ಹೊಸ ಚಿಗುರು ಮೂಡಲಿ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಿದೆ. ಹಲವು ಮಹತ್ವದ ಮಸೂದೆಗಳಿಗೆ ಸದನದ ಒಪ್ಪಿಗೆ ಪಡೆಯಲು ಎನ್‌ಡಿಎ ಸರ್ಕಾರ ತುದಿ­ಗಾಲ ಮೇಲೆ ನಿಂತಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಭೂಸ್ವಾ­ಧೀನ ತಿದ್ದುಪಡಿ ಮಸೂದೆ ಕುರಿತಾದ ಸುಗ್ರೀವಾಜ್ಞೆ, ವಿರೋಧ ಪಕ್ಷಗಳ ಕೈಗೆ ಬ್ರಹ್ಮಾಸ್ತ್ರವನ್ನೇ ಒದಗಿಸಿದೆ. ಸುಗ್ರೀವಾಜ್ಞೆ ವಾಪಸ್‌ಗೆ ಆಗ್ರಹಿಸಿ ದೆಹಲಿ­ಯಲ್ಲಿ ಅಣ್ಣಾ ಹಜಾರೆ ನಡೆಸಿರುವ ಪ್ರತಿಭಟನೆ ಪ್ರತಿಪಕ್ಷಗಳಿಗೆ ಬಲ ತುಂಬಿದೆ. ಇಷ್ಟೆಲ್ಲ ಪ್ರಮುಖ ಬೆಳವಣಿಗೆಗಳು ನಡೆದಿರುವಾಗ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಂಸತ್ತಿಗೆ ಬೆನ್ನು ತಿರುಗಿಸಿರುವುದು ಆಶ್ಚರ್ಯಕರ ಬೆಳ­ವಣಿಗೆ. ದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಶೋಚನೀಯವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಅಧಿಕೃತ ಸ್ಥಾನ ಪಡೆಯಲೂ ಆಗದಷ್ಟು ಅದು ಬಲಹೀನ­ಗೊಂಡಿದೆ. ಒಂದಾದ ನಂತರ ಒಂದು ರಾಜ್ಯದಲ್ಲಿ ಅಧಿಕಾರ ಪಕ್ಷದ ಕೈಜಾರು­ತ್ತಿದೆ. ಇಂತಹ ಸಂದರ್ಭದಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಜನರಿಗೆ ಸಕಾರಾತ್ಮಕ ಸಂದೇಶ ರವಾನಿಸಬೇಕಾಗಿದ್ದ ರಾಹುಲ್‌ ಯಥಾರೀತಿ ‘ನಿರಾಸಕ್ತಿ ಯೋಗ’ಕ್ಕೆ ಶರಣಾಗಿರುವುದು ಆ ಪಕ್ಷದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಡೆಯಲ್ಲ. ಲೋಕಸಭೆಯಲ್ಲಿ ಪಕ್ಷವನ್ನು ಮುನ್ನಡೆಸಲು ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಸದನದ ಹೊರಗೆ ಮಾರ್ಗದರ್ಶನ ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದ್ದಾರೆ. ಅಂತಹುದರಲ್ಲಿ ರಾಹುಲ್‌ ಹಾಜರಿಗೆ ವಿಶೇಷ ಮಹತ್ವ ನೀಡುವ ಅಗತ್ಯ ಇದೆಯೇ ಎಂಬ ಪ್ರಶ್ನೆ ಏಳಬಹುದು. ಪಕ್ಷದ ನೀತಿ–ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮತ್ತು ಪಕ್ಷದಲ್ಲಿ ಎರಡನೇ ಅತಿಮುಖ್ಯ ವ್ಯಕ್ತಿಯೆನಿಸಿರುವ ರಾಹುಲ್‌, ಕಲಾಪ ನಡೆಯುವಾಗ ವಿಶ್ರಾಂತಿ ಹೆಸರಿನಲ್ಲಿ ರಜೆ ಪಡೆದಿರುವುದು ಬೇರೆ ಬೇರೆ ವ್ಯಾಖ್ಯಾನಗಳನ್ನು ಹೊಮ್ಮಿಸುತ್ತದೆ. ಪಕ್ಷ ಇದರಿಂದ ಇನ್ನಷ್ಟು ಮುಜುಗರ ಎದುರಿಸಬೇಕಾಗುತ್ತದೆ.ಏಪ್ರಿಲ್‌ನಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶ­ನದ ವೇಳೆ ಪಕ್ಷದ ಪದಾಧಿಕಾರಿಗಳ ಮಟ್ಟದಲ್ಲಿ ಆಮೂಲಾಗ್ರ ಬದಲಾವಣೆ ತರಲು ರಾಹುಲ್‌ ಬಯಸಿದ್ದರು. ಕೆಲವು ಹಿರಿಯರು ಅದಕ್ಕೆ ಅಡ್ಡಗಾಲು ಹಾಕಿರುವುದರಿಂದ ಮುನಿಸಿಕೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾತಿದೆ. ಇದು ನಿಜವೇ ಆಗಿದ್ದರೆ, ಈ ಮನೋಧೋರಣೆಯನ್ನು ಹುಡು­ಗಾಟ­ವೆಂದೇ ವಿಶ್ಲೇಷಿಸಬೇಕಾಗುತ್ತದೆ. ಸವಲತ್ತುಗಳ ಜತೆಗೇ ಹುಟ್ಟಿಬಂದ­ವರು ರಾಹುಲ್‌. ಪಕ್ಷದ ನಾಯಕತ್ವ, ಕುಟುಂಬದ ಹಿನ್ನೆಲೆಯಿಂದ ತಾನಾ­ಗಿಯೇ ಒಲಿದುಬಂದಿದೆ. ಆದರೆ ಸಕ್ರಿಯ ರಾಜಕೀಯಕ್ಕೆ ಬಂದು ಹತ್ತು ವರ್ಷ­ಗಳಾದರೂ ನಾಯಕತ್ವದ ಗುಣ ರೂಢಿಸಿಕೊಳ್ಳಲು ಇನ್ನೂ ಆಗಿಲ್ಲ. ರಾಹುಲ್‌ ಜಾಗದಲ್ಲಿ ನೆಹರೂ ಕುಟುಂಬದವರಲ್ಲದೆ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೆಲ್ಲ ವೈಫಲ್ಯಗಳ ಬಳಿಕವೂ ಅವರು ನಾಯಕರಾಗಿ ಉಳಿದಿರು­ತ್ತಿ­ದ್ದರೆ? ಸಂಸತ್ತಿನಲ್ಲಿ ರಾಹುಲ್‌ ಅಪರೂಪಕ್ಕೆ ಬಾಯಿ ಬಿಡುತ್ತಾರೆ. ಅಧಿಕಾರ­ದೊಟ್ಟಿಗೆ ಬರುವ ಹೊಣೆಗಾರಿಕೆ ನಿಭಾಯಿಸಲು ಹಿಂಜರಿಯುತ್ತಾರೆ ಎಂಬು­ದಕ್ಕೆ ಮನ್‌ಮೋಹನ್‌ ಸಿಂಗ್‌ ನೇತೃತ್ವದ ಸಂಪುಟ ಸೇರಲು ನಿರಾಕರಿಸಿದ್ದೇ ನಿದರ್ಶನ. 129 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಬಲ­ವರ್ಧನೆಗೆ ದೃಢ ನಿರ್ಧಾರ ಕೈಗೊಳ್ಳಲೇಬೇಕಾದ ಅನಿವಾರ್ಯ ಒದಗಿದೆ. ಕಾಲಕ್ಕೆ ಹೊಂದದ ಕಾರ್ಯಶೈಲಿ ಬದಲಾಗಿ ಹೊಸ ಚಿಗುರು ಮೂಡ­ಬೇಕಾ­ಗಿದೆ. ಇಲ್ಲದೇ ಹೋದರೆ ಮತ್ತಷ್ಟು ಕಷ್ಟದ ದಿನಗಳನ್ನು ಕಾಣಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.