ಐಎಸ್ ಉಗ್ರರನ್ನು ನಿಯಂತ್ರಿಸಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರು ಒತ್ತೆಯಾಗಿ ಇರಿಸಿಕೊಂಡಿದ್ದ ಜೋರ್ಡಾನ್ ಪೈಲಟ್‌ನನ್ನು ಕಬ್ಬಿಣದ ಪಂಜರದಲ್ಲಿ ಕೂಡಿಹಾಕಿ ಸಜೀವವಾಗಿ ದಹಿಸಿದ ಘಟನೆ ಬರ್ಬರವಾದದ್ದು. ವಿಶ್ವದಾದ್ಯಂತ ಈ ಕ್ರೌರ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳಾ ಆತ್ಮಾ­ಹುತಿ ಬಾಂಬರ್ ಸೇರಿದಂತೆ ಇಬ್ಬರು ಜಿಹಾದಿ ಉಗ್ರರನ್ನು ಜೋರ್ಡಾನ್ ಸಹ ಗಲ್ಲಿಗೇರಿಸಿದೆ. ಐಎಸ್‌ ವಿರುದ್ಧ ಜೋರ್ಡಾನ್‌ ದೊರೆ ಅಬ್ದುಲ್ಲಾ ಅವರು ಸಮರ ಘೋಷಿಸಿದ್ದಾರೆ. ‘ನಮ್ಮ ನಂಬಿಕೆ, ಮೌಲ್ಯ ಹಾಗೂ ಮನು­ಷ್ಯ­ತ್ವದ ತತ್ವಗಳ ರಕ್ಷಣೆಗಾಗಿ ಈ ಸಮರ ಸಾರಲಾಗುವುದು’ ಎಂದು ಅವರು ಹೇಳಿದ್ದಾರೆ. ಈವರೆಗೆ ಒತ್ತೆಯಾ­ಗಿರಿಸಿಕೊಂಡ ಅನೇಕ ರಾಷ್ಟ್ರಗಳ ಒತ್ತೆಯಾ­ಳು­ಗಳ ಕತ್ತು ಕತ್ತರಿಸುವ ಕುಕೃತ್ಯ­ಗಳನ್ನೂ ಐಎಸ್ ಉಗ್ರರು ಎಸಗಿಕೊಂಡೇ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಜಪಾನಿ ಪತ್ರಕರ್ತನೊಬ್ಬನ ತಲೆಯನ್ನು ಈ ಉಗ್ರರು ಕಡಿದಿದ್ದರು. ಈ ಬಗೆಯ ಕ್ರೌರ್ಯ ಆಘಾತಕಾರಿ. ಜೋರ್ಡಾನಿನ ಯುದ್ಧ ವಿಮಾನ ಪೈಲಟ್ ಹತ್ಯೆಯಂತೂ ಜೋರ್ಡಾನ್ ಜನತೆಯಲ್ಲಿ ಆಕ್ರೋಶ ಹಾಗೂ ಹೇವರಿಕೆ ಹುಟ್ಟಿಸಿರುವುದು ಸಹಜವಾದದ್ದು. ಇತರ ಭಯೋತ್ಪಾದನಾ ಸಂಘಟನೆಗಳಿಗಿಂತ ಐಎಸ್ ಕಾರ್ಯಾಚರಣೆ ವಿಭಿನ್ನವಾಗಿದೆ. ಏಕೆಂದರೆ ಇಂದು ಸಿರಿಯಾ ಹಾಗೂ ಇರಾಕ್‌ನ ಅನೇಕ ಪ್ರದೇಶಗಳು ಐಎಸ್ ಹಿಡಿತದಲ್ಲಿ ಸಿಲುಕಿರುವುದು ಆತಂಕಕಾರಿ ಬೆಳವಣಿಗೆ­ಯಾಗಿದೆ. ಅಲ್ಲಿನ ತೈಲ ಸಂಪತ್ತಿನ ಒಡೆತನ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ­ಗಳನ್ನು ಖರೀದಿಸುವ ಸಾಮರ್ಥ್ಯ ಈ ಉಗ್ರರಿಗಿರುವುದು ವಿಶ್ವ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಅಂತರರಾಷ್ಟ್ರೀಯ ಸಮುದಾಯ ಇದನ್ನು ಗಂಭೀರ­ವಾಗಿ ಪರಿಗಣಿಸಬೇಕು. ಇಂತಹದೊಂದು ಸನ್ನಿವೇಶದಲ್ಲಿ ಐಎಸ್ ಉಗ್ರರ ಹಿಡಿತಕ್ಕೆ ಸಿಲುಕಿದ ಒತ್ತೆಯಾಳುಗಳನ್ನು ರಕ್ಷಿಸುವುದೂ ಅಮೆರಿಕ ನೇತೃತ್ವದ ಸೇನಾ ಒಕ್ಕೂಟಕ್ಕೆ ಸಾಧ್ಯವಾಗಲಿಲ್ಲ ಎಂಬುದು ವಿಷಾದನೀಯ. ಈ ಸೇನಾ ಒಕ್ಕೂಟದಲ್ಲಿ ಜೋರ್ಡಾನ್ ಸಹ ಇದೆ. ಹೀಗಾಗಿ ಕಳೆದ ಡಿಸೆಂಬರ್‌ನಲ್ಲಿ ಸಿರಿಯಾದಲ್ಲಿ ಜಿಹಾದಿಗಳ ವಿರುದ್ಧ ನಡೆದ ಕಾರ್ಯಾಚರ­ಣೆ­ಯಲ್ಲಿ ಜೋರ್ಡಾನ್‌ನ ಯುದ್ಧ ವಿಮಾನ ಪತನಗೊಂಡಾಗ ಅದರ ಪೈಲಟ್‌ನನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದ ಐಎಸ್ ಉಗ್ರರು ಈಗ ಅವರನ್ನು ಜೀವಂತ ದಹಿಸಿದ ಕುಕೃತ್ಯ ಎಸಗಿದ್ದಾರೆ. ಆದರೆ ಬಹುಕೋಟಿ ಮೌಲ್ಯದ ಗೂಢಚರ್ಯೆ ಸೌಲಭ್ಯ ಹಾಗೂ ವಿಶೇಷ ಕಾರ್ಯಾಚರಣೆ ತಂಡಗಳಿದ್ದೂ ಐಎಸ್ ನಿಯಂತ್ರಿತ ಪ್ರದೇಶದಲ್ಲಿ ಒತ್ತೆಯಾಳುಗಳನ್ನು ರಕ್ಷಿಸು­ವುದು ಸೇನಾ ಒಕ್ಕೂಟಕ್ಕೆ ಸಾಧ್ಯವಾಗಿಲ್ಲ ಎಂಬುದಂತೂ ಆತಂಕಕಾರಿ ವಿದ್ಯಮಾನ. ಮಧ್ಯ ಪ್ರಾಚ್ಯದಲ್ಲಿ ತಲೆ ಎತ್ತಿರುವ ಐಎಸ್ ಪ್ರಾಬಲ್ಯದ ಹಿಂದೆ ಹಲವು ವರ್ಷಗಳ ಸಾಮಾಜಿಕ ಹಾಗೂ ಸೈದ್ಧಾಂತಿಕ ಸಂಘರ್ಷಗಳ ರಾಜ­ಕಾರಣವಿದೆ. ಆದರೆ ಐಎಸ್ ಸಿದ್ಧಾಂತಗಳು ಹಾಗೂ ಕಾರ್ಯಾಚರಣೆ ರೀತಿ ನೀತಿಗಳು ಮಾನವೀಯತೆಗೇ ಬೆದರಿಕೆ ಒಡ್ಡುತ್ತಿವೆ. ಇದು ಬೆಳೆಯದ ಹಾಗೆ ತಡೆ ಒಡ್ಡಲು ಅಂತರರಾಷ್ಟ್ರೀಯ ಸಮುದಾಯ ಜಾಗತಿಕ ನೆಲೆಯಲ್ಲಿ ಶ್ರಮಿ­ಸಬೇಕು. ಈ ಸಮಸ್ಯೆ ಯಾವುದೋ ಒಂದು ದೇಶಕ್ಕೆ ಸೀಮಿತ ಅಂತ ಭಾವಿ­ಸಬಾರದು. ವಿಶ್ವದ ಬೇರೆಬೇರೆ ಪ್ರದೇಶಗಳಿಗೂ ಉಗ್ರಗಾಮಿ ಚಟು­ವ­ಟಿಕೆಗಳು ವ್ಯಾಪಿಸಿವೆ. ಹೀಗಾಗಿ ಈ ಸಮಸ್ಯೆಯ ಸಮಗ್ರ ವಿಶ್ಲೇಷಣೆ ಹಾಗೂ ನಿವಾರಣೆಗೆ ಕಾರ್ಯತಂತ್ರ ರೂಪಿಸುವುದು ಇಂದಿನ ತುರ್ತು ಅಗತ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.