ಕನ್ನಡ ಸಂವೇದನೆ ಬೆಳೆಯಲಿ ಶ್ರವಣಬೆಳಗೊಳದಲ್ಲಿ ನಡೆದಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಕನ್ನಡಿಗರು ವರ್ತಮಾನದಲ್ಲಿ ಎದುರಿಸುತ್ತಿರುವ ತಲ್ಲಣಗಳನ್ನು ಮುಖ್ಯವಾಗಿ ಗಮನದಲ್ಲಿ ಇರಿಸಿ­ಕೊಂಡು ಡಾ.ಸಿದ್ಧಲಿಂಗಯ್ಯನವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದ್ದಾರೆ. ಹೋರಾಟದ ಹಿನ್ನೆಲೆಯ ಸಿದ್ಧಲಿಂಗಯ್ಯ­ನವರ ಭಾಷಣಕ್ಕೆ ಭಾಷೆ–ಸಾಹಿತ್ಯಗಳನ್ನು ಮೀರಿದ ಆಯಾಮವಿದೆ. ಕನ್ನಡಿಗರ ಬದುಕನ್ನು ಕಾಡುತ್ತಿರುವ ಸಮಸ್ಯೆಗಳ ನಿವಾರಣೆಗೆ ಅವರ ಭಾಷಣ­ದಲ್ಲಿ ಕಾಳಜಿ ವ್ಯಕ್ತವಾಗಿದೆ. ಜಾಗತೀಕರಣ, ಉದಾರೀಕರಣದ ನಂತರದ ಕಾಲಘಟ್ಟ­ದಲ್ಲಿ ಕನ್ನಡವು ಎದುರಿಸುತ್ತಿರುವ ಸವಾಲುಗಳನ್ನು ಅವರು ನೆನಪಿಸಿದ್ದಾರೆ. ರೈಲ್ವೆ ಸೌಕರ್ಯದಿಂದ ಹಿಡಿದು ಅಂಚೆ ಚೀಟಿಗಳನ್ನು ಪ್ರಕಟಿಸುವವರೆಗೆ ಕೇಂದ್ರ ಸರ್ಕಾರ, ಕರ್ನಾಟಕವನ್ನು ಕಡೆಗಣಿಸಿದೆ. ಇದು ಗೊತ್ತಿರು­ವಂಥದ್ದೇ ಆಗಿದ್ದರೂ ಪುನರುಚ್ಚರಿಸಿರು­ವುದು ಸಮಂಜಸವೇ ಸರಿ. ಈ ಬಾರಿಯ ಸಮ್ಮೇಳನ ಹಲವು ದೃಷ್ಟಿಗಳಿಂದ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬಲಿರುವ ಸಂದರ್ಭದಲ್ಲಿ ನಡೆಯುತ್ತಿರುವ ಸಮ್ಮೇಳನ ಇದು. ಈ ಐತಿಹಾಸಿಕ ಸಮ್ಮೇಳನಕ್ಕೆ ಅರ್ಹರಾದ ದಲಿತ ಸಾಹಿತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡ­ಬೇಕೆಂದು ನಿರ್ಧರಿಸಿ ಕಸಾಪ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು ಸಂಪರ್ಕಿಸಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯೇ ಮಾಧ್ಯಮ­­ವಾಗಬೇಕು ಎಂದು ಆಗ್ರಹಿಸಿದ ಮಹಾದೇವ ಅವರು, ಇದೇ ಕಾರಣ ಮುಂದೊಡ್ಡಿ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದರು. ದೇವನೂರರ ಈ ಆಗ್ರಹವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಸಿದ್ಧ­ಲಿಂಗಯ್ಯ ಅವರೂ ಕನ್ನಡದ ಬೆಳವಣಿಗೆಗೆ ಪೂರಕವಾದ ಸಲಹೆಗಳನ್ನಿತ್ತಿದ್ದಾರೆ. ಶಿಕ್ಷಣದಲ್ಲಿ ಮಾಧ್ಯಮದ ಗೊಂದಲವನ್ನು ಬಗೆಹರಿಸಿ ಕನ್ನಡ ಭಾಷೆಯ ಪರವಾಗಿ ತಾರ್ಕಿಕ ಅಂತ್ಯ ನೀಡುವಂತಾಗಬೇಕಿದೆ. ಅದಕ್ಕಾಗಿ ಕನ್ನಡಿಗರು ಆಂದೋಲನಕ್ಕೂ ಸಿದ್ಧರಾಗಬೇಕು ಎಂದು ಸಿದ್ಧಲಿಂಗಯ್ಯ­ನವರು ಹೇಳಿರು­ವುದು ಸರಿಯಾಗಿಯೇ ಇದೆ. ರಾಷ್ಟ್ರಮಟ್ಟದ ವಿವಿಧ ರಂಗಗಳಲ್ಲಿ ಕನ್ನಡ ತನದ ‘ಪ್ರತಿಮೆ’ ಬಡಕಲಾಗಿ ಬಿಂಬಿತ­ವಾಗುತ್ತಿರುವುದರ ಕುರಿತ ಬೇಸರ ಭಾಷಣದ ಉದ್ದಕ್ಕೂ ವ್ಯಕ್ತವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಮೌಢ್ಯಗಳನ್ನು ಅಧ್ಯಕ್ಷೀಯ ಭಾಷಣದಲ್ಲಿ ಪ್ರಸ್ತಾಪಿಸಿ, ವಿರೋಧ ವ್ಯಕ್ತಪಡಿಸಿದ್ದಾರೆ. ಈ ವರ್ಷವನ್ನು ‘ಕನ್ನಡ ವರ್ಷ’ ಮಾಡಬೇಕು ಎಂದಿರುವು­ದರ ಜತೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಇಡೀ ವರ್ಷ ವಾರಕ್ಕೆ ಒಂದು ದಿನ ‘ಕನ್ನಡ ದಿನ’ ಆಚರಣೆ ನಡೆಯಬೇಕು ಎಂದಿದ್ದಾರೆ. ಆದರೆ ಈ ಸಾಂಕೇತಿಕ ಆಚರಣೆಗಳಾಚೆಗೆ ಕನ್ನಡ ಒಂದು ಸಂವೇದನೆಯಾಗಿ ಜನರ ಮನಸ್ಸುಗಳಲ್ಲಿ ಬಲಗೊಳ್ಳಬೇಕಾದುದು ಮುಖ್ಯ. ಸರ್ಕಾರಿ, ಅರೆಸರ್ಕಾರಿ ಕಚೇರಿ, ವಿಶ್ವವಿದ್ಯಾಲಯಗಳು, ಕಾರ್ಖಾನೆಗಳು, ಬ್ಯಾಂಕುಗಳು, ಬಹು­ರಾಷ್ಟ್ರೀಯ ಕಂಪೆನಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿ ಮಾತನಾಡುವುದು ಹೆಮ್ಮೆಯ ವಿಷಯವಾಗಬೇಕು. ಅದಕ್ಕಾಗಿ ‘ಕನ್ನಡ ಮಾತಾಡಿ’ ಚಳವಳಿ ನಡೆಯಬೇಕೆಂದು ಸಿದ್ಧಲಿಂಗಯ್ಯ­ನವರು ಕರೆ ನೀಡಿದ್ದಾರೆ. ಇದರಿಂದ ಕನ್ನಡ ಬಳಕೆಯ ವ್ಯಾಪ್ತಿಯನ್ನು ಹಿಗ್ಗಿಸಬಹುದು ಎಂಬ ಅವರ ಆಲೋಚನೆ ಸರಿಯಾದುದು. ಸರ್ಕಾರದ ಸಹಭಾಗಿತ್ವ ಮತ್ತು ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ಇಂಥ ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗೀಕಾರವಾಗುವ ನಿರ್ಣಯಗಳಾಗಲಿ, ಅಧ್ಯಕ್ಷೀಯ ಭಾಷಣಗಳಾಗಲಿ ಕೇವಲ ಬಾಯುಪಚಾರದ ಮಾತುಗಳಾಗಬಾರದು. ಸಮ್ಮೇಳನದಲ್ಲಿ ಚರ್ಚೆಯಾಗುವ ವಿಷಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅನುಷ್ಠಾನಕ್ಕೆ ತರಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.