ಗ್ರೀಸ್ ಹೊಸ ನಡೆ ಐರೋಪ್ಯ ಒಕ್ಕೂಟದ ಪುಟ್ಟ ರಾಷ್ಟ್ರ ಗ್ರೀಸ್‌ನ ಹೊಸ ಸರ್ಕಾರದ ನಡೆಯ ಮೇಲೆ ಈಗ ಜಗತ್ತಿನ ಕಣ್ಣು ನೆಟ್ಟಿದೆ. ಸಾಲಿಗರ ಸುಳಿಯಲ್ಲಿ ಸಿಲುಕಿ ಕಿಬ್ಬದಿಯ ಕೀಲು ಮುರಿಸಿಕೊಂಡಂತೆ ಆಗಿರುವ ದೇಶ ಮುಂದೆ ಇಡಲಿರುವ ಪ್ರತಿ ಹೆಜ್ಜೆಯೂ ಯುರೋಪ್‌ ಮಾರುಕಟ್ಟೆಯ ಮೇಲೆ ಗಣನೀಯ ಪ್ರಭಾವ ಬೀರಲಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ದೇಶವನ್ನು ಮೇಲೆತ್ತಲು ತಾವು ನೀಡಿದ್ದ ‘ಪರಿಹಾರ ಪ್ಯಾಕೇಜ್‌’ಗೆ ಪೂರಕವಾಗಿ ವಿದೇಶಗಳು ಅದರ ಮೇಲೆ ಕಠಿಣ ಆರ್ಥಿಕ ಮಿತವ್ಯಯ ಕ್ರಮಗಳನ್ನು ಹೇರಿ­ದ್ದವು. ಇದನ್ನು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದ ತೀವ್ರ­ಗಾಮಿ ಎಡಪಂಥೀಯ ಸಿರಿಝಾ ಪಕ್ಷವೇ ಈಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪಕ್ಷದ ನಾಯಕ ಅಲೆಕ್ಸಿಸ್‌ ಸಿಪ್ರಸ್‌ ಪ್ರಧಾನಿಯಾಗಿದ್ದು, ಬಲ­ಪಂಥೀಯ ಪಕ್ಷವಾದ ‘ಇಂಡಿಪೆಂಡೆಂಟ್‌ ಗ್ರೀಸ್‌’ ಸರ್ಕಾರದ ಪಾಲುದಾರ. ಸೈದ್ಧಾಂತಿಕ­ವಾಗಿ ತದ್ವಿರುದ್ಧ ನಿಲುವಾದರೂ, ಸಾಲದಾತ ರಾಷ್ಟ್ರಗಳ ಕಟು ಆರ್ಥಿಕ ಕ್ರಮಗಳ ವಿಷಯದಲ್ಲಿ ಮಾತ್ರ ಎರಡೂ ಪಕ್ಷಗಳದು ಒಂದೇ ನಿಲುವು. ದೇಶಕ್ಕೆ ಸಾಲದಿಂದ ವಿಮೋಚನೆ ಕೊಡಿಸುವ ಅಥವಾ ನಿಬಂಧನೆ­ಗಳನ್ನು ಸರಳಗೊಳಿಸುವ ಮೂಲಕ ಕಠಿಣ ಆರ್ಥಿಕ ಕ್ರಮಗಳನ್ನು ಕೊನೆ­ಗಾಣಿಸುವ ಭರವಸೆಯನ್ನು ಚುನಾವಣೆ ವೇಳೆ ಜನರಿಗೆ ನೀಡಿದ್ದರು. ಈಗ ತಮಗೆ ಸಿಕ್ಕಿರುವ ಜನಾದೇಶ ಇಂತಹ ಬಲವಂತದ ಕ್ರಮಗಳನ್ನು ರದ್ದು­ಮಾಡಿದೆ ಎಂಬ ಅವರ ಹೇಳಿಕೆ ‘ಯುರೋಪಿಯನ್‌ ಕಮಿಷನ್‌, ಯುರೋಪಿ­ಯನ್‌ ಸೆಂಟ್ರಲ್‌ ಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣ­ಕಾಸು ನಿಧಿ’ಯನ್ನು ಒಳಗೊಂಡ ಸಾಲಿಗರ ಗುಂಪಿನಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದೇ ಫೆಬ್ರುವರಿ ಅಂತ್ಯಕ್ಕೆ ‘ಪರಿಹಾರ ಪ್ಯಾಕೇಜ್‌’ ಕೊನೆಗೊಳ್ಳಲಿದೆ. ಕಟ್ಟುನಿಟ್ಟಿನ ಆರ್ಥಿಕ ಕ್ರಮಗಳಿಂದ ಉದ್ಯೋಗ ಕಡಿತ, ಸಾರ್ವಜನಿಕ ಸೇವೆ, ವೇತನ ಮತ್ತು ಪಿಂಚಣಿ ಕಡಿತ, ನಿರುದ್ಯೋಗದಂತಹ ಸಂಕಷ್ಟಗಳನ್ನು ಎದುರಿಸಿದ್ದ ಜನರಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಆದರೆ ಇಂತಹ ಬಿಗಿ ಕ್ರಮಗಳಿಂದಾಗಿಯೇ ದೇಶ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿತ್ತು ಎಂಬುದೂ ನಿಜ. ಈಗ ಗ್ರೀಸ್‌ನ ರಿಯಾಯಿತಿ ಬೇಡಿಕೆಯನ್ನು ಜರ್ಮನಿ ನೇತೃತ್ವದ ಸಾಲಿಗರು ಒಪ್ಪುವ ಸಾಧ್ಯತೆ ಇಲ್ಲ. ಹೀಗಾಗಿ ಸರಳವಾದ ನಿಬಂಧನೆಗಳ ಮೂಲಕ ‘ಪರಿಹಾರ ಪ್ಯಾಕೇಜ್‌’ನ ಪುನರ್‌ನವೀಕರಣ ಸುಲಭದ ಕಾರ್ಯವಲ್ಲ. ಹಾಗೆಂದು ಗ್ರೀಸ್‌ ಹಿಂದಿನ ಬದ್ಧತೆಗಳಿಗೆ ವಿರುದ್ಧ­ವಾಗಿ ನಡೆದುಕೊಂಡರೆ ಅದು ಅಂತರರಾಷ್ಟ್ರೀಯವಾಗಿ ಒಳ್ಳೆಯ ಪದ್ಧ­ತಿಯೂ ಅಲ್ಲ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸ್ಪೇನ್‌, ಪೋರ್ಚು­ಗಲ್‌­ನಂತಹ ಇತರ ರಾಷ್ಟ್ರಗಳಲ್ಲೂ ಕಠಿಣ ಆರ್ಥಿಕ ಕ್ರಮಗಳ ವಿರುದ್ಧ ಅಸಮಾ­ಧಾನ ಹರಳುಗಟ್ಟುತ್ತಿದೆ. ಜೊತೆಗೆ ಬ್ರಿಟನ್‌ನಂತಹ ದೇಶಗಳಲ್ಲಿ ವ್ಯಾಪಕ­ವಾಗುತ್ತಿರುವ ಐರೋಪ್ಯ ಒಕ್ಕೂಟ ವಿರೋಧಿ ಭಾವನೆಗೆ ಗ್ರೀಸ್‌ನ ನಡೆ ಪುಷ್ಟಿ ನೀಡಬಹುದು. ಇದು ಒಕ್ಕೂಟಕ್ಕೆ ರಾಜಕೀಯವಾಗಿ ಒಳ್ಳೆಯ ಬೆಳವಣಿಗೆ­ಯಲ್ಲ. ಕೆಲ ದಿನಗಳ ಹಿಂದಷ್ಟೇ ವ್ಯಾಪಕ ಕ್ರಮಗಳ ಮೂಲಕ ಆರ್ಥಿಕ ಉತ್ತೇಜನಕ್ಕೆ ಯತ್ನಿಸಿರುವ ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ಸಹ (ಇಸಿಬಿ) ಗ್ರೀಸ್‌ನ ರಿಯಾಯಿತಿ ಬೇಡಿಕೆಯನ್ನು ಒಪ್ಪದೇ ಇರಬಹುದು. ಆದರೂ ಗ್ರೀಸ್‌ ಪಟ್ಟು ಬಿಡದಿದ್ದರೆ ಅದರ ಪರಿಣಾಮ ಯುರೋಪ್‌ನ ಹೊರಗೂ ಆಗಬಹುದು, ಯೂರೊ ವಲಯದಿಂದಲೇ ಅದು ಹೊರಬರ­ಬೇಕಾಗಿ ಬರಬಹುದು ಎಂಬಂತಹ ಊಹೆಗಳೂ ಕೇಳಿಬರುತ್ತಿವೆ. ಆದರೆ ಗ್ರೀಕರಿಗೂ ಇದು ಬೇಕಾದಂತೆ ಕಾಣುವುದಿಲ್ಲವಾದ್ದರಿಂದ ಇಂತಹ ಬೆಳವಣಿಗೆ ಸಾಧ್ಯತೆ ಇಲ್ಲ. ಗ್ರೀಸ್‌ ರಷ್ಯಾ ವಲಯವನ್ನು ಸೇರಬಹುದೆಂಬ ಆತಂಕದಿಂದ ಯುರೋಪಿಯನ್ನರೂ ಅದನ್ನು ಹೊರದೂಡಲು ಬಯಸುವುದಿಲ್ಲ. ಇಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ, ನಿಬಂಧನೆಗಳನ್ನು ಸಡಿಲ­ಗೊಳಿಸುವಲ್ಲಿ ಸರ್ಕಾರ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಗ್ರೀಸ್‌ ನಾಗರಿಕರ ಸಂಕಷ್ಟದ ಅಂತ್ಯ ನಿಂತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.