ಬಾಂಧವ್ಯವೃದ್ಧಿ ಅಗತ್ಯ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಯ ನಂತರ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಚೀನಾಗೆ ಭೇಟಿ ನೀಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸುವುದರೊಳಗೇ ಮೇ ತಿಂಗಳಲ್ಲಿ ನರೇಂದ್ರ ಮೋದಿ ಅವರು ಚೀನಾಗೆ ಭೇಟಿ ನೀಡಲಿದ್ದಾರೆ ಎಂಬ ವಿಚಾರವನ್ನು ಸುಷ್ಮಾ ಪ್ರಕಟಿಸಿದ್ದಾರೆ. ಮೋದಿಯವರ ಚೀನಾ ಭೇಟಿಗೆ ನೆಲೆ ಸಿದ್ಧಪಡಿಸುವ ಭೇಟಿ­ಯಾಗಿತ್ತು ಇದು. ಈ ಸಂದರ್ಭದಲ್ಲಿ ಸಕಾರಾತ್ಮಕ ಸಂಕೇತಗಳು ಹೊಮ್ಮಿ­ರು­ವುದು ಸ್ವಾಗತಾರ್ಹ. ಹೊಸ ವರ್ಷದಲ್ಲಿ ಭಾರತ – ಚೀನಾ ಬಾಂಧವ್ಯದಲ್ಲಿ ‘ಹೊಸ ಪ್ರಗತಿ’ ಸಾಧಿಸುವ ಆಶಯವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ವ್ಯಕ್ತಪಡಿಸಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಕ್ಸಿ ಜಿನ್ ಪಿಂಗ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದುದನ್ನು ಇಲ್ಲಿ ಸ್ಮರಿಸಬಹುದು. ಭಾರತದ ಆರ್ಥಿಕ ಪ್ರಗತಿಗೆ ಹಣ­ಹೂಡಿಕೆಯ ಮೂಲಕ ಚೀನಾ ನೀಡಬಹುದಾದ ಕೊಡುಗೆಯನ್ನು ಕಡೆ­ಗಣಿಸಲಾಗದು. ಮೂಲಸೌಕರ್ಯಗಳ ನಿರ್ಮಾಣದ ವಿಚಾರದಲ್ಲಿ ಚೀನಾ ದೇಶಕ್ಕಿರುವ ಪರಿಣತಿಯೂ ಮುಖ್ಯವಾದದ್ದು. ಹೀಗಾಗಿ ‘ಏಷ್ಯನ್ ಶತ­ಮಾನ’ದ ಗುರಿ ಸಾಧನೆಗೆ ಪ್ರಪಂಚದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ ಚೀನಾ ಹಾಗೂ ಭಾರತ ಮಧ್ಯದ ಸಹಕಾರ ಬಲವರ್ಧನೆ ಅವಶ್ಯ. ಪುರಾತನ ನಾಗರಿಕತೆ ಹೊಂದಿದ ಏಷ್ಯಾದ ದೈತ್ಯ ರಾಷ್ಟ್ರ ಚೀನಾ ಜೊತೆಗಿನ ಭಾರತದ ಬಾಂಧವ್ಯದಲ್ಲಿ ಆಯಕಟ್ಟಿನ ವಿಚಾರಗಳ ಕುರಿತಂತೆ ಈಗಾಗಲೇ ಇರುವ ಪೂರ್ವ­ಗ್ರಹಗಳು ಕಿರಿಕಿರಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. 1962ರ ಭಾರತ– ಚೀನಾ ಯುದ್ಧದ ಕರಿ ನೆರಳು, ಬಾಂಧವ್ಯ ಬಲ­ವರ್ಧನೆಗೆ ಅಡ್ಡಿಯಾಗಬಾರದು. ಭಾರತ– ಚೀನಾ ಗಡಿ ಸಮಸ್ಯೆಯ ಶೀಘ್ರ ಇತ್ಯರ್ಥಕ್ಕೆ ಕ್ರಮಗಳನ್ನು ರೂಪಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂಬಂ­ತಹ ಆಶಯವನ್ನೂ ಸುಷ್ಮಾ ಸ್ವರಾಜ್ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ನೀತಿಯ ವಿಚಾರಗಳನ್ನು ಸರಳೀಕೃತವಾಗಿ ನೋಡುವುದು ಸರಿಯಲ್ಲ. ವಿಸ್ತೃತ ನೆಲೆಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಸಿಕೊಳ್ಳಲು ಪ್ರಯತ್ನಗಳು ಅಗತ್ಯ. ಭಾರತದಲ್ಲಿ ವ್ಯವಹಾರಗಳನ್ನು ನಡೆಸಲು ಚೀನಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ವಿಚಾರವನ್ನೂ ಚೀನಾ ಭೇಟಿಯ ಸಂದರ್ಭದಲ್ಲಿ ಸುಷ್ಮಾ ಪ್ರಸ್ತಾಪಿಸಿದ್ದಾರೆ. ಭಾರತದಲ್ಲಿ ತಯಾರಿಕಾ ವಲಯದ ಚೇತರಿಕೆಗಾಗಿ ಈಗಾ­ಗಲೇ ಕೈಗಾರಿಕಾ ಪಾರ್ಕ್‌ಗಳ ನಿರ್ಮಾಣಕ್ಕಾಗಿ ಚೀನಾಗೆ ಭಾರತ ಸರ್ಕಾರ ಅವಕಾಶ ನೀಡಿರುವುದು ಮುಖ್ಯ ಬೆಳವಣಿಗೆ. ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಆರ್ಥಿಕ ಹಾಗೂ ಮಿಲಿಟರಿ ನೆರವು, ಭಾರತಕ್ಕೆ ಕಿರಿಕಿರಿ­ಯುಂಟು ಮಾಡಬಹುದಾದಂತಹ ವಿಚಾರ. ಹಾಗೆಂದು ಪಾಕಿಸ್ತಾನ­ದೊಂ­ದಿಗೆ ಚೀನಾ ವ್ಯವಹಾರಗಳಿಗೆ ಭಾರತ ಆಕ್ಷೇಪ ವ್ಯಕ್ತಪಡಿಸುವುದು ಅಪ್ರಬುದ್ಧ ನಡೆಯಾಗುತ್ತದೆ. ಇಂತಹ ವಿಚಾರಗಳನ್ನು ಚೀನಾ ಜೊತೆಗಿನ ನೇರ ಮಾತುಕತೆಗಳಲ್ಲಿ ಪರಿಹರಿಸಿಕೊಳ್ಳಲು ಭಾರತ ಯತ್ನಿಸಬೇಕು, ಇದಕ್ಕೆ ಮುಖ್ಯವಾದದ್ದು ಉಭಯ ದೇಶಗಳ ಮಧ್ಯೆ ಪರಸ್ಪರ ವಿಶ್ವಾಸ ವೃದ್ಧಿ. ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಮೂಲಕ ಈ ಗುರಿ ಸಾಧನೆಗೆ ಶ್ರಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.