ಗೊಂದಲ ಬಗೆಹರಿಯಲಿ ಶಂಕಿತ ಭಯೋತ್ಪಾದನಾ ಸಂಪರ್ಕ ಹೊಂದಿದ್ದಿರಬಹುದಾದ ಪಾಕಿಸ್ತಾನ ದೋಣಿಯೊಂದನ್ನು ಸ್ಫೋಟಿಸಲು ತಾವೇ ಆದೇಶ ನೀಡಿದ್ದುದಾಗಿ ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ.ಲೋಶಾಲಿ ನೀಡಿದ ಹೇಳಿಕೆ ಹಾಗೂ ನಂತರದ ವಿದ್ಯಮಾನಗಳು ಅನೇಕ ಅನುಮಾನಗಳಿಗೆ ಆಸ್ಪದ ನೀಡಿವೆ. ಜನವರಿ 1ರ ಬೆಳಗಿನ ಜಾವ ಗುಜರಾತ್ ಸಮುದ್ರ ವ್ಯಾಪ್ತಿಯಲ್ಲಿ ಭಾರತದ ಕರಾವಳಿ ಕಾವಲು ಪಡೆಯ ಕಣ್ಣಿಗೆ ಬಿದ್ದ ದೋಣಿ ನಂತರ ಅನುಮಾನಾಸ್ಪದವಾಗಿ ಸ್ಫೋಟಗೊಂಡು ಹೊತ್ತಿ ಉರಿದು ನಾಶವಾಯಿತು. ಈ ದೋಣಿಯಲ್ಲಿ ನಾಲ್ವರಿದ್ದರು ಎಂದು ರಕ್ಷಣಾ ಸಚಿವಾಲಯ ಹೇಳಿತ್ತು. ದೋಣಿಯಲ್ಲಿದ್ದವರೇ ಸಯನೈಡ್ ಸೇವಿಸಿದ್ದರು ಎಂಬಂಥ ಮತ್ತೊಂದು ವ್ಯಾಖ್ಯಾನವೂ ಚಾಲ್ತಿಯಲ್ಲಿತ್ತು. ಈ ದೋಣಿಯನ್ನು ದೀರ್ಘ ಕಾಲದವರೆಗೆ ಬೆನ್ನಟ್ಟಿದ ಭಾರತದ ಕರಾವಳಿ ಪಡೆಗೆ ಅದನ್ನು ಹಿಡಿಯಲಾಗಲಿಲ್ಲ ಎಂಬಂ­ತಹ ಮಾತು ನಂಬುವುದಕ್ಕೆ ಕಷ್ಟವಾದುದು. ಆದರೆ ಈಗ ಲೋಶಾಲಿ ಅವರ ಹೇಳಿಕೆ, ಈ ವಿಚಾರದಲ್ಲಿ ಸರ್ಕಾರದ ನಿಲುವಿನ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕಥನಗಳು ಜನರಲ್ಲಿ ಗೊಂದಲ ಸೃಷ್ಟಿಸಿವೆ. ರಕ್ಷಣಾ ಪಡೆ­ಗಳು ಕಟ್ಟೆಚ್ಚರ ವಹಿಸಿದ್ದರಿಂದ 26/11 ರ ಮುಂಬೈ ದಾಳಿ ಮಾದರಿಯ ದುರಂತದಿಂದ ದೇಶ ಬಚಾವಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ರಾಜಕೀಯ ಲಾಭ ಪಡೆಯುವ ಉದ್ದೇಶದ ಇಂತಹ ಹೇಳಿಕೆಗಳು ವಿಶ್ವಾಸಾರ್ಹತೆಗೆ ಧಕ್ಕೆ ಮಾಡುವಂತಹದ್ದಾಗಿರಬಾರದು. ಸ್ಫೋಟಗೊಂಡ ದೋಣಿಯಲ್ಲಿದ್ದವರು ಭಯೋತ್ಪಾದಕರು ಎಂಬುದಕ್ಕೆ ಯಾವುದೇ ಸುಳಿವು ಅಥವಾ ಸಾಕ್ಷ್ಯಾಧಾರ ಈವರೆಗೆ ದೊರಕಿಲ್ಲ. ಈ ಕುರಿತು ತನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಸರ್ಕಾರ ಬಯಲುಮಾಡಿಲ್ಲ. ಅಡ್ಡಾದಿಡ್ಡಿ ಹೇಳಿಕೆಗಳು ವೃಥಾ ಅನುಮಾನಗಳಿಗೆ ಇಂಬು ಮಾಡಿಕೊಡುತ್ತವೆ. ಪ್ರಕರಣದ ಬಗ್ಗೆ ಜನರೆದುರು ವಾಸ್ತವ ಬಿಚ್ಚಿಡುವುದಾಗಿ ರಕ್ಷಣಾ ಸಚಿವ ಮನೋಹರ ಪರಿ­ಕ್ಕರ್‌ ಹೇಳಿ ವಾರಗಳೇ ಕಳೆದಿದ್ದರೂ, ಯಾವ ವಿವರವನ್ನೂ ನೀಡಿಲ್ಲ. ಈ ಕುರಿತ ಚರ್ಚೆಗಳಿಂದ ದೇಶದ ಭದ್ರತೆಗೆ ಆಪತ್ತು, ಅಲ್ಲದೆ ಪಾಕಿ­ಸ್ತಾನಕ್ಕೆ ಉತ್ತೇಜನ ದೊರೆಯಲಿದೆ ಎನ್ನುವಂತಹ ವಾದಗಳಲ್ಲಿ ಹುರುಳಿಲ್ಲ. ಇಂತಹ ಪ್ರಕರಣಗಳನ್ನು ಯಾವುದೇ ದೇಶದ ಸರ್ಕಾರ ರಾಜಕೀಯ ಲಾಭಕ್ಕೆ ಬಳಸಬಾರದು. ಇದು ಅಂತರರಾಷ್ಟ್ರೀಯ ವಲಯದಲ್ಲಿ ಸರ್ಕಾರದ ವಿಶ್ವಾಸಾರ್ಹತೆಯ ಪ್ರಶ್ನೆಯಾ­ಗುತ್ತದೆ ಎಂಬುದು ಗಮನದಲ್ಲಿರಬೇಕು. ಭದ್ರತಾ ವಿಚಾರಗಳಿಗೆ ಸಂಬಂಧಿಸಿದಂತೆ ತಪ್ಪು ಪ್ರತಿ­ಪಾದನೆಗಳಿಗೆ ಅವಕಾಶ ಇರಬಾರದು. ಸದ್ಯದಲ್ಲೇ ಭಾರತ ಹಾಗೂ ಪಾಕಿ­ಸ್ತಾನದ ಮಧ್ಯೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆಗಳು ನಡೆಯಲಿವೆ. ಮಾತುಕತೆಯಲ್ಲಿ ಪ್ರಗತಿ ಸಾಧಿಸಲು ಸರ್ಕಾರ ಬದ್ಧವಾಗಿರುವ ಸಂದರ್ಭದಲ್ಲಿ ಇಂತಹ ಮುಜುಗರಗಳಿಗೆ ಅವಕಾಶ ಇರಬಾರದು. ಗೊಂದಲಗಳು ಪರಿಹಾರವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.