾಂಝಿ ರಾಜೀನಾಮೆಯಿಂದ ಸದ್ಯಕ್ಕೆ ಜೆಡಿ(ಯು) ಗೊಂದಲ ನಿವಾರಣೆಯಾಗಿದೆ. ಆದರೆ, ರಾಜ್ಯದ ರಾಜಕೀಯ ನಾಟಕ ಚುನಾವಣೆ ಮುಗಿಯುವವರೆಗೂ ಬೇರೆ ಬೇರೆ ರೂಪದಲ್ಲಿ ಮುಂದುವರಿಯುವ ಸಂಭವವಿದೆ. ಬಿಹಾರದಲ್ಲಿ ಬಿಜೆಪಿ ಪ್ರಬಲವಾಗುವುದನ್ನು ತಡೆಯಲು ನಿತೀಶ್‌ ಹಾಗೂ ಆರ್‌ಜೆಡಿ ಮುಖಂಡ ಲಾಲುಪ್ರಸಾದ್‌ ಒಂದಾಗಿದ್ದಾರೆ. ಸತತವಾಗಿ ಸೋಲಿನ ಕಹಿ ಅನುಭವಿಸಿರುವ ಕಾಂಗ್ರೆಸ್‌ ಕೂಡಾ ಜೆಡಿ(ಯು) ಮತ್ತು ಆರ್‌ಜೆಡಿ ಜತೆ ಕೈಜೋಡಿಸಿದೆ. ಈ ಮೈತ್ರಿ ಚುನಾವಣೆಯಲ್ಲೂ ಮುಂದುವರಿಯುವುದೇ ಎಂಬುದು ಸ್ಪಷ್ಟವಾಗಬೇಕಿದೆ. ಹಿಂದೆ ಲಾಲು ಪ್ರಸಾದ್‌ ಅವರ ಆಡಳಿತವನ್ನು ನಿತೀಶ್‌ ಕುಮಾರ್‌ ‘ಜಂಗಲ್‌ ರಾಜ್‌’ಗೆ ಹೋಲಿಸಿದ್ದರು. ಈಗ ಅವರ ಜತೆಗೇ ಹೆಜ್ಜೆ ಇಡಬೇಕಾದ ವಿಪರ್ಯಾಸ ಎದುರಾಗಿದೆ. 2010ರ ಚುನಾವಣೆಯಲ್ಲಿ ಜೆಡಿ(ಯು) ಮಿತ್ರ ಪಕ್ಷವಾಗಿದ್ದ ಬಿಜೆಪಿ ಹೊಸ ಪಾಲುದಾರರನ್ನು ಹುಡುಕಬೇಕಿದೆ. ರಾಮ್‌ವಿಲಾಸ್‌ ಪಾಸ್ವಾನ್‌ ಈಗಾಗಲೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಭಾಗಿಯಾಗಿದ್ದಾರೆ. ಮಾಂಝಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮಾಂಝಿ ಸದ್ಯಕ್ಕೆ ಮೌನವಾಗಿದ್ದಾರೆ. ಅವರ ಮುಂದಿನ ನಡೆ ಕುರಿತು ಗುಟ್ಟು ಬಿಟ್ಟುಕೊಟ್ಟಿಲ್ಲ. ಒಟ್ಟಾರೆ ಬಿಹಾರ ರಾಜಕಾರಣ ಕುತೂಹಲ ಘಟ್ಟ ತಲುಪಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.