ಹಸ್ತಕ್ಷೇಪದ ವಿವಾದ ಕೇಂದ್ರದ ಮಾಜಿ ಸಚಿವೆ ಜಯಂತಿ ನಟರಾಜನ್‌ ಅವರು ಕಾಂಗ್ರೆಸ್‌ ತೊರೆದಿದ್ದಾರೆ. ಇದಕ್ಕೂ ಮುಂಚೆ ಕಳೆದ ನವೆಂಬರ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಯಂತಿ ಅವರು ಬರೆದಿರುವ ಪತ್ರ ಬಹಿರಂಗಗೊಂಡಿದ್ದು ಅದರಲ್ಲಿರುವ ಸ್ಫೋಟಕ ಅಂಶಗಳು ಸಾರ್ವಜನಿಕ ಚರ್ಚೆಯ ವಸ್ತುವಾಗಿವೆ. ತಾವು ಸಚಿವೆಯಾಗಿದ್ದಂತಹ ಕೇಂದ್ರ ಪರಿಸರ ಸಚಿವಾಲಯದ ಕಾರ್ಯ­ನಿರ್ವಹಣೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಹಸ್ತಕ್ಷೇಪ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ಹಾಗೂ ನೋವನ್ನು ಈ ಪತ್ರದಲ್ಲಿ ಅವರು ತೋಡಿಕೊಂಡಿದ್ದಾರೆ. ಪಕ್ಷಕ್ಕೆ ನಿಷ್ಠೆ ಹೊಂದಿದ್ದ ಅತ್ಯಂತ ಹಿರಿಯ ಹಾಗೂ ಗೌರವಾನ್ವಿತ ನಾಯಕರೊಬ್ಬರು ಇತ್ತೀಚಿನ ವರ್ಷಗಳಲ್ಲಿ ಮಾಡಿರುವಂತಹ ಈ ನೇರ ಆರೋಪ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಅತ್ಯಂತ ಗಂಭೀರ­ವಾದದ್ದು. ರಾಹುಲ್‌ರ ಗೊಂದಲಕಾರಿ ನಿಲುವುಗಳು ಇಲ್ಲಿ ಬಹಿರಂಗ­ಗೊಂಡಿವೆ. ಜೊತೆಗೆ ಪರಿಸರ ಸಚಿವಾಲಯದ ಕಾರ್ಯನಿರ್ವಹಣೆಯ ಅವ್ಯವಸ್ಥೆಯತ್ತಲೂ ಬೆರಳು ತೋರಿದಂತಾಗಿದೆ. ಒಂದೆಡೆ ಪರಿಸರ, ಆದಿವಾಸಿ ಜನರ ಹಕ್ಕುಗಳ ಹಿತರಕ್ಷಕನಂತೆ ಬಿಂಬಿಸಿಕೊಳ್ಳುತ್ತಾ ಮತ್ತೊಂದೆಡೆ ಕೈಗಾರಿಕೋದ್ಯಮಿ­ಗಳ ಪರ ಮಾತನಾಡುವ ರಾಹುಲ್ ಅವರ ದ್ವಂದ್ವ ನಡೆಗಳನ್ನು ಈ ಪತ್ರ ಬಿಚ್ಚಿಟ್ಟಿದೆ. ಜಯಂತಿ ಅವರಿಗೆ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಲಾಗಿತ್ತು. ನಂತರ ನಡೆದ ಎಫ್ಐಸಿಸಿಐ ಸಮಾವೇಶದಲ್ಲಿ ಉದ್ಯಮಿ­ಗಳನ್ನುದ್ದೇಶಿಸಿ ಮಾತನಾಡುತ್ತಾ, ಯೋಜನೆಗಳ ಅನುಮೋದನೆಗೆ ಪರಿಸರ ಇಲಾಖೆಯ ಅನುಮೋದನೆಯ ಅಡೆತಡೆ ಹಾಗೂ ವಿಳಂಬ ಇನ್ನು ಮುಂದೆ ಇರಲಾರದು ಎಂದು ರಾಹುಲ್ ಹೇಳಿದ್ದರು. ಆದರೆ ಇಂತಹ ವಿಳಂಬಗಳಿಗೆ ರಾಹುಲ್ ಅವರೇ ಕಾರಣರಾಗಿದ್ದರು ಎಂಬುದನ್ನು ಜಯಂತಿಯವರ ಪತ್ರದಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಯೋಜನೆಗಳು ಅನುಮೋದನೆ ಪಡೆಯಲು ‘ಜಯಂತಿ ತೆರಿಗೆ’ಯಿಂದಾಗಿ ಕೈಗಾರಿಕೆಗಳು ಕಷ್ಟ ಅನುಭವಿಸುತ್ತಿವೆ ಎಂದು ಲೋಕಸಭೆ ಚುನಾವಣೆ ಪ್ರಚಾರ ಭಾಷಣ ವೇಳೆ ನರೇಂದ್ರ ಮೋದಿಯವರು ಟೀಕಿಸಿದ್ದುದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ತಾವು ಪಕ್ಷದ ನೀತಿಯನ್ನು ಅನುಸರಿಸಿ ಪರಿಸರ ರಕ್ಷಣೆಗೆ ಕಟ್ಟುನಿಟ್ಟಾಗಿ ಕಾನೂನು ಹಾಗೂ ನಿಯಮಗಳನ್ನು ಪಾಲಿಸಿರುವು­ದಾಗಿ ಜಯಂತಿ ಪ್ರತಿಪಾದಿಸಿಕೊಂಡಿದ್ದಾರೆ. ‘ವೇದಾಂತ’ದ ನಿಯಮಗಿರಿ ಘಟಕ ಹಾಗೂ ಅದಾನಿಯ ವಿಶೇಷ ಆರ್ಥಿಕ ವಲಯ ಯೋಜನೆಗಳ ಪರಿಸರ ಅನುಮೋದನೆ ತಡೆಗೆ ರಾಹುಲ್ ಅವರ ಕಚೇರಿಯ ಮಾರ್ಗದರ್ಶನವಿತ್ತು ಎಂದು ಅವರು ಪ್ರತಿಪಾದಿಸಿದ್ದಾರೆ. ಪರಿಸರ ಅನುಮೋದನೆಗಳಿಗೆ ಸಂಬಂಧಿಸಿ­ದಂತೆ ರಾಹುಲ್‌ಗಾಗಲಿ, ಪರಿಸರ ಸಚಿವರಿಗಾಗಲಿ ಏಕರೂಪ ನೀತಿ ಇರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪರಿಸರ ಕಾಳಜಿ, ಆರ್ಥಿಕ ಪ್ರಗತಿ ಅಥವಾ ಎರಡನ್ನೂ ಸಮತೋಲನ ಮಾಡುವ ವಿಚಾರಕ್ಕಿಂತ ಆ ಸಂದರ್ಭದ ರಾಜಕೀಯ ಒತ್ತಡಗಳೇ ಮುಖ್ಯವಾಗಿದ್ದು ಸರ್ವವಿದಿತ. ನೀತಿ ನಿರೂಪಣೆ­ಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ವಿಚಾರ ವಿನಿಮಯದಿಂದ ಇದು ಪರಿಹಾರವಾಗಬೇಕು. ಬದ್ಧತೆಯಲ್ಲಿನ ಅಸ್ಪಷ್ಟತೆ ನಾಯಕತ್ವದ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್ ಒಪ್ಪಿ­ಕೊಂಡಿರ­ಲಿಲ್ಲ. ಹೀಗಿದ್ದೂ ಉತ್ತರ­ದಾಯಿತ್ವ­ವಿಲ್ಲದ ಅವರ ಅಪ್ರಬುದ್ಧ ರಾಜಕೀಯ ನಡೆಗಳು ಹಳೆಯ ರಾಷ್ಟ್ರೀಯ ರಾಜಕೀಯ ಪಕ್ಷವೊಂದಕ್ಕೆ ಸೃಷ್ಟಿಸುವ ಬಿಕ್ಕಟ್ಟುಗಳು ಗಂಭೀರ­ವಾದವು. ವರ್ಚಸ್ಸು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕಿದು ಪಾಠವಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.