ಗೊಂದಲ ಬಗೆಹರಿಸಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅನ್ವಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದಕ್ಕಾಗಿ ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಸರ್ಕಾರದ ಉದ್ದೇಶ ಒಳ್ಳೆಯದೇ. ಆದರೆ, ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳದೇ ಇರುವುದರಿಂದಾಗಿ ಇಡೀ ಪ್ರಕ್ರಿಯೆ ಗೊಂದಲಗಳ ಗೂಡಾಗಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನ ಸಮೀಪಿಸುತ್ತಿರುವಂತೆ, ಇನ್ನೂ ಅರ್ಜಿ ಸಲ್ಲಿಸದ ಪೋಷಕರಲ್ಲಿ ಸಹಜವಾಗಿಯೇ ಆತಂಕ ಹೆಚ್ಚಾಗುತ್ತಿದೆ. ಇದರ ಜೊತೆಗೆ, ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ತಮ್ಮ ಅರ್ಜಿಯ ಸ್ಥಿತಿಗತಿ ತಿಳಿಯದೆ ಮತ್ತೆ ಮತ್ತೆ ಅರ್ಜಿ ಸಲ್ಲಿಸುವಂತಾಗಿರುವುದು ಈ ವ್ಯವಸ್ಥೆಯೊಳಗಿನ ದೋಷವಾಗಿದೆ. ಗ್ರಾಮೀಣ ಭಾಗಗಳಲ್ಲಂತೂ ಆನ್‌ಲೈನ್‌ ವ್ಯವಸ್ಥೆಯ ಬಗ್ಗೆ ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಕೊನೆಯ ದಿನಾಂಕ ಸಮೀಪಿಸುತ್ತಿದ್ದರೂ ಇನ್ನೂ ಸಾವಿರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿಲ್ಲ. ಈ ಗೊಂದಲದ ಜೊತೆಗೆ ಅನೇಕ ತಾಂತ್ರಿಕ ಅಡಚಣೆಗಳೂ ಸೇರಿಕೊಂಡಿವೆ. ಅನೇಕ ಅರ್ಜಿದಾರರು ಒಮ್ಮೆಲೆಯೇ ಅರ್ಜಿ ತುಂಬುವ ಪ್ರಕ್ರಿಯೆಯಲ್ಲಿ ತೊಡಗುವುದರಿಂದ ಉಂಟಾಗುವ ಒತ್ತಡವನ್ನು ತಾಳಿಕೊಳ್ಳುವಲ್ಲಿ ಸರ್ವರ್‌ ವಿಫಲವಾಗುತ್ತಿದೆ. ಹೊಸ ವ್ಯವಸ್ಥೆಯನ್ನು ಅಳವಡಿಸುವಾಗಿನ ಸನ್ನದ್ಧತೆಯ ಕೊರತೆಗೆ ಇದು ದ್ಯೋತಕ. ಆಯ್ಕೆಗೆ ಲಭ್ಯವಿರುವ ಶಾಲೆಗಳ ಪಟ್ಟಿಯಲ್ಲಿ ಅನಧಿಕೃತ ಶಾಲೆಗಳು ಕೂಡ ಸೇರಿ­ಕೊಂಡಿವೆ ಎಂಬ ದೂರುಗಳಿವೆ. ಕೆಲವೆಡೆಗಳಲ್ಲಂತೂ ಕ್ಷೇತ್ರ ಶಿಕ್ಷಣಾಧಿಕಾರಿ­ಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಲಭ್ಯವಿರುವ ಪ್ರವೇಶಗಳ ಸಂಖ್ಯೆಯನ್ನು ಪ್ರಕಟಿಸುವಲ್ಲಿಯೇ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇದೆಲ್ಲದರ ಒತ್ತಡ­ವನ್ನು ಅಂತಿಮವಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಅನುಭವಿಸ­ಬೇಕಾ­ಗಿದೆ. ಆರ್‌ಟಿಇ ಅರ್ಜಿ ಸಲ್ಲಿಕೆಗೆ ಅಗತ್ಯವಾದ ಜಾತಿ ಮತ್ತು ಆದಾಯ ಪ್ರಮಾಣ­ಪತ್ರಗಳನ್ನು ‘ಸಕಾಲ’ ಯೋಜನೆಯಡಿಯಲ್ಲಿ ಪಡೆಯಲು ಕನಿಷ್ಠ 21 ದಿನಗಳ ಕಾಲಾವಕಾಶ ಬೇಕು. ಈ ಪ್ರಮಾಣಪತ್ರಗಳನ್ನು ಬೇಗನೆ ಪಡೆ­ಯಲು ಪೋಷಕರು ತಹಶೀಲ್ದಾರ್‌ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ಪ್ರಮಾಣಪತ್ರಗಳನ್ನು ಪಡೆಯುವಲ್ಲಿ ಉಂಟಾಗುತ್ತಿರುವ ವಿಳಂಬ ಕೂಡ ಅರ್ಜಿ ಸಲ್ಲಿಕೆಗೆ ತೊಡಕಾಗಿ ಪರಿಣಮಿಸಿದೆ. ಕೆಲವು ಕಚೇರಿಗಳಲ್ಲಿ ಬೇಗನೆ ಪ್ರಮಾಣ ಪತ್ರ ಪಡೆಯಲು ಲಂಚ ನೀಡಬೇಕಾಗಿದೆ ಎಂದು ಕೆಲವು ಪೋಷಕರು ಆರೋಪಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ­ಬೇಕಾ­ಗಿದೆ. ಆನ್‌ಲೈನ್‌ ಮೂಲಕ ಪ್ರವೇಶ ಕಲ್ಪಿಸುವುದು ಸ್ವಾಗತಾರ್ಹ. ಪಾರದ­ರ್ಶಕ ಕ್ರಮ ಕೂಡ ಹೌದು. ಆದರೆ, ಇದು ಗೊಂದಲಗಳಿಂದ ಮುಕ್ತವಾಗಿರ­ಬೇಕು ಹಾಗೂ ಸರಳವಾಗಿರಬೇಕು. ಈ ಬಗ್ಗೆ ಸಾಕಷ್ಟು ಪೂರ್ವಸಿದ್ಧತೆಯೂ ಅಗತ್ಯ. ಪೋಷಕರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸಮರ್ಪಕ ಕಾರ್ಯ­ಕ್ರಮಗಳನ್ನು ಹಮ್ಮಿಕೊಂಡ ನಂತರವೇ ಸರ್ಕಾರ ಇಂಥ ಕ್ರಮಗಳಿಗೆ ಮುಂದಾಗಬೇಕು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ನಡೆಸುವಂಥ ಕೆಲಸಗಳು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದರ ಜೊತೆಗೆ, ಸರ್ಕಾರಿ ಅಧಿಕಾರಿಗಳ ಮೇಲೂ ಅನಗತ್ಯ ಒತ್ತಡ ಹೇರುತ್ತವೆ. ಪ್ರಸ್ತುತ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಿ ಪ್ರವೇಶ ಪ್ರಕ್ರಿಯೆ ಸುಗಮವಾಗಿರುವಂತೆ ಕಾಳಜಿಯನ್ನು ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.