ಧಾನ್ಯ ಪೋಲು ತಪ್ಪಿಸಿ ಅತ್ಯಮೂಲ್ಯವಾದ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ಸಂಗ್ರ­ಹಿಸಿಡಲು ಬೇಕಾದ ಗೋದಾಮು, ಶೈತ್ಯಾಗಾರಗಳ ಸೌಕರ್ಯವನ್ನು ಅಗತ್ಯಕ್ಕೆ ತಕ್ಕಂತೆ ಕಲ್ಪಿಸಲು ನಮ್ಮ ದೇಶದಲ್ಲಿ ಇನ್ನೂ ಸಾಧ್ಯವಾಗಿಲ್ಲ. ಈ ಕೊರತೆ, ನಾವು ಇಷ್ಟೂ ದಿನ ಅನುಸರಿಸಿರುವ ಅಭಿವೃದ್ಧಿ ಮಾದರಿಗಳ ಬಗ್ಗೆಯೇ ಅನುಮಾನ ಹುಟ್ಟಿಸುತ್ತದೆ. ಎರಡು ಹೊತ್ತು ಊಟ ಸಿಕ್ಕರೆ ಸಾಕು ಎಂದು ಹಂಬಲಿಸು­ತ್ತಿರುವ ಕೋಟ್ಯಂತರ ಜನ ದೇಶದಲ್ಲಿದ್ದಾರೆ. ಜತೆಗೆ ಅಪೌಷ್ಟಿಕತೆ ಬಹು­ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದು, ಮಕ್ಕಳ ಸರ್ವಾಂಗೀಣ ಬೆಳವಣಿಗೆ­ಯನ್ನೇ ಇದು ಕುಂಠಿತಗೊಳಿಸುತ್ತಿದೆ. ಆದರೆ, ಇಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರವಾಗಬೇಕಿದ್ದ ಆಹಾರ ಧಾನ್ಯ ಇಲಿ, ಹೆಗ್ಗಣ, ಹುಳುಗಳ ಪಾಲಾ­ಗುತ್ತಿದೆ. ಎಂಥ ವೈರುಧ್ಯ!? ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅತ್ಯಂತ ಕಡಿಮೆ ದರದಲ್ಲಿ ವಿತರಿಸಲು ಸಂಗ್ರ­ಹಿಸಿರುವ ಪಡಿತರ ಧಾನ್ಯಕ್ಕೆ ಹುಳು ಹತ್ತಿದೆ ಎನ್ನುವ ಸುದ್ದಿ ಕೊಪ್ಪಳದಿಂದ ವರದಿಯಾಗಿದೆ. ಅಲ್ಲಿನ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮಿನಲ್ಲಿದ್ದ ಸುಮಾರು 1,300 ಚೀಲದಷ್ಟು ಅಕ್ಕಿ, ಗೋಧಿ ಬಳಸಲಾಗದ ಸ್ಥಿತಿ ತಲುಪಿ­ರುವುದು ಅತ್ಯಂತ ನೋವಿನ ಸಂಗತಿ. ಹಸಿವಿನ ಬಾಧೆ ಅರಿತ ಯಾರೂ ಈ ಕೆಟ್ಟ ನಿರ್ಲಕ್ಷ್ಯವನ್ನು ಕ್ಷಮಿಸಲಾರರು. ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಿದ ಧಾನ್ಯವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕೊಪ್ಪಳದಲ್ಲಿ ಸಂಗ್ರಹಿಸಿತ್ತು. ಹಸಿದ ಜನರ ಹೊಟ್ಟೆ ಸೇರಬೇಕಾಗಿದ್ದ ಈ ಧಾನ್ಯ ಹೆಗ್ಗಣ, ಹುಳುಗಳ ಪಾಲಾ­ಗಿರುವುದು ನಮ್ಮ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಇದಕ್ಕೆ ಕಾರಣ­ರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜಗತ್ತಿನಲ್ಲಿ ಮನುಷ್ಯನ ಬಳಕೆಗೆ ಉತ್ಪಾದನೆಯಾಗುತ್ತಿರುವ ಆಹಾರ ಪದಾರ್ಥಗಳಲ್ಲಿ ಮೂರನೇ ಒಂದು ಭಾಗದಷ್ಟು ಪೋಲಾಗುತ್ತಿದೆ ಎಂಬ ಆಘಾತ­ಕಾರಿ ಸಂಗತಿಯನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ‘ವ್ಯರ್ಥವಾಗುತ್ತಿರುವ ಆಹಾರ ಪದಾರ್ಥ’ಗಳ ಕುರಿತ ವರದಿ ಬಹಿರಂಗಗೊಳಿಸಿದೆ. ನಮ್ಮ ದೇಶದಲ್ಲಿ ಪ್ರತೀ ವರ್ಷ ಸುಮಾರು ₨ 44 ಸಾವಿರ ಕೋಟಿ ಮೌಲ್ಯದ ಆಹಾರ ಪದಾರ್ಥಗಳು ಸದ್ಬಳಕೆಯಾಗದೆ ಹಾಳಾಗುತ್ತಿವೆ ಎಂದು ಕೇಂದ್ರ ಸರ್ಕಾರ ಕಳೆದ ವರ್ಷ ರಾಜ್ಯಸಭೆಗೆ ಮಾಹಿತಿ ಒದಗಿಸಿತ್ತು. ದಾಸ್ತಾನು ಸೌಲಭ್ಯ ಸರಿಯಾಗಿ ಇಲ್ಲದಿರುವುದೇ ಧಾನ್ಯ ಹಾಳಾ­ಗಲು ಪ್ರಮುಖ ಕಾರಣ ಎಂಬುದು ಗುಟ್ಟಿನ ವಿಷಯವಲ್ಲ. ಧಾನ್ಯಗಳ ವೈಜ್ಞಾನಿಕ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾದುದು ಸರ್ಕಾರದ ಕರ್ತವ್ಯ. ಈ ಸೌಕರ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಅದಕ್ಕೆ ಪೂರಕವಾಗಿ ರಾಜ್ಯಗಳೂ ಸ್ವಲ್ಪಮಟ್ಟಿಗೆ ಸ್ಪಂದಿಸಿವೆ. ಆದರೂ ಧಾನ್ಯ ಹಾಳಾಗುವುದು ತಪ್ಪಿಲ್ಲ. ಗೋದಾಮುಗಳ ನಿರ್ಮಾಣವನ್ನು ಆದ್ಯತೆಯ ಕೆಲಸವಾಗಿ ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿ­ಸ­ಬೇಕು. ಈ ಕೆಲಸದಲ್ಲಿ ಖಾಸಗಿ ಸಹಭಾಗಿತ್ವಕ್ಕೂ ಉತ್ತೇಜನ ನೀಡಬೇಕು. ಧಾನ್ಯ ಪೋಲಾಗಲು ಬಿಡುವುದು ಅಕ್ಷಮ್ಯ ಅಪರಾಧ. ಅದಕ್ಕೆ ಎಳ್ಳಷ್ಟೂ ಅವಕಾಶ ನೀಡಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.