ವಿವಾದ ಬಗೆಹರಿಯಲಿ ಸಹಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಹುದ್ದೆಗೆ ಕಿತ್ತಾಟ ನಡೆದು ಎಂ.ಡಿ. ಕಚೇರಿ ಮತ್ತು ಅವರ ಆಪ್ತ ಸಹಾಯಕರ ಕಚೇರಿಗೂ ಬೀಗ ಹಾಕಿದ ಘಟನೆ ಜರುಗಿದೆ. ಈ ಹಿಂದೆ ಎಂ.ಡಿ.ಯಾಗಿದ್ದ ಎ.ಎಸ್‌.ಪ್ರೇಮನಾಥ್‌ ನಿವೃತ್ತರಾದ ನಂತರ ಐ.ಆರ್‌. ರಾಮಲಿಂಗೇ­ಗೌಡ ಅವರನ್ನು ಎಂ.ಡಿ.ಯಾಗಿ ಮಹಾಮಂಡಲ ನೇಮಕ ಮಾಡಿದೆ. ಆದರೆ ಸರ್ಕಾರವು ಹಿರಿಯ ಐಎಎಸ್‌ ಅಧಿಕಾರಿ ಎಸ್‌.ಎನ್‌.­ಜಯರಾಂ ಅವರನ್ನು ಇದೇ ಹುದ್ದೆಗೆ ವರ್ಗಾವಣೆ ಮಾಡಿದೆ. ಇವರಿಬ್ಬರೂ ಒಂದೇ ದಿನ ಅಧಿಕಾರ ಸ್ವೀಕರಿಸಿದ್ದಾರೆ. ಸೋಮವಾರ ಜಯರಾಂ ಕಚೇರಿಗೆ ಬರಲು ವಾಹನ ಸೌಲಭ್ಯವನ್ನು ಕೆಎಂಎಫ್‌ ಕಲ್ಪಿಸಿಲ್ಲ. ಅಂದು ಕಚೇರಿಗೆ ಬೀಗ ಹಾಕಿಸಿದ ಘಟನೆಯೂ ನಡೆದಿದೆ. ಅದೇ ದಿನ ಸರ್ಕಾರದ ವರ್ಗಾವಣೆ ಆದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲು ಹತ್ತಿದ ರಾಮಲಿಂಗೇಗೌಡ ತಡೆಯಾಜ್ಞೆ ಪಡೆದಿದ್ದಾರೆ. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಪಡೆಯಬೇಕು ಎನ್ನುವ ಕೇವಿಯಟ್‌ ಅನ್ನು ಕೆಎಂಎಫ್‌ ಅಥವಾ ಸಹಕಾರ ಇಲಾಖೆ ಹಾಕಲೇ ಇಲ್ಲ. ಇದು ಸರ್ಕಾರಕ್ಕೆ ಆದ ಹಿನ್ನಡೆ. ಕೆಎಂಎಫ್‌ ಸ್ವಾಯತ್ತ ಸಂಸ್ಥೆಯಾದರೂ ಹಾಲಿನ ದರ ನಿಗದಿಯನ್ನು ಸಹಕಾರ ಇಲಾಖೆಯೇ ಮಾಡುತ್ತಿದೆ. ಹಾಲಿಗೆ ಬೆಂಬಲ ಬೆಲೆ, ಕ್ಷೀರಭಾಗ್ಯ ಯೋಜನೆ ಮೂಲಕ ಸಂಸ್ಥೆಗೆ ಸರ್ಕಾರ ಆರ್ಥಿಕ ಬೆಂಬಲ ನೀಡುತ್ತಿದೆ. ಕೆಎಂಎಫ್‌ ಸಾಲ ಪಡೆದರೂ ಖಾತ್ರಿ ನೀಡುವುದು ಸರ್ಕಾರವೇ. ಎಂ.ಡಿ. ಸ್ಥಾನಕ್ಕೆ ಐಎಎಸ್‌ ಅಧಿಕಾರಿಯನ್ನು ನೇಮಿಸಿರುವುದು ಇದೇ ಮೊದಲಲ್ಲ. ಐಎಎಸ್‌ ಅಧಿಕಾರಿಯಾದ ಹರ್ಷಗುಪ್ತ ಅವರನ್ನು ೨೦೧೨ರಲ್ಲಿ ಎಂ.ಡಿ.­ಯಾಗಿ ನೇಮಿಸಲಾಗಿತ್ತು. ನಂತರ ಪ್ರೇಮನಾಥ್‌ ಮರು ನೇಮಕವಾಗಿದ್ದರು. ೨೦೧೧ರಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ರಾಮಲಿಂಗೇಗೌಡ ಅವರನ್ನು ಅಮಾನತು ಮಾಡಲಾಗಿತ್ತು. ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ೨೦೧೪ರ ನವೆಂಬರ್‌ನಲ್ಲಿ ಕೆಎಂಎಫ್‌ ಮನವಿಯ ಮೇಲೆ ನ್ಯಾಯಾಲಯವೇ ಅಮಾನತು ಆದೇಶವನ್ನು ರದ್ದು ಮಾಡಿತ್ತು. ಆದರೆ ಇಲಾಖಾ ವಿಚಾರಣೆ ಬಾಕಿಯಿದೆ ಎನ್ನುವ ಕಾರಣದಿಂದ ಎಂ.ಡಿ. ಹುದ್ದೆ ನೀಡಲು ಕೆಎಂಎಫ್‌ ಆಡಳಿತ ಮಂಡಳಿ ನಿರಾಕರಿಸಿತ್ತು. ಪ್ರೇಮನಾಥ್‌ ನಿವೃತ್ತರಾಗುವ ಮುನ್ನ ಆಡಳಿತ ಮಂಡಳಿಯು ನೂತನ ಎಂ.ಡಿ.ಯನ್ನು ಆಯ್ಕೆ ಮಾಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಿತ್ತು. ಇದೀಗ ಇಲಾಖಾ ವಿಚಾರಣೆ ಬಾಕಿಯಿರುವ ರಾಮಲಿಂಗೇಗೌಡ ಅವರನ್ನೇ ಈ ಸ್ಥಾನಕ್ಕೆ ತರಬೇಕು ಎನ್ನುವ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜ್‌ ಅವರ ಹಟಮಾರಿ ಧೋರಣೆ ಸಂಶಯ ಮೂಡಿಸುತ್ತದೆ. ಎಂ.ಡಿ. ನೇಮಕ ವಿಚಾರದಲ್ಲಿ ಹಿಂದಿ­ನಿಂದಲೂ ಜಟಾಪಟಿ ನಡೆದ ಇತಿಹಾಸವೇ ಕೆಎಂಎಫ್‌ನಲ್ಲಿದೆ. ಇದು ಮತ್ತೆ ಮುಂದುವರೆಯುವುದು ತರವಲ್ಲ. ಇಲ್ಲಿ ನಿತ್ಯ ೫೦ ಲಕ್ಷ ಲೀಟರ್‌ ಹಾಲಿನ ವಹಿವಾಟು ನಡೆಯುತ್ತದೆ. ಹೀಗಾಗಿ ಆಡಳಿತದಲ್ಲಿ ಕಪ್ಪುಚುಕ್ಕೆ ಇರಬಾರದು. ಹಾಲು ಉತ್ಪಾದಕರು ಕಟ್ಟಿ ಬೆಳೆಸಿದ ಸಂಸ್ಥೆ ಉಳಿಯ­ಬೇಕಾದರೆ ಈಗ ತಲೆಯೆತ್ತಿರುವ ವಿವಾದ ಬಗೆಹರಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.