ಮೌಢ್ಯ: ಜಾಗೃತಿ ಮೊಳಗಲಿ ಕೊಪ್ಪಳ ಜಿಲ್ಲೆಯ ಹೊಸಳ್ಳಿ ಗ್ರಾಮದಲ್ಲಿ ಗಾಯತ್ರಿ ಎನ್ನುವ ಐದು ವರ್ಷದ ಬಾಲಕಿ ವಾಮಾಚಾರಕ್ಕೆ ಬಲಿಯಾಗಿರುವುದು ನಾಗ­ರಿಕ ಸಮಾಜವನ್ನು ಬೆಚ್ಚಿಬೀಳಿಸುವ ಸಂಗತಿ. ನಿಧಿಯ ಆಸೆಗಾಗಿ ಅಮಾಯಕ ಬಾಲಕಿಯನ್ನು ಬರ್ಬರವಾಗಿ ಕೊಂದಿರುವ ಈ ಘಟನೆ, ಸಮಾಜದೊಳಗೆ ಸುಪ್ತವಾಗಿ ಅಡಗಿರುವ ಮೌಢ್ಯ ಮತ್ತು ಕ್ರೌರ್ಯಕ್ಕೆ ಉದಾಹರಣೆಯಂತಿದೆ. ಭಾರಿ ನಿಧಿ ಆಸೆಗಾಗಿ ಬಾಲಕಿಯನ್ನು ಅಪಹರಿಸಿರುವ ಹಂತಕರು, ಒಂದು ವಾರ ಕಾಲ ಹಿಂಸೆ ನೀಡಿ ಕೊಂದಿದ್ದಾರೆ. ನತದೃಷ್ಟ ಬಾಲಕಿ ಅನುಭವಿಸಿದ ನೋವು, ರೋದನ ಕೊಲೆಗಡುಕರ ಮನಸ್ಸನ್ನು ಕಲಕದೆ ಹೋಗಿರುವುದು ಹಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಹೇಸದ ಅವರ ಮನಸ್ಥಿತಿಯನ್ನು ಸೂಚಿಸುವಂತಿದೆ. ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ದೊರೆಯುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ವ್ಯವಸ್ಥೆಯ ಕ್ರಿಯಾಶೀಲತೆಯನ್ನು ಅಣಕಿಸುವಂತೆ, ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿರುವ ವಾಮಾಚಾರದ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ನೆರೆಹೊರೆ ಎನ್ನುವ ಸಾಮಾಜಿಕ ಪರಿಕಲ್ಪನೆಯ ಬಗ್ಗೆಯೇ ಅನುಮಾನ ಉಂಟುಮಾಡು­ವಂತಹ ಇಂಥ ಘಟನೆಗಳು ಪೋಷಕರಲ್ಲಿ ತಮ್ಮ ಮಕ್ಕಳ ರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದರೆ ಆಶ್ಚರ್ಯವಿಲ್ಲ. ಹೊಸಳ್ಳಿಯ ಘಟನೆಯನ್ನೇ ಉದಾಹರಿಸುವುದಾದರೆ, ಗಾಯತ್ರಿಯ ದುರ್ಮರಣದ ನಂತರ ಅಲ್ಲಿನ ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಕುಸಿದಿದೆ. ಸುರಕ್ಷತೆ ಹಿನ್ನೆಲೆ­ಯಲ್ಲಿ ಮಕ್ಕಳು ಶಾಲೆಗಳಿಂದ ಹೊರಗುಳಿಯುವುದು ಮತ್ತೊಂದು ಬಗೆಯ ಅಪಾಯಕ್ಕೆ ಕಾರಣವಾಗುತ್ತದೆ. ಕಲಿಕೆಯ ಮೂಲಕ ವಿವೇಕವನ್ನು ರೂಢಿಸಿ­ಕೊಳ್ಳಬೇಕಾದ ಮಕ್ಕಳು, ಮೌಢ್ಯದ ಆಚರಣೆಯ ಭಯದಲ್ಲಿ ಶಾಲೆಗಳಿಂದ ಹೊರಗುಳಿಯುವ ವಿರೋಧಾಭಾಸವನ್ನು ಸರ್ಕಾರ ಗಂಭೀರವಾಗಿ ಪರಿ­ಗಣಿಸ­ಬೇಕಾಗಿದೆ. ವಾಮಾಚಾರದ ಹೆಸರಿನಲ್ಲಿ ಮಕ್ಕಳನ್ನು ಬಲಿನೀಡುವುದು, ಮಾಟ ಮಂತ್ರ, ಭಾನಾಮತಿ, ನರಬಲಿ ಹಾಗೂ ದೆವ್ವ ಬಿಡಿಸುವಂತಹ ಕೊಳಕು ಪದ್ಧತಿ­ಗಳು ಚಾಲ್ತಿಯಲ್ಲಿರುವುದು ಯಾವ ನಾಗರಿಕ ವ್ಯವಸ್ಥೆಗೂ ಶೋಭೆ­ಯಲ್ಲ. ಈ ಅನಿಷ್ಟ ಪದ್ಧತಿಗಳಿಗೆ ಮಕ್ಕಳು, ಅದರಲ್ಲೂ ಹೆಣ್ಣುಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ. ನಿರಕ್ಷರತೆ, ಬಡತನಗಳು ಕೂಡ ಈ ದುರಂತಗಳಿಗೆ ಕಾರಣಗಳಾಗಿವೆ. ಮಹಾರಾಷ್ಟ್ರದ ಮಾದರಿಯಲ್ಲಿ ಮೌಢ್ಯ ನಿಷೇಧ ಕಾಯ್ದೆ­ಯನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಉತ್ಸಾಹ ಮಾತಿನಲ್ಲೇ ಮುಗಿದು­ಹೋದಂತಿದೆ. ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬಲಪಡಿಸುವ ಕೆಲಸ ತಳ­ಮಟ್ಟ­ದಲ್ಲಿ ಆಗಬೇಕಿದೆ. ಇದು ಯಾವಾಗಲೋ ಒಮ್ಮೆ ಮಾಡಿ ಸುಮ್ಮ­ನಾಗುವ ಕೆಲಸವಲ್ಲ. ವಿದ್ಯಾರ್ಥಿಗಳ ಜೊತೆಗೆ ಹಿರಿಯರಲ್ಲೂ ವೈಚಾರಿಕ ಜಾಗೃತಿ ಮೂಡಿ­ಸುವ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ವಿಪ­ರ್ಯಾಸವೆಂದರೆ, ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳೇ ಅಂಥ ಆಚರಣೆಗಳೊಂದಿಗೆ ಗುರ್ತಿಸಿಕೊಂಡಿರುವುದು. ರಾಜಕೀಯ ಪಕ್ಷಗಳ ಕಚೇರಿಗಳು ಮತ್ತು ವಿಧಾನಸೌಧದ ಒಳಗೂ ಹೊರಗೂ ಮೌಢ್ಯವನ್ನು ಬಿತ್ತುವ ಚಟುವಟಿಕೆಗಳು ಪದೇ ಪದೇ ನಡೆಯು­ತ್ತವೆ ಮತ್ತು ಅಂಥ ಕೆಲಸಗಳಿಗೆ ಸಾರ್ವಜನಿಕ ಹಣದ ಬಳಕೆಯಾಗುತ್ತದೆ. ಜನಸಾಮಾನ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದವರೇ ಎಡವಟ್ಟಿನ ಕೆಲಸ­ಗಳಲ್ಲಿ ತೊಡಗಿದರೆ, ಜನಸಾಮಾನ್ಯರಿಗೆ ದೊರೆಯುವ ಸಂದೇಶವಾದರೂ ಏನು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.