ಪರೀಕ್ಷಾ ಪಾವಿತ್ರ್ಯಕ್ಕೆ ಕಳಂಕ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತ್ತು ನಾಗರಬೆಟ್ಟದ ಐಟಿಐ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ವ್ಯಾಪಕ ಅಕ್ರಮಗಳು ಪರೀಕ್ಷೆಯ ಪಾವಿತ್ರ್ಯಕ್ಕೆ ಕಳಂಕ ತಂದಿವೆ. ಪರೀಕ್ಷಾ ಕೇಂದ್ರದಲ್ಲಿಯೇ ಜೆರಾಕ್ಸ್ ಯಂತ್ರ ಇಟ್ಟು ಅವ್ಯವಹಾರಕ್ಕೆ ಬೇಕಾದ ಎಲ್ಲ ಅನುಕೂಲತೆ ಮಾಡಿಕೊಡಲಾಗಿತ್ತು ಎಂಬುದು ಕಳವಳಕಾರಿ ಸಂಗತಿ. ಈ ಕೇಂದ್ರಗಳಲ್ಲಿ ಮುದ್ರಿತ ಪ್ರಶ್ನೆ ಪತ್ರಿಕೆಗಳ ಬದಲು 3–4 ವಿದ್ಯಾರ್ಥಿಗಳಿಗೆ ಒಂದರಂತೆ ಜೆರಾಕ್ಸ್ ಪ್ರತಿ ವಿತರಿಸಲಾಗಿದೆ, ಉತ್ತರಗಳನ್ನು ಜೆರಾಕ್ಸ್ ಮಾಡಿ ಪರೀಕ್ಷಾರ್ಥಿಗಳಿಗೆ ಹಂಚಲಾಗಿದೆ, ಒಂದೇ ಬೆಂಚಿನಲ್ಲಿ ಮೂರು ಮೂರು ವಿದ್ಯಾರ್ಥಿಗಳನ್ನು ಕೂರಿಸಿ ಸಾಮೂಹಿಕ ನಕಲಿಗೆ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ವಿಜಯಪುರ ಉಪವಿಭಾಗಾ­ಧಿ­ಕಾರಿ ಪರಶುರಾಮ ಮಾದರ ಮತ್ತು ಅವರ ತಂಡ ಪತ್ತೆ ಹಚ್ಚಿದೆ. ಪರೀಕ್ಷೆ­ಗಳಲ್ಲಿ ಮೊಬೈಲ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. ಹೀಗಿದ್ದೂ ಈ ಎರಡೂ ಕೇಂದ್ರಗಳಲ್ಲಿ ಮಾತ್ರ ಅಂಥ ಯಾವ ನಿರ್ಬಂಧವೂ ಇರಲಿಲ್ಲ ಎಂಬುದು ಆಘಾತಕಾರಿ. ನಕಲಿ ಪರೀಕ್ಷಾರ್ಥಿಗಳು ಬಂದು ಉತ್ತರ ಪತ್ರಿಕೆ ಬರೆಯುತ್ತಿದ್ದರು ಎನ್ನುವುದನ್ನು ನೋಡಿದರೆ ನಮ್ಮ ಪರೀಕ್ಷೆಗಳು ಎಷ್ಟು ಅಧೋಗತಿಗೆ ಇಳಿಯುತ್ತಿವೆ ಎಂಬುದನ್ನು ಊಹಿಸಬಹುದು. ಇಲ್ಲಿ ಪರೀಕ್ಷೆ ಬರೆಯಲು ವಿಜಯಪುರ ಮಾತ್ರವಲ್ಲದೆ ಬಾಗಲಕೋಟೆ, ರಾಯಚೂರು, ಕಲಬುರ್ಗಿ ಜಿಲ್ಲೆಗಳ ಐಟಿಐ ಕಾಲೇಜುಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಬಂದಿದ್ದು ಇದೇ ಕಾರಣಕ್ಕಾಗಿಯೇ ಇರಬೇಕು. ಕೆಲವರಂತೂ ₹ 40 ಸಾವಿರದವರೆಗೂ ಕೊಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ. ಇಂಥ ಒಂದೆರಡು ಕೇಂದ್ರಗಳಲ್ಲಷ್ಟೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಯಾಕಿಷ್ಟು ಉತ್ಸಾಹ ಎಂಬ ಅನುಮಾನ ಪರೀಕ್ಷಾ ಉಸ್ತುವಾರಿ ಹೊತ್ತವರಿಗೆ ಬರಲೇ ಇಲ್ಲವೇ? ಅವರ ಕುಮ್ಮಕ್ಕಿಲ್ಲದೆ ಇಂಥ ಅಕ್ರಮಗಳು ನಡೆಯಲು ಸಾಧ್ಯವೇ ಇಲ್ಲ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ, ಸುತ್ತಲಿನ ಜೆರಾಕ್ಸ್ ಅಂಗಡಿ­ಗಳನ್ನು ಮುಚ್ಚಿಸುವ ಕ್ರಮ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಅದನ್ನೇ ಅಣಕಿಸುವಂತೆ ಪರೀಕ್ಷಾ ಕೇಂದ್ರದ ಒಳಗೇ ಜೆರಾಕ್ಸ್ ಯಂತ್ರ ಇಟ್ಟು ರಾಜಾರೋಷವಾಗಿ ಅಕ್ರಮ ನಡೆಸಿದ ಶಿಕ್ಷಣ ಸಂಸ್ಥೆಗಳ ನಡವಳಿಕೆ ಕಠಿಣ ದಂಡನೆಗೆ ಅರ್ಹ. ಉಪವಿಭಾಗಾಧಿಕಾರಿ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಕ್ರಮದಲ್ಲಿ ಭಾಗಿಯಾದವರು, ಸಹಕರಿಸಿ­ದ­ವರನ್ನು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಇಂಥ ವಿಷಯಗಳಲ್ಲಿ ಅನುಕಂಪ, ಮುಲಾಜು ತೋರಿಸುವುದರಿಂದ ಕೆಡುಕೇ ಜಾಸ್ತಿ. ಈ ಪ್ರವೃತ್ತಿ ಹೀಗೇ ಮುಂದುವರಿದರೆ ಪರೀಕ್ಷೆಗಳಿಗೆ ಕಿಮ್ಮತ್ತು ಇಲ್ಲದಂತಾಗುತ್ತದೆ. ಇಂತಹ ಬೆಳವಣಿಗೆ ದೀರ್ಘಾವಧಿಯಲ್ಲಿ ವಿದ್ಯಾರ್ಥಿಗಳಿಗೇ ಮಾರಕ ಎಂಬು­ದನ್ನು ಮೊದಲು ಅರಿತುಕೊಳ್ಳಬೇಕು. ಪರೀಕ್ಷೆಯಲ್ಲಿ ಪಾಸಾದ ಪ್ರಮಾಣ­ಪತ್ರ ಪಡೆದುಕೊಂಡರೂ ಉದ್ಯೋಗಗಳಿಗೆ ವಿದ್ಯಾರ್ಥಿಗಳು ಅರ್ಹರಾಗು­ವುದು ಸಾಧ್ಯವಿಲ್ಲ. ಜ್ಞಾನ ಎನ್ನುವುದು ನಿರಂತರ ಪರಿಶ್ರಮದಿಂದ ಸಿಗು­ವಂಥದ್ದೇ ಹೊರತು ಹಣ ಕೊಟ್ಟು ಖರೀದಿಸುವ ಸರಕಲ್ಲ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಉದ್ಯೋಗ ಕ್ಷೇತ್ರಕ್ಕೆ ಬೇಕಿರುವುದು ಕಲಿತು ಕೌಶಲ ಬೆಳೆಸಿಕೊಂಡವರು. ನಕಲು ಹೊಡೆದು ಪಾಸಾದವರಿಗೆ ಅಲ್ಲಿ ಬೆಲೆಯೂ ಇಲ್ಲ, ಭವಿಷ್ಯವೂ ಇಲ್ಲ. ಕೌಶಲವಿದ್ದರೆ ಮಾತ್ರ ಮುಂದಿನ ವೃತ್ತಿಜೀವನದಲ್ಲಿ ಮುಂದುವರಿಯುವುದು ಸಾಧ್ಯವಾಗುತ್ತದೆ. ಇದನ್ನು ಅರಿತರೆ ವಿದ್ಯಾರ್ಥಿಗಳಿಗೇ ಒಳ್ಳೆಯದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.