ಎಚ್ಚರಿಕೆಯ ನಡೆ ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳ­ವಾರ ಪ್ರಕಟಿಸಿದ ದ್ವೈಮಾಸಿಕ ಹಣಕಾಸು ನೀತಿ ಪರಾ­ಮರ್ಶೆಯಲ್ಲಿ ಬ್ಯಾಂಕ್ ಬಡ್ಡಿ ದರಗಳಿಗೆ ಸಂಬಂಧಿಸಿ­ದಂತೆ ತಟಸ್ಥ ಧೋರಣೆ ತಳೆದಿರುವುದು, ಆರ್ಥಿಕ ವೃದ್ಧಿ ಮತ್ತು ಹಣದುಬ್ಬರದ ಒಗಟು ಎದುರಿಸುವ ಎಚ್ಚರಿಕೆಯ ನಡೆಯಾಗಿದೆ. ಮೂರು ವಾರಗಳ ಹಿಂದೆಯಷ್ಟೆ ಅನಿರೀಕ್ಷಿತವಾಗಿ ಅಲ್ಪಾವಧಿ ಬಡ್ಡಿಯನ್ನು (ರೆಪೊ ದರ) ಶೇ 0.25ರಷ್ಟು ತಗ್ಗಿಸಿ ಎಲ್ಲರನ್ನೂ ಚಕಿತ­ಗೊಳಿಸಿದ್ದ ಆರ್‌ಬಿಐ ಗವರ್ನರ್ ರಘುರಾಂ ರಾಜನ್, ಈ ಬಾರಿ ಅಂತಹ ನಿರ್ಧಾರ­ ತೆಗೆದು­ಕೊಂಡಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣದ ಹರಿವು (ನಗದುತನ) ಹೆಚ್ಚಿಸಲು ಎಸ್‌ಎಲ್‌ಆರ್ ಅನ್ನು ಮಾತ್ರ ಶೇ 0.50ರಷ್ಟು (ಶೇ 22ರಿಂದ ಶೇ 21.50ಕ್ಕೆ) ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಸಾಲದ ಉದ್ದೇಶಕ್ಕೆ ಬ್ಯಾಂಕ್‌ಗಳ ಬಳಿ ₹ 45 ಸಾವಿರ ಕೋಟಿಗಳಷ್ಟು ಹೆಚ್ಚು­ವರಿ ಮೊತ್ತವು ಉಳಿಯಲಿದೆ. ಮೂಲ ಸೌಕರ್ಯ ರಂಗದಲ್ಲಿ ಬಂಡ­ವಾಳ ಹೂಡಿಕೆ ಹೆಚ್ಚಿಸಲು ಮತ್ತು ಉದ್ಯಮ ವಲಯದ ಸಾಲದ ಅಗತ್ಯ ಈಡೇರಿಸಲು ಈ ಮೊತ್ತ ನೆರವಾ­ಗಲಿದೆ. ಬ್ಯಾಂಕ್‌ಗಳು ಮತ್ತು ಉದ್ಯಮ ವಲಯವು ಈ ಮೊತ್ತವನ್ನು ಸದುಪಯೋಗ ಮಾಡಿ­ಕೊಳ್ಳ­ಬೇಕಾಗಿದೆ. ಹಣದ ಹರಿವು ಹೆಚ್ಚಳದ ಹೊರ­ತಾಗಿಯೂ, ತಕ್ಷಣಕ್ಕೆ ಬ್ಯಾಂಕ್‌ ಬಡ್ಡಿ ದರಗಳನ್ನು ಇಳಿಸುವುದಿಲ್ಲ ಎಂದು ಹಲವು ಬ್ಯಾಂಕ್‌ ಮುಖ್ಯ­ಸ್ಥರು ಹೇಳಿರುವುದು ಕೈಗಾರಿಕಾ ವಲಯದಲ್ಲಿ ಸಹಜವಾಗಿಯೇ ನಿರಾಶೆ ಮೂಡಿಸಿದೆ. ರೆಪೊ ದರ ತಗ್ಗಿಸಿದ ನಂತರವೂ ಕೇವಲ ಎರಡೇ ಪ್ರಮುಖ ಬ್ಯಾಂಕ್‌ಗಳು ಬಡ್ಡಿ ದರ ಕಡಿಮೆ ಮಾಡಿದ್ದವು. ಈಗಲೂ ಬಡ್ಡಿ ದರ ಇಳಿಸು­ವುದಿಲ್ಲ ಎಂದು ಪ್ರಮುಖ ಬ್ಯಾಂಕ್‌­ಗಳು ತಳೆದಿರುವ ನಿಲುವು ಬ್ಯಾಂಕ್‌ ಸಾಲ­ಗಾರರ ಪಾಲಿ­ಗಂತೂ ನಿರಾ­ಶಾದಾ­ಯಕ ಸಂಗತಿ­ಯಾಗಿದೆ. ಮುಂಬರುವ ಬೇಸಿಗೆ ದಿನಗಳಲ್ಲಿ ಆಹಾರ ಧಾನ್ಯಗಳ ಬೆಲೆಗಳು ಏರಲಿ­ರುವುದು, ಚೀನಾದ ಆರ್ಥಿಕ ವೃದ್ಧಿ ದರ ಕಡಿಮೆಯಾಗಿರುವುದು, ಐರೋಪ್ಯ ಒಕ್ಕೂಟದಲ್ಲಿನ ಹಣಕಾಸು ಬಿಕ್ಕಟ್ಟು ಮುಂದುವರೆದಿರುವುದು ಮತ್ತು ಕಚ್ಚಾ ತೈಲದ ಬೆಲೆ ಯಾವುದೇ ಸಂದರ್ಭದಲ್ಲಿ ಏರಿಕೆಯಾಗುವ ಸಾಧ್ಯತೆ ಆರ್‌ಬಿಐನ ಸದ್ಯದ ನಿರ್ಧಾರದ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟ­ಗೊಳ್ಳುತ್ತದೆ. ಕೇಂದ್ರ ಸರ್ಕಾರವು 2015–16ನೇ ಸಾಲಿನ ಮುಂಗಡ ಪತ್ರದಲ್ಲಿ ಕೆಲವು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯ ಇರು­ವುದನ್ನೂ ಆರ್‌ಬಿಐ ನಿಲುವು ಮನದಟ್ಟು ಮಾಡಿಕೊಡುತ್ತದೆ. ಕೇಂದ್ರವು ಹಣಕಾಸು ನೀತಿಗೆ ಸಂಬಂಧಿಸಿ­ದಂತೆ ಇನ್ನಷ್ಟು ಧಾರಾಳತನ ಪ್ರದರ್ಶಿ­ಸಿದರೆ ಮತ್ತು ಅಂತರ­ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ­ಯಾಗದಿದ್ದರೆ ಮಾತ್ರ ಬಡ್ಡಿ ದರಗಳನ್ನು ಇಳಿಸುವುದು ಆರ್‌ಬಿಐಗೆ ಅನಿ­ವಾರ್ಯವಾಗಲಿದೆ. ಹಣದ ಹರಿವು ಹೆಚ್ಚಳವು ಬ್ಯಾಂಕ್‌ಗಳ ಮಧ್ಯೆ ಬಡ್ಡಿ ದರಕ್ಕೆ ಸಂಬಂಧಿಸಿದಂತೆ ಸ್ಪರ್ಧಾ­ತ್ಮಕತೆ ಹೆಚ್ಚಿಸುವುದನ್ನೇ ಸದ್ಯದ ಮಟ್ಟಿಗೆ ನೆಚ್ಚಿಕೊಳ್ಳುವುದು ಮತ್ತು ಬಡ್ಡಿ ದರ ಇಳಿಕೆ ಬಗ್ಗೆ ಮಾರ್ಚ್‌ ಅಂತ್ಯದವರೆಗೆ ಕಾದು ನೋಡುವುದು ಉದ್ಯಮದ ಪಾಲಿಗೆ ಅನಿವಾರ್ಯ­ವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.