ನುಡಿದಂತೆ ನಡೆಯಲಿ ರಾಷ್ಟ್ರದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ವ್ಯಕ್ತಪಡಿಸುವ ಅನೇಕ ಪ್ರಕರಣಗಳು ಹಾಗೂ ರಾಜಧಾನಿ ದೆಹಲಿಯಲ್ಲಿ ಚರ್ಚ್‌ಗಳ ಮೇಲೆ ದಾಳಿಗಳು ನಡೆದರೂ ಮೌನವನ್ನೇ ತಾಳಿದ್ದ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಸಮಾಜದಲ್ಲಿ ದ್ವೇಷ ಪ್ರಚೋದಿ­ಸಲು ಪ್ರಯತ್ನಿಸುವ ಯಾವುದೇ ಧಾರ್ಮಿಕ ಪಂಗಡದ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಕ್ರೈಸ್ತ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿಯವರು ಈ ಮಾತುಗಳನ್ನಾಡಿರು­ವುದರ ಸಾಂಕೇತಿಕತೆ ಮುಖ್ಯವಾದದ್ದು. ಬಹುತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿರುವ ದೇಶ ಭಾರತ. ಜಾತ್ಯತೀತತೆ ಎಂಬುದು ಸಂವಿಧಾನದ ಮುಖ್ಯ ಆಶಯ. ಅಷ್ಟೇ ಅಲ್ಲ, ಸ್ವಾತಂತ್ರ್ಯ, ಸಮಾನತೆ ಮತ್ತು ಉಪಾಸನಾ ಸ್ವಾತಂತ್ರ್ಯ ಈ ದೇಶದ ರಕ್ತಗುಣ. ಪ್ರಾಚೀನ ಭಾರತದಲ್ಲೂ ಧಾರ್ಮಿಕತೆ ಮತ್ತು ದಾರ್ಶನಿಕತೆಗಳಲ್ಲಿ ಸಾಕಷ್ಟು ಭಿನ್ನತೆಗಳಿರುವ ಹಲವಾರು ಪಂಗಡಗಳಿದ್ದವು. ಆದರೆ ಅವುಗಳ ನಡುವೆ ದ್ವೇಷದ ಬದಲು ಸಹಿಷ್ಣುತೆ, ವೈಚಾರಿಕ ಸಂವಾದ, ಬೌದ್ಧಿಕ ಕೊಡುಕೊಳ್ಳುವಿಕೆಗಳಿದ್ದವು. ಇಂತಹ ಭಾರತೀಯ ಪರಂಪರೆಯನ್ನು ಮೋದಿಯವರು ಸ್ಮರಿಸಿದ್ದಾರೆ. ನಾಗರಿಕರ ಆಯ್ಕೆಯ ಹಕ್ಕಾಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಭರವಸೆಯನ್ನು ಅವರು ನೀಡಿರುವುದು ಸ್ವಾಗತಾರ್ಹ. ಮೋದಿಯವರು ಈ ಮಾತುಗಳನ್ನಾಡುತ್ತಿರುವಾಗಿನ ರಾಜಕೀಯ ಸಂದರ್ಭವನ್ನು ಮರೆಯಲಾಗದು. ಉಗ್ರ ಹಿಂದುತ್ವ ಪ್ರತಿಪಾದನೆಯ ಮೂಲಕ ತುಂಡು ಸಂಘಟನೆಗಳು ಚುನಾವಣೆಗಳಲ್ಲಿ ಲಾಭ ಪಡೆಯಲು ಯತ್ನಿಸುತ್ತವೆ ಎಂಬುದು ಸಾಮಾನ್ಯ ಅಭಿಪ್ರಾಯ. ಈ ಹಿಂದೆ ಇಂತಹ ಕಾರ್ಯತಂತ್ರಗಳು ಯಶಸ್ವಿಯೂ ಆಗಿವೆ. ಆದರೆ ಇಂದು ಮತದಾರರು ಬುದ್ಧಿವಂತರಾಗಿದ್ದಾರೆ ಎಂಬುದಕ್ಕೆ ದೆಹಲಿ ವಿಧಾನಸಭೆ ಚುನಾವಣೆಯ ಇತ್ತೀಚಿನ ಫಲಿತಾಂಶಗಳೇ ಸಾಕ್ಷಿ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗುವಲ್ಲಿ ಬಲಪಂಥದ ಸಂಘಟನೆಗಳ ಪ್ರಚೋದನಕಾರಿ ನಡೆ, ಪ್ರಚಾರವೂ ಕಾರಣವಾಯಿತೆಂಬುದರಲ್ಲಿ ಸಂದೇಹವಿಲ್ಲ. ಕೆಲವು ತಿಂಗಳುಗಳಿಂದ, ಮೋದಿಯವರು ಅಭಿವೃದ್ಧಿಯ ಮಾತಾಡುವುದು, ಕೆಲವು ಸಂಘಟನೆಗಳ ಮುಖಂಡರು ಸಮಾಜದಲ್ಲಿ ಅಂತರ ಹೆಚ್ಚಿಸುವಂಥ ಹೇಳಿಕೆಗಳನ್ನು ನೀಡುವುದು ಏಕಕಾಲಕ್ಕೆ ನಡೆದಿದ್ದವು. ಕೇಂದ್ರದಲ್ಲಿ ನರೇಂದ್ರ ಮೋದಿಯವರಿಗೆ ಅಧಿಕಾರ ಹಿಡಿಯಲು ಸಹಕಾರಿಯಾಗಿದ್ದು ಅವರ ಅಭಿವೃದ್ಧಿ ಕಾರ್ಯಸೂಚಿ. ಆದರೆ ಅಭಿವೃದ್ಧಿ ಹಾಗೂ ಕೋಮುಧ್ರವೀಕರಣ ಎಂದೆಂದಿಗೂ ಜೊತೆಯಾಗಿರುವುದು ಸಾಧ್ಯವಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಲ ಪಂಥದ ಕೆಲವು ಸಂಘಟನೆಗಳು ರೆಕ್ಕೆ ಬಂದಂತೆ ವರ್ತಿಸುತ್ತಿರುವುದು ಸರಿಯಲ್ಲ. ಅನಗತ್ಯ ವಿವಾದ ಸೃಷ್ಟಿಸಲು ಹೊಂಚು ಹಾಕುತ್ತಿರುವವರು ತಲೆ ಎತ್ತಲು ಸರ್ಕಾರ ಅವಕಾಶ ಕೊಡಕೂಡದು. ಧಾರ್ಮಿಕ ಅಸಹಿಷ್ಣುತೆ ಈಗ ಜಾಗತಿಕ ಸವಾಲೂ ಆಗಿದೆ. ಇದನ್ನು ಮೆಟ್ಟಿ ನಿಲ್ಲಬೇಕು. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳಿದ್ದ ಮೋದಿಯವರು ಮಾತು ಉಳಿಸಿಕೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸರ್ಕಾರದ ಗುರಿಯಾಗಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.