ಕಾಯಂ ನೇಮಕಾತಿ ಬೇಕು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನೀಡಲಾದ ಗೌರವ ವಂದನೆಯ ನೇತೃತ್ವ ವಹಿಸಿದ್ದು ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಪೂಜಾ ಠಾಕೂರ್‌. ಇದು ಹೆಮ್ಮೆಯ ಸಂಗತಿ. ಈ ಗೌರವವನ್ನು ಪಡೆದ ಮೊದಲ ಮಹಿಳಾ ಅಧಿಕಾರಿಯಾದರು ಅವರು. ಜೊತೆಗೆ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳ ಸಂಪೂರ್ಣ ಮಹಿಳಾ ತುಕಡಿಗಳು 66ನೇ ಗಣರಾಜ್ಯೋತ್ಸವ ದಿನದ ಪಥ­ಸಂಚಲನದಲ್ಲಿ ಪಾಲ್ಗೊಂಡು ‘ನಾರಿಶಕ್ತಿ’ಯನ್ನು ಪ್ರದರ್ಶಿಸಿ ಹೊಸ ಇತಿಹಾಸ ನಿರ್ಮಿಸಿದ್ದು ವಿಶೇಷ. ಆದರೆ ‘ನಾರಿಶಕ್ತಿ’ಯ ಈ ವಿಜೃಂಭಣೆ ಇಂತಹ ಸಾಂಕೇತಿಕತೆಗಳಿಗೆ ಮಾತ್ರ ಸೀಮಿತವಾಗಬಾರದು. ಏಕೆಂದರೆ ಸಶಸ್ತ್ರ ಪಡೆ­ಗಳಲ್ಲಿ ನೇಮಕಾತಿ ವಿಚಾರದಲ್ಲಿ ಇನ್ನೂ ತಾರತಮ್ಯ ಇರುವುದು ಗೊತ್ತಿರುವ ಸಂಗತಿ. ಸಶಸ್ತ್ರಪಡೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿ­ಕೊಳ್ಳುವ ವಿಶೇಷ ಪ್ರವೇಶ ಯೋಜನೆ ಆರಂಭವಾದದ್ದು 1993ರಲ್ಲಿ. ಆದರೆ ಇದಕ್ಕೂ ಮುಂಚೆ ನರ್ಸ್ ಹಾಗೂ ವೈದ್ಯಾಧಿಕಾರಿಗಳಾಗಿ ಮಾತ್ರ ಮಹಿಳೆಯರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಈಗ ಅಲ್ಪಾವಧಿ ಸೇವಾ ನೇಮಕಾತಿಯಡಿ ಮಹಿಳಾ ಅಧಿಕಾರಿಗಳನ್ನು ಸಶಸ್ತ್ರ ಪಡೆಗಳ ವಿವಿಧ ಶಾಖೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 5ರಿಂದ 14 ವರ್ಷಗಳ­ವರೆಗೆ ಕಾರ್ಯ ನಿರ್ವಹಿಸಲು ಇದರಿಂದ ಅವಕಾಶ ಸಿಗುತ್ತದೆ. ಆದರೆ 20 ವರ್ಷ ಸೇವೆ ಪೂರೈಸಿದಲ್ಲಿ ಮಾತ್ರ ಸಿಗುವ ಪಿಂಚಿಣಿ ಮತ್ತಿತರ ಸೌಲಭ್ಯ­ಗ­ಳಿಂದ ಈ ಮಹಿಳೆಯರು ವಂಚಿತರಾಗುತ್ತಾರೆ. ಇಂತಹ ತಾರತಮ್ಯದ ನೇಮ­ಕಾತಿ ನಿೀತಿಯನ್ನು ಟೀಕಿಸಿದ್ದ ದೆಹಲಿ ಹೈಕೋರ್ಟ್, ಮಹಿಳಾ ಸೇನಾಧಿ­ಕಾರಿ­ಗಳಿಗಿರುವ ಕಾಯಂ ನೇಮಕಾತಿಯ ಹಕ್ಕನ್ನು 2010ರಲ್ಲಿ ಎತ್ತಿ ಹಿಡಿ­ದಿತ್ತು. ಆಗ ಈ ತೀರ್ಪಿಗೆ ತಲೆಬಾಗಿದ್ದ ಭಾರತೀಯ ವಾಯುಪಡೆ, ಮಹಿಳಾ ಅಧಿ­ಕಾರಿ­ಗಳಿಗೆ ಕಾಯಂ ನೇಮಕಾತಿಗೆ ಅವಕಾಶ ನೀಡಲು ಆರಂಭಿಸಿತು. ಆದರೆ ಈಗಲೂ ರಣರಂಗದ ಕಾದಾಡುವ ಘಟಕಗಳಿಗೆ (ಕಾಂಬ್ಯಾಟ್) ಮಹಿ­ಳೆಯರ ನೇಮಕದ ವಿಚಾರ ಪರಿಗಣನೆಯಲ್ಲಿಲ್ಲ ಎಂಬುದು ವಿಷಾದನೀಯ. ಮಹಿಳಾ ಸೇನಾಧಿಕಾರಿಗಳಿಗಿರುವ ಕಾಯಂ ನೇಮಕಾತಿಯ ಹಕ್ಕನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ 2012ರಲ್ಲಿ ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರಣರಂಗದ ಘಟಕಗಳಿಗೆ ಮಹಿಳೆ­ಯರ ನೇಮಕಾತಿಗೆ ನಮ್ಮ ಸಮಾಜವಿನ್ನೂ ಸನ್ನದ್ಧವಾಗಿಲ್ಲ ಎಂದು ಭೂಸೇನೆ ಸಮಜಾಯಿಷಿ ನೀಡಿದೆ. ಅಲ್ಲದೆ ಮಹಿಳೆಯನ್ನು ನಾಯಕಿಯಾಗಿ ಒಪ್ಪಿ­ಕೊಳ್ಳುವ ಮನಸ್ಥಿತಿ ಗ್ರಾಮೀಣ ಭಾಗಗಳಿಂದ ಬರುವ ಕಿರಿಯ ಪುರುಷ ಅಧಿಕಾರಿಗಳಲ್ಲಿ ರೂಪುಗೊಂಡಿರುವುದಿಲ್ಲ ಎಂದೂ ಸೇನೆ ವಿವರಿಸಿರುವುದು ನಮ್ಮ ಸಾಮಾಜಿಕ ಮನಸ್ಥಿತಿಗಳಿಗೆ ಕನ್ನಡಿ ಹಿಡಿಯುತ್ತದೆ. ಈ ವಿಚಾರವಿನ್ನೂ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಆದರೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮಹಿಳೆಯರು ಸೇನೆಯಲ್ಲಿ ಎಲ್ಲಾ ರೀತಿಯ ಕರ್ತವ್ಯಗಳನ್ನೂ ನಿರ್ವಹಿಸುತ್ತಾ ಯಶಸ್ವಿಯಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಹಾಗೆಯೇ ಅಲ್ಪಾವಧಿ ಸೇವಾ ನೇಮಕಾತಿಯಡಿ ವಿವಿಧ ಶಾಖೆಗಳಲ್ಲಿ ನೇಮಕಗೊಳ್ಳುವ ಮಹಿಳೆಯರು, ಪುರುಷರು ನಿರ್ವಹಿಸುವ ಎಲ್ಲಾ ಕೆಲಸ­ಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಬರುತ್ತಿದ್ದಾರೆ. ಬದಲಾಗ­ಬೇಕಾ­ಗಿರುವುದು ಮಹಿಳೆಯರ ಕುರಿತಾಗಿ ಭಾರತೀಯ ಸಮಾಜದಲ್ಲಿ ಬೇರೂರಿ­ರುವ ಮನೋಧರ್ಮ. ಹಾಗಾದಾಗ ಮಾತ್ರ ಪೂರ್ಣಪ್ರಮಾಣದ ವೃತ್ತಿಯ ಹಕ್ಕನ್ನು ತಾರತಮ್ಯವಿಲ್ಲದೆ ಮಹಿಳೆಯೂ ಪಡೆದುಕೊಳ್ಳುವುದು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.