ಅಸಮಂಜಸ ನಿರ್ಧಾರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಎಲ್ಲ ವಿಧದ ಜಾಹೀರಾತು ನಿಷೇಧಕ್ಕೆ ನಿರ್ಣಯ ಕೈಗೊಂಡಿದೆ. ಜಾಹೀರಾತು ವಿಭಾಗದಲ್ಲಿ ತಾಂಡವ­ವಾಡುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದೆ ಸೋತುಹೋಗಿರುವ ಬಿಬಿಎಂಪಿ ಆಡಳಿತವು ಜಾಹೀರಾತು ನಿಷೇಧದ ತೀರ್ಮಾನಕ್ಕೆ ಬಂದಿರುವುದು ದುರದೃಷ್ಟಕರ. ಕೇವಲ 2,000 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಜಾಹೀರಾತು ಮೂಲ­ದಿಂದ ಪ್ರತಿವರ್ಷ ₹ 200 ಕೋಟಿ ಆದಾಯ ಬಾಚಿಕೊಂಡರೆ, ಸುಮಾರು 2 ಲಕ್ಷ ಎಕರೆ ವಿಸ್ತೀರ್ಣವನ್ನು ಹೊಂದಿರುವ ಬಿಬಿಎಂಪಿ ₹ 20 ಕೋಟಿ ಸಂಗ್ರಹಿ­ಸಲು ತಿಣುಕಾಡುತ್ತಿದೆ. ಹೈಕೋರ್ಟ್‌ ಹಾಗೂ ಲೋಕಾ­ಯುಕ್ತ ಒಟ್ಟಾಗಿ ಚಾಟಿ ಬೀಸಿದರೂ ಬದಲಾಗದ ಭ್ರಷ್ಟ ವ್ಯವಸ್ಥೆಯೇ ಇದಕ್ಕೆ ಕಾರಣವಾಗಿದೆ. ಒಂದು ಫಲಕಕ್ಕೆ ಅನುಮತಿ ಪಡೆದು ಮೂರ್ನಾಲ್ಕು ಅಳವಡಿಸುವುದು, ಚಿಕ್ಕ ಅಳತೆಗೆ ಪಡೆದ ಅನುಮತಿ ಪತ್ರವನ್ನು ಬೃಹತ್‌ ಫಲಕ ಹಾಕಲು ಬಳಸು­ವುದು, ರಾಜಕಾಲುವೆ, ಸ್ಮಶಾನ ಮತ್ತು ಉದ್ಯಾನ­ಗಳಲ್ಲೂ ಫಲಕ ಹಾಕು­ವುದು, ಹೀಗೆ ನಡೆದಿರುವ ಅಕ್ರಮಗಳಿಗೆ ಲೆಕ್ಕವೇ ಇಲ್ಲ. ಕೋರ್ಟ್‌ ಆದೇಶ­ಗಳಿಗೆ ಅಧಿಕಾರಿಗಳು ಕಿಮ್ಮತ್ತನ್ನೇ ನೀಡದಿರುವುದನ್ನು ಗಮನಿಸಿದರೆ ತಮ್ಮ ಕುಟುಂಬ ವರ್ಗದವರ ಮೂಲಕ ಅವರು ಜಾಹೀರಾತು ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪಗಳಲ್ಲಿ ಹುರುಳಿದೆ ಎನಿಸುತ್ತದೆ. ಜನಪ್ರತಿನಿಧಿಗಳೂ ಅಷ್ಟೇ. ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಕೌನ್ಸಿಲ್‌ ಸಭೆಯಲ್ಲಿ ಅಬ್ಬರಿಸಿದರೂ ವಾರ್ಡ್‌ನಲ್ಲಿ ಅವರ ಭಾವಚಿತ್ರಗಳಿ­ರುವ ಫ್ಲೆಕ್ಸ್‌ಗಳು, ಕಟೌಟ್‌ಗಳು, ಫಲಕಗಳು ರಾರಾಜಿಸುತ್ತಿವೆ. ಶಾಸಕ­ರೊಬ್ಬರ ಜನ್ಮದಿನದ ಸಂದೇಶ ಹೊತ್ತ ಫ್ಲೆಕ್ಸ್‌ಗಳು ನಗರದ ತುಂಬಾ ವಾಕರಿಕೆಯ ವಾತಾವರಣ ಉಂಟು ಮಾಡಿದ್ದನ್ನು ಜನ ಇನ್ನೂ ಮರೆತಿಲ್ಲ. ರಾಜಕೀಯ ಅವಕಾಶಗಳಿಗಾಗಿ ಮುಖಂಡರಿಗೆ ಸ್ವಾಗತ ಕೋರುವ, ಜನ್ಮ­ದಿನದ ಶುಭಾ­ಶಯ ಹೇಳುವ ಫ್ಲೆಕ್ಸ್‌ಗಳ ಮೂಲಕ ಹೊಗಳುಭಟ್ಟರು ನಗರ­ದಲ್ಲಿ ‘ದೃಶ್ಯ ಮಾಲಿನ್ಯ’ ಉಂಟು ಮಾಡುತ್ತಿದ್ದಾರೆ. ಉಪ ಲೋಕಾಯುಕ್ತರು ಅಂತಹ ಹಾವಳಿ ನಿಯಂತ್ರಿಸಲು ಹೇಳಿದರೆ, ಬಿಬಿಎಂಪಿ ಶೀತಕ್ಕೆ ಔಷಧಿ ಪಡೆಯುವ ಬದಲು ಮೂಗನ್ನೇ ಕೊಯ್ದುಕೊಳ್ಳುವ ಕೆಲಸ ಮಾಡಿದೆ. ತಂತ್ರಜ್ಞಾನದ ಈ ಯುಗದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್‌) ಬಳಸಿ­ಕೊಂಡು ಅನಧಿಕೃತ ಜಾಹೀರಾತು ಫಲಕಗಳನ್ನು ನಿರ್ಬಂಧಿಸುವುದು ಕಷ್ಟದ ಕೆಲಸವೇನಲ್ಲ. ಆದರೆ, ರಾಜಕೀಯ ನಾಯಕರು, ಅಧಿಕಾರಿಗಳು ಹಾಗೂ ಏಜೆನ್ಸಿ­ದಾರರನ್ನು ಒಳಗೊಂಡ ದುಷ್ಟಕೂಟಕ್ಕೆ ಅದು ಬೇಕಾಗಿಲ್ಲ. ಜಿಐಎಸ್‌ ಮೂಲಕ ಜಾಹೀರಾತು ಫಲಕಗಳ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೆ ಅದರಿಂದ ಸೋರಿಕೆ ತಪ್ಪಿ ತೆರಿಗೆ ರೂಪದಲ್ಲಿ ನೂರಾರು ಕೋಟಿ ರೂಪಾಯಿ ಹಣ ಮೂಲಸೌಕರ್ಯ ಅಭಿವೃದ್ಧಿಗೆ ಸಿಗುತ್ತಿತ್ತು. ಸರ್ಕಾರದ ಮುಂದೆ ಪ್ರತಿಪೈಸೆಗೂ ಅಂಗಲಾಚುವ ಸ್ಥಿತಿಯೂ ತಪ್ಪುತ್ತಿತ್ತು. ನವದೆಹಲಿ, ಚೆನ್ನೈ ಮೊದಲಾದ ನಗರಗಳಲ್ಲಿ ಈ ಹಿಂದೆಯೇ ಜಾಹೀರಾತು ನಿಷೇಧ ಮಾಡಿರುವ ಕುರಿತು ಹೇಳಲಾಗುತ್ತಿದೆ. ಆದರೆ, ಆ ನಗರಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳು ತಲೆಎತ್ತಿ ಸ್ಥಳೀಯ ಸಂಸ್ಥೆಗಳಿಗೆ ನಯಾಪೈಸೆ ಆದಾಯವೂ ಅದರಿಂದ ಬರುತ್ತಿಲ್ಲ ಎನ್ನುವುದನ್ನು ಮರೆಮಾಚ­ಲಾಗು­ತ್ತಿದೆ. ಸರ್ಕಾರವಾದರೂ ಈ ಅಂಶಗಳನ್ನೆಲ್ಲ ಗಮನಿಸಿ ಬಿಬಿಎಂಪಿ ಆಡಳಿತಕ್ಕೆ ಬುದ್ಧಿವಾದ ಹೇಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.