ಬಹುಸಂಸ್ಕೃತಿ ಗೌರವಿಸಿ ಮೂರು ದಿನಗಳ ಯಶಸ್ವಿ ಭಾರತ ಪ್ರವಾಸ ಮುಗಿಸಿ ಸೌದಿ ಅರೇಬಿಯಾಗೆ ತೆರಳುವ ಮುಂಚೆ ನವದೆಹಲಿಯ ಟೌನ್ ಹಾಲ್‌ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮಾಡಿದ ಭಾಷಣ­ದಲ್ಲಿ ಅನೇಕ ಪ್ರಸ್ತುತ ವಿಚಾರಗಳು ಪ್ರಸ್ತಾಪಗೊಂಡವು. ಧಾರ್ಮಿಕ ಸಹಿಷ್ಣುತೆ ಹಾಗೂ ಮಹಿಳಾ ಹಕ್ಕುಗಳ ಕುರಿತಾಗಿ ಈಗಲೂ ಭಾರತ ಎದುರಿ­ಸು­ತ್ತಿರುವ ಸವಾಲುಗಳನ್ನು ಅವರು ಪ್ರಸ್ತಾಪಿಸಿದರು. ಒಂದು ರಾಷ್ಟ್ರದ ಪ್ರವಾಸ ಕಾರ್ಯಕ್ರಮದ ನಂತರ ರಾಷ್ಟ್ರ ನಾಯಕರುಗಳು ಆಡುವ ಮಾಮೂಲಿ ಮಾತುಗಳಿಗಿಂತ ಒಬಾಮ ಆಡಿದ ಮಾತುಗಳು ವಿಭಿನ್ನ ನೆಲೆ­ಯ­ದಾಗಿವೆ ಎಂಬುದು ಇಲ್ಲಿ ಮುಖ್ಯ. ಘರ್ ವಾಪಸಿ ಅಥವಾ ಮರು­ಮತಾಂತ­ರದ ವಿಚಾರಗಳು ಸಾರ್ವಜನಿಕ ವಲಯದಲ್ಲಿ ವಿವಾದ ಸೃಷ್ಟಿಸಿ­ರುವ ಸಂದರ್ಭದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ಅಮೆರಿಕ ಅಧ್ಯ­ಕ್ಷರು ಪ್ರಸ್ತಾಪಿಸಿದ್ದಾರೆ. ಅದೂ ಸಾರ್ವಜನಿಕ ವೇದಿಕೆ­ಯಲ್ಲಿ ಮಾಡಿದ ಭಾಷಣ­ದಲ್ಲಿ ಈ ಮುಖ್ಯ ಸಂದೇಶವನ್ನು ಜನರಿಗೆ ತಲುಪಿ­ಸುವ ಯತ್ನ ಕಂಡುಬರುತ್ತದೆ. ಬಹುಸಂಸ್ಕೃತಿಯ ಸಮಾಜಗಳಿಗೆ ಧಾರ್ಮಿಕ ಸಹಿಷ್ಣುತೆ ಅಗತ್ಯ ಎಂಬುದನ್ನು ಹೇಳುವ ಉದ್ದೇಶ ಇಲ್ಲಿದೆ. ಏಕೆಂದರೆ ತಮ್ಮ ದೇಶದಲ್ಲೂ ಇರುವಂತಹ ವರ್ಣೀಯ ಭೇದವನ್ನು ಈ ಅಮೆರಿಕನ್ ನಾಯಕ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ವಿಭಿನ್ನ ಧಾರ್ಮಿಕ ನಂಬಿಕೆ­ಗಳ ಜನರ ಸಹಜೀವನದ ಪರಂಪರೆ ಭಾರತ ಹಾಗೂ ಅಮೆರಿಕಗಳಲ್ಲಿದೆ. ವಿವಿಧ ಧರ್ಮಗಳು ಒಂದೇ ತೋಟದ ಸುಂದರ ಪುಷ್ಪಗಳು ಅಥವಾ ಒಂದೇ ಮರದ ಶಾಖೆಗಳು ಎಂಬಂಥ ಮಹಾತ್ಮ ಗಾಂಧಿಯವರ ಮಾತುಗಳನ್ನು ಈ ಸಂದರ್ಭದಲ್ಲಿ ಈ ಅಮೆರಿಕನ್ ನಾಯಕ ನೆನಪಿಸಿಕೊಂಡಿದ್ದಾರೆ. ಬಹುಸಂಸ್ಕೃತಿ ಎಂಬುದು ಭಾರತೀಯ ಸಂಸ್ಕೃತಿಯ ಮೂಲದ್ರವ್ಯ. ಸಂವಿ­ಧಾನದ 25ನೇ ವಿಧಿಯೂ ಧಾರ್ಮಿಕ ಸ್ವಾತಂತ್ರ್ಯವನ್ನು ಸಾರುತ್ತದೆ. ಈ ಬಹುಸಂಸ್ಕೃತಿಯ ನಿರ್ವಹಣೆಯೇ ಭಾರತದ ಪ್ರಜಾಪ್ರಭುತ್ವದಲ್ಲಿ ಮುಖ್ಯ­ವಾದದ್ದು. ಧರ್ಮದ ನೆಲೆಯಲ್ಲಿ ರಾಷ್ಟ್ರ ವಿಭಜನೆಯಾಗದಿದ್ದರೆ ಮಾತ್ರ ಭಾರತ ಯಶಸ್ವಿಯಾಗುವುದು ಸಾಧ್ಯ. ಈ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದು ಸರ್ಕಾರಗಳ ಮೂಲಭೂತ ಜವಾಬ್ದಾರಿ. ಹಾಗೆಯೇ ಇದು ಪ್ರತಿಯೊಬ್ಬ ವ್ಯಕ್ತಿಯ ಹೊಣೆಗಾರಿಕೆ ಎಂಬಂಥ ಒಬಾಮ ಮಾತುಗಳು ಸರಿ­ಯಾದದ್ದು. ಮೋದಿಯವರು ಬಾಲ್ಯದಲ್ಲಿ ಚಹಾ ಮಾರುತ್ತಿದ್ದರು. ಹಾಗೆಯೇ ತನ್ನ ಅಜ್ಜ ಸಹ ಸೇನೆಯಲ್ಲಿ ಸಾಧಾರಣ ಅಡುಗೆಯವರಾಗಿದ್ದರು ಎಂಬುದನ್ನು ಸ್ಮರಿಸಿದ ಒಬಾಮ ಅವರು ಪ್ರಜಾಪ್ರಭುತ್ವ ಒದಗಿಸಿಕೊಡುವ ಸಮಾನ ಅವಕಾಶಗಳ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಜೊತೆಗೆ, ಮಹಿಳೆ­ಯರು ಯಶ ಸಾಧಿಸಿದರೆ ಮಾತ್ರ ರಾಷ್ಟ್ರಗಳೂ ಯಶಸ್ಸು ಗಳಿಸುವುದು ಸಾಧ್ಯ ಎಂಬುದನ್ನೂ ಅವರು ಒತ್ತಿ ಹೇಳಿದ್ದಾರೆ. ಪ್ರತಿ ಮಹಿಳೆಯೂ ರಸ್ತೆಯಲ್ಲಿ, ಬಸ್‌ನಲ್ಲಿ ನಿರ್ಭಯವಾಗಿ ಓಡಾಡುವಂತಾಗಬೇಕು ಎಂದಿದ್ದಾರೆ ಒಬಾಮ. ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ಮಾತುಗಳ ಆಶಯ ಗ್ರಹಿಸಬೇಕು. ಗಣರಾಜ್ಯೋತ್ಸವದ ಮುನ್ನಾ ದಿನ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರೂ ಧಾರ್ಮಿಕ ಸೌಹಾರ್ದ ಹಾಗೂ ಮಹಿಳೆಯ ಘನತೆಯ ಬದುಕಿಗೆ ಅವಶ್ಯ­ವಾದ ಪರಿಸರ ಹಾಗೂ ಹಕ್ಕುಗಳ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಆರ್ಥಿಕ ಪ್ರಗತಿಯ ಕ್ಷೇತ್ರದಲ್ಲಿ ಪಾಲುದಾರರಾಗಲು ಅನೇಕ ಮುಖ್ಯ ಒಪ್ಪಂದಗಳಿಗೂ ಒಬಾಮ ಭೇಟಿ ಅವಧಿಯಲ್ಲಿಭಾರತ – ಅಮೆರಿಕ ಸಹಿ ಹಾಕಿವೆ. ಈ ಮೂಲಕ ಈ ಶತಮಾನದ ನಿರ್ಣಾಯಕ ಪಾಲುದಾರಿಕೆಗೆ ತೆರೆದು­ಕೊಂಡಿ­ರುವುದು ಮಹತ್ವದ ಬೆಳವಣಿಗೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.