ಸ್ವಾವಲಂಬನೆ ಅಗತ್ಯ ರಕ್ಷಣಾ ಸಾಮಗ್ರಿಗಳ ಆಮದಿನಲ್ಲಿ ನಮ್ಮದು ವಿಶ್ವದಲ್ಲಿಯೇ ನಂಬರ್‌ 1 ಸ್ಥಾನ. ಆದರೆ ಇದು ಹೆಮ್ಮೆಪಡುವ ಸಂಗತಿ ಅಲ್ಲ; ಬದಲಾಗಿ, ರಕ್ಷಣಾ ಸಲಕರಣೆಗಳ ವಿಷಯದಲ್ಲಿ ನಾವು ವಿದೇಶಗಳ ಮೇಲೆ ಎಷ್ಟೊಂದು ಅವ­ಲಂಬಿಸಿದ್ದೇವೆ ಎನ್ನುವುದರ ಸಂಕೇತ. ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರಿ ಸಾಧನೆ ಮಾಡಿದ್ದೇವೆ ಎಂದು ಬೀಗುವ ನಮಗೆ ಇದು ನಿಜವಾಗಿಯೂ ದೊಡ್ಡ ಹಿನ್ನಡೆ. ಇದನ್ನು ಬದಲಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಸಲಕರಣೆಗಳ ಶೇ 70ನ್ನು ನಮ್ಮ ದೇಶದಲ್ಲಿಯೇ ತಯಾರಿಸುವ ಗುರಿಯನ್ನು ಮೋದಿ ಪ್ರಕಟಿಸಿದ್ದಾರೆ. ರಕ್ಷಣಾ ವಲಯ­ದಲ್ಲಿ ವಿದೇಶಿ ಬಂಡವಾಳದ ಪ್ರಮಾಣವನ್ನು ಶೇ 49ಕ್ಕೆ ಹೆಚ್ಚಿಸಲು ಅನುಮತಿ ಕೊಟ್ಟಿದ್ದನ್ನು ಉಲ್ಲೇಖಿಸಿದ್ದಾರೆ. ಉತ್ಕೃಷ್ಟ ತಂತ್ರಜ್ಞಾನ ತರುವುದಾದರೆ ಈ ಪ್ರಮಾಣ ಹೆಚ್ಚಿಸಲು ಸರ್ಕಾರಕ್ಕೆ ಹಿಂಜರಿಕೆ ಇಲ್ಲ ಎಂಬ ಸ್ಪಷ್ಟನೆಯೂ ಹೊರಬಿದ್ದಿದೆ. ‘ಭಾರತದಲ್ಲಿ ತಯಾರಿಸಿ’ ಎಂಬ ಕನಸನ್ನು ಸಾಕಾರಗೊಳಿ­ಸಲು, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಇದು ಸ್ವತಃ ಮೋದಿ­ಯವರಿಗೂ ಒಂದು ಅವಕಾಶ ಇದ್ದಂತೆ. ಅಲ್ಲದೆ ನಮ್ಮಲ್ಲಿಯೇ ರಕ್ಷಣಾ ಸಾಧನಗಳ ತಯಾರಿಕಾ ಉದ್ಯಮಗಳು ಬೆಳೆದರೆ ಹೊಸ ಹೊಸ ಉದ್ಯೋಗ­ಗಳು ಸೃಷ್ಟಿಯಾಗುತ್ತವೆ, ಅರ್ಥ ವ್ಯವಸ್ಥೆ ಚೇತರಿಕೆಗೂ ಸಹಾಯವಾಗುತ್ತದೆ. ಸರ್ಕಾರವೇ ಅಂದಾಜಿಸಿದಂತೆ 10 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸಲು ಸಾಧ್ಯವಾದೀತು. ಈ ದಶಕದ ಕೊನೆ ಹೊತ್ತಿಗೆ ನಾವು ರಕ್ಷಣೆಗೆ ಅತಿ ಹೆಚ್ಚು ವೆಚ್ಚ ಮಾಡುವ ವಿಶ್ವದ ದೇಶಗಳಲ್ಲಿ ನಾಲ್ಕನೇ ಸ್ಥಾನಕ್ಕೆ ಏರುವ ಅಂದಾಜಿದೆ. ಆಗಲೂ ನಮ್ಮ ಆಮದು ಪ್ರಮಾಣ ಈಗಿನಂತೆಯೇ ಮುಂದುವರಿದರೆ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತದೆ. ರಕ್ಷಣೆಯಂಥ ಅತ್ಯಂತ ಮಹತ್ವದ ವಿಚಾರದಲ್ಲಿ ವಿದೇಶಿ ಅವಲಂಬನೆಯಿಂದ ಹೊರಬಂದು ನಮ್ಮ ಕಾಲಮೇಲೆ ನಿಲ್ಲುವುದು ದೀರ್ಘಾವಧಿಯಲ್ಲಿ ನಮಗೆ ಅಗತ್ಯವೂ ಹೌದು, ಅನಿ­ವಾ­ರ್ಯವೂ ಹೌದು. ಈ ಗುರಿ ಸಾಧಿಸುವ ಉತ್ಸಾಹದಲ್ಲಿ ಈಗಾಗಲೆ ಅನ್ಯರ ಬಳಿ ಲಭ್ಯವಿರುವ ತಂತ್ರಜ್ಞಾನವನ್ನೇ ಮತ್ತೆ ಸಂಶೋಧನೆ ಮಾಡುತ್ತ ಹಣ, ಸಮಯ ವ್ಯಯಿಸುವ ಹಳೆಯ ಶೈಲಿ ಪ್ರಬುದ್ಧತೆ ಎನಿಸಿಕೊಳ್ಳುವುದಿಲ್ಲ. ಲಭ್ಯವಿರುವು­ದನ್ನೇ ಬಳಸಬಹುದು, ಜತೆಗೆ ಇನ್ನಷ್ಟು ಅಭಿವೃದ್ಧಿಪಡಿಸ­ಬಹುದು. ಇದರ ಜತೆಗೆ, ಈ ಕ್ಷೇತ್ರದಲ್ಲಿ ಸಾರ್ವಜನಿಕ ಉದ್ಯಮಗಳಿಗಷ್ಟೇ ಅವಕಾಶ ಎಂಬ ಪರಂಪರಾಗತ ಮನೋಭಾವ ಬೇಕಿಲ್ಲ. ಏಕೆಂದರೆ ನಮ್ಮ ಸರ್ಕಾರಿ ಉದ್ಯಮಗಳಲ್ಲಿ ವೃತ್ತಿಪರತೆ, ಸ್ಪರ್ಧಾತ್ಮಕತೆ ಕೊರತೆಯಿದೆ. ಅದಕ್ಷತೆ ಎದ್ದು ಕಾಣುತ್ತದೆ. ಹೀಗಾಗಿ ಖಾಸಗಿ– ಸರ್ಕಾರಿ ವಲಯ ಎಂಬ ಭೇದ ಎಣಿಸುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ. ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಖಾಸಗಿ ಉದ್ಯಮ ಕ್ಷೇತ್ರಗಳದ್ದೇ ಮೇಲುಗೈ. ಖಾಸಗಿ ವಲಯದ ಮೇಲೆ ಆ ಸರ್ಕಾರಗಳಿಗೆ ಅಷ್ಟೊಂದು ನಂಬಿಕೆ. ನಿರ್ಧಾರ ಕೈಗೊಳ್ಳುವಲ್ಲಿನ ವಿಳಂಬ ನಮ್ಮನ್ನು ಕಾಡುತ್ತಿರುವ ಮತ್ತೊಂದು ಶಾಪ. ಅದರಿಂದಲೂ ಹೊರಬರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.