ಕೆರೆಗಳ ಮಾಲಿನ್ಯ ನಿಯಂತ್ರಿಸಿ ಸೈಬೀರಿಯ, ಮಂಗೋಲಿಯ, ಅಮೆರಿಕ ಮೊದ­ಲಾದ ಕಡೆಗಳಲ್ಲಿನ ತೀವ್ರ ಚಳಿಗಾಲವನ್ನು ತಡೆಯಲಾಗದೆ ಅತಿ ಎತ್ತರದ ಹಿಮಾಲಯ ಪರ್ವತಶ್ರೇಣಿ ದಾಟಿ ಭಾರತಕ್ಕೆ ವಲಸೆ ಬರುತ್ತಿದ್ದ ಪಕ್ಷಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಕುಸಿತವಾಗಿದೆ. ಈ ದೇಶಗಳಲ್ಲಿ ಚಳಿಗಾಲದಲ್ಲಿ ನದಿ ಹಿಮಗಟ್ಟುತ್ತದೆ. ಹಿಮಪಾತವಾಗುತ್ತದೆ. ಪ್ರಾಣಿ, ಸಸ್ಯಸಂಕುಲಗಳು ಜೀವದ ಉಳಿವಿಗೆ ಹೋರಾಟ ನಡೆಸಬೇಕಾಗುತ್ತದೆ. ಇಂತಹ ಸ್ಥಿತಿಯ ನಡುವೆ ವಂಶಾಭಿವೃದ್ಧಿ ಮಾಡಲು ಮತ್ತು ಜೀವ ಉಳಿಸಿ­ಕೊಳ್ಳಲು ಪಕ್ಷಿಗಳು ಸಮಶೀತೋಷ್ಣ ವಲಯದ ದೇಶಗಳತ್ತ ಲಕ್ಷಾಂತರ ಕಿಲೋಮೀಟರ್‌ ಹಾರಾಟ ನಡೆಸುತ್ತವೆ. ಕೆರೆ ಮತ್ತು ಅಣೆಕಟ್ಟೆಗಳ ಹಿನ್ನೀರಿ­ನಲ್ಲಿ ವಂಶಾಭಿವೃದ್ಧಿ ನಡೆಸುತ್ತವೆ. ಆದರೆ ಭಾರತದಲ್ಲಿ ಹೆಚ್ಚುತ್ತಿರುವ ಕಲು­ಷಿತ ವಾತಾವರಣದಿಂದ ಮೊದಲಿನಷ್ಟು ಪ್ರಮಾಣದಲ್ಲಿ ಪಕ್ಷಿಗಳು ವಲಸೆ ಬರುತ್ತಿಲ್ಲ ಎನ್ನುವ ಮೈಸೂರು ಮೂಲದ ವರದಿ ಆಘಾತಕಾರಿಯಾಗಿದೆ. ಇದಕ್ಕೆ ಕಾರಣ, ಕೆರೆಗಳ ಆರೋಗ್ಯ ತೀರಾ ಕೆಟ್ಟಿರುವುದು ಮತ್ತು ಒತ್ತುವರಿ. ಮುಂದಾಲೋಚನೆ ಮತ್ತು ಪರಿಸರಸ್ನೇಹಿಯಲ್ಲದ ನಗರೀಕರಣವನ್ನುಅನು­ಸರಿಸುತ್ತಿರುವುದೇ ಇದಕ್ಕೆ ಕಾರಣ. ಉತ್ತರ ಏಷ್ಯಾ ಕಡೆಯಿಂದ ಗೀರುಬಾತು, ಬಾತು, ಸೂಜಿ ಬಾಲದ ಬಾತು, ಸಲಾಕೆ ಮತ್ತಿತರ ಪಕ್ಷಿಗಳು ನವೆಂಬರ್‌ ತಿಂಗಳಲ್ಲಿ ಮೈಸೂರು ಸುತ್ತಲಿನ ಹದಿನಾರು ಗ್ರಾಮ, ಕಗ್ಗಲಿಪುರದ ಕೆರೆ ಹಾಗೂ ಕಬಿನಿ ಹಿನ್ನೀರಿಗೆ ಬರುತ್ತವೆ. ಒಂದು ದಶಕದ ಹಿಂದೆ ಕೆರೆಗಳಿಗೆ ಲಕ್ಷಾಂತರ ಪಕ್ಷಿಗಳು ಬರು­ತ್ತಿ­ದ್ದವು. ಆದರೀಗ ವಲಸೆ ಪ್ರಮಾಣ ಕಡಿಮೆಯಾಗಿದೆ ಎಂದು ‘ಮೈಸೂರು ನೇಚರ್‌’ ಪಕ್ಷಿವೀಕ್ಷಕ ಗುಂಪಿನ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಮೈಸೂ­ರಿನ ಕುಕ್ಕರಹಳ್ಳಿ, ಕಾರಂಜಿ ಕೆರೆಗೆ ಸಾವಿರ ಸಂಖ್ಯೆಯಲ್ಲಿ ಬರುತ್ತಿದ್ದ ಪರ್ವತ ಪಕ್ಷಿಗಳ ಸಂಖ್ಯೆ ನೂರರ ಸುಮಾರಿಗೆ ಇಳಿದಿದೆ. ಪಕ್ಷಿಗಳು, ಮಾಲಿನ್ಯ ಹೆಚ್ಚಾಗಿ­ರುವುದನ್ನು ಗುರುತಿಸಿಯೇ ಬೇರೆ ಕಡೆ ಹೋಗುತ್ತಿವೆ ಎಂದು ಪಕ್ಷಿಪ್ರಿಯರು ಹೇಳಿದ್ದಾರೆ. ಇದು ಸಂಪೂರ್ಣ ಸತ್ಯವೂ ಹೌದು. ಕುಕ್ಕರಹಳ್ಳಿ ಮತ್ತು ಕಾರಂಜಿ ಕೆರೆ ಹಾಳಾಗಲು ಯೋಜನಾರಹಿತ ನಗರೀಕರಣವೇ ಕಾರಣ. ಮನೆಗಳಿಂದ ಹೊರಸೂಸುವ ತ್ಯಾಜ್ಯ ಸಂಪೂರ್ಣ ಸಂಸ್ಕರಣೆ­ಯಾ­ಗದೆ ನೇರವಾಗಿ ಕೆರೆಗೆ ಬರುತ್ತಿದೆ. ಇದರಿಂದ ನೀರಿನಲ್ಲಿ ಕರಗಿದ ಆಮ್ಲಜನಕ ಪ್ರಮಾಣ ಕಡಿಮೆ­ಯಾಗಿ ಮೀನುಗಳು ಸಾಯುತ್ತಿವೆ. ಸಾವಯವ ಪದಾರ್ಥ­ಗಳು ಅಧಿಕ ಪ್ರಮಾಣದಲ್ಲಿ ನೀರಿಗೆ ಸೇರಿ ಜೊಂಡು, ಕತ್ತೆಕಿವಿ ಮೊದಲಾದ ಸಸ್ಯಗಳು ಬೆಳೆಯುತ್ತಿವೆ. ಇದು ಎರಡು ಕೆರೆಗಳಿಗೆ ಮಾತ್ರ ಅನ್ವಯಿಸುವ ಮಾತಲ್ಲ. ಕಾರ್ಕಳದ ರಾಮಸಮುದ್ರ, ಬೆಂಗಳೂರಿನ ಹಲಸೂರು, ಬೆಳ್ಳಂದೂರು, ಸಾರಕ್ಕಿ, ಸರ್ಜಾಪುರ ಮತ್ತು ಕೆ.ಆರ್‌.ಪುರ ಕೆರೆಗಳು ಸಹ ಇದೇ ಸಮಸ್ಯೆ ಎದುರಿಸುತ್ತಿವೆ. ಇದೀಗ ನಿವೇಶನಗಳಾಗಿರುವ ಚಿಕ್ಕಮಂಡ್ಯ ಕೆರೆಯೂ ಇದೇ ಸಮಸ್ಯೆ ಎದುರಿಸಿತ್ತು. ಬಡಾವಣೆಗಳನ್ನು ಅಭಿವೃದ್ಧಿಪಡಿಸು­ವಾಗಲೇ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಅಳವಡಿಸ­ಬೇಕು. ಇದು ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೂ ಅನ್ವಯವಾಗಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಲಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಲಸೆ ಪಕ್ಷಿಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬೇಕಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.