ಸಮಗ್ರ ಪರಿಶೀಲನೆಯಾಗಲಿ ರಾಜ್ಯದಲ್ಲಿ ಲಾಟರಿ ಟಿಕೆಟ್‌ ವಿಷಯ ಮತ್ತೆ ಚರ್ಚಾ ವಸ್ತುವಾಗಿದೆ. ಲಾಟರಿಯನ್ನು ಪುನಃ ಆರಂಭಿಸಬೇಕು, ಅದರಿಂದ ಬಂದ ಹಣ­ವನ್ನು ಬಡ ಮತ್ತು ಮಧ್ಯಮ ವರ್ಗಕ್ಕಾಗಿ ರೂಪಿಸಲು ಉದ್ದೇಶಿಸಿರುವ ‘ಅಣ್ಣಾ ಕಾರುಣ್ಯ ಆರೋಗ್ಯ ಯೋಜನೆ’ಗೆ ಬಳಸಬೇಕು ಎಂದು ರಾಜ್ಯ ಯೋಜನಾ ಮಂಡಳಿ ಸಲಹೆ ಮಂಡಿಸಿದ್ದೇ ತಡ, ತೀವ್ರ ರೀತಿಯಲ್ಲಿ ಪರ– ವಿರೋಧ ವಾದಗಳ ಮಂಡನೆ ಶುರುವಾಗಿದೆ. ಮೊನ್ನೆ ನಡೆದ ಕಾಂಗ್ರೆಸ್‌ ಶಾಸ­­ಕಾಂಗ ಪಕ್ಷದ ಸಭೆಯಲ್ಲೂ ಅನೇಕ ಶಾಸಕರು ಲಾಟರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸ್ವತಃ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೇ ಬಹಿರಂಗ­ಪ­ಡಿ­ಸಿದ್ದರು. ಇದರ ಬೆನ್ನಲ್ಲಿಯೇ, ಯಾವುದೇ ಕಾರಣಕ್ಕೂ ಲಾಟರಿ ಮರು ಜಾರಿ ಇಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಸರ್ಕಾರ ಘೋಷಿಸಿದೆ. ಆದರೆ ಲಾಟರಿಯ ಸಾಧಕ– ಬಾಧಕಗಳ ಚರ್ಚೆಗೆ ಮುನ್ನವೇ ಎಲ್ಲರೂ ತಮ­ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಯಾವುದನ್ನೇ ಆಗಲಿ ವಿಚಾರವಿಮರ್ಶೆ ಮಾಡದೆ ಕುರುಡಾಗಿ ವಿರೋಧಿಸು­ವುದು ಅಥವಾ ಸಮರ್ಥಿಸುವುದು ಎರಡೂ ಸರಿಯಲ್ಲ. ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳುವ ಪ್ರಕಾರ, ‘ಆರೋಗ್ಯ ಯೋಜನೆ ಅನುಷ್ಠಾನಕ್ಕೆ ವರ್ಷಕ್ಕೆ ₹ 500– 600 ಕೋಟಿ ಅಗತ್ಯವಿದೆ, ಅದಕ್ಕಾಗಿ ಪ್ರತಿಯೊಂದು ಲಾಟರಿ ಟಿಕೆಟ್‌ಗೆ ₹ 10 ನಿಗದಿ ಮಾಡಿ ಈ ಯೋಜನೆಗೆ ಸಂಪನ್ಮೂಲ ಸಂಗ್ರಹಿಸಬಹುದು’. ಅಲ್ಲದೆ, ‘ಲಾಟರಿ ಆದಾಯವನ್ನು ಆರೋಗ್ಯ ಯೋಜನೆಗಲ್ಲದೆ ಬೇರೆ ಯಾವುದಕ್ಕೂ ಬಳಸುವುದಿಲ್ಲ, ಒಂದಂಕಿ ಲಾಟರಿ ಮತ್ತೆ ತಲೆ ಎತ್ತಲು ಬಿಡುವುದಿಲ್ಲ’ ಎಂಬ ಮಾತುಗಳನ್ನೂ ಆಡಿದ್ದಾರೆ. ರಾಜ್ಯವನ್ನು ಲಾಟರಿ ಮುಕ್ತ ಮಾಡುವ ಘೋಷಣೆಯೊಂದಿಗೆ ಸುಮಾರು ಏಳು ವರ್ಷಗಳ ಹಿಂದೆಯೇ ಲಾಟರಿ ನಿಷೇಧಿಸಲಾಗಿತ್ತು. ಅದೇನೋ ನಿಂತಿದೆ. ಆದರೆ ಬೇರೆಬೇರೆ ರೂಪದಲ್ಲಿರುವ ಮಟ್ಕಾ, ಜೂಜು ಏನಾದರೂ ನಿಂತಿದೆಯೇ ಎಂಬ ಅವರ ಮಾತಿನಲ್ಲೂ ಹುರುಳಿದೆ. ಏಕೆಂದರೆ ಎರಡು ವರ್ಷಗಳ ಹಿಂದೆ ಲಾಟರಿ ನಿಷೇಧ ದಳ ರಾಮನಗರದಲ್ಲಿ ‘ಮೊಬೈಲ್‌ ಲಾಟರಿ’ ಎಂಬ ಇನ್ನೊಂದು ಬಗೆಯ ಜೂಜಾಟವನ್ನು ಪತ್ತೆ ಮಾಡಿತ್ತು. ವಾಸ್ತವವಾಗಿ ಜೂಜಾಟ ಎಂಬುದು ಮಾನವನೊಳಗಿನ ಮೂಲ ಪ್ರವೃತ್ತಿ. ಕೆಲವರಲ್ಲಿ ಈ ಪ್ರವೃತ್ತಿ ಹೆಚ್ಚಿರುತ್ತದೆ. ಮತ್ತೆ ಕೆಲವರಲ್ಲಿ ಕಡಿಮೆ ಇರುತ್ತದೆ. ಲಾಟರಿಯಲ್ಲಿ ಅದೃಷ್ಟ ಪರೀಕ್ಷಿಸುವ ಪ್ರವೃತ್ತಿಯೂ ಜೂಜಿಗೆ ಸಮ­ನಾದುದೇ. ಜೂಜಾಡುವಿಕೆಯಲ್ಲಿ ಹಲವು ವಿಧಗಳಿವೆ. ಇಂತಹ ಜೂಜಾ­ಟ­ಗಳಿಂದ ಮನೆಮಠ ಕಳೆದುಕೊಂಡು ದಿವಾಳಿಯಾಗುವವರೂ ಇದ್ದಾರೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಬೇಕಾದುದು ಮುಖ್ಯ. ಅದಕ್ಕೆ ನಿಷೇಧ ಪರಿಹಾರವಾಗಲಾರದು. ಹಾಗೆಯೇ ಲಾಟರಿ ಒಳಗೊಂಡು ವಿವಿಧ ಜೂಜಾಟಗಳಿಗೆ ಸಂಬಂಧಿಸಿದಂತೆ ಆಮೂಲಾಗ್ರ ನೀತಿಯೊಂದನ್ನು ರೂಪಿಸು­ವುದು ಸರ್ಕಾರದ ಜವಾಬ್ದಾರಿ. ಈ ಸಂಬಂಧದಲ್ಲಿ ಲಾಟರಿ ಮತ್ತು ಅದರ ಒಳಿತು– ಕೆಡುಕುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಹಾಗೂ ಚರ್ಚೆಗಳು ನಡೆಯ­ಬೇಕು. ಇಂತಹ ಚರ್ಚೆಗಳು ನೀತಿ ನಿರೂಪಣೆಗೆ ಸಹಕಾರಿ­ಯಾ­ಗಬೇಕು. ವಿಶ್ವದ ಬಹಳಷ್ಟು ದೇಶಗಳಲ್ಲಿ, ಅಷ್ಟೇ ಏಕೆ ನಮ್ಮ ಪಕ್ಕದ ಕೇರಳ­ದಲ್ಲಿ ಈಗಲೂ ಲಾಟರಿ ಇದೆ. ಇಂಟರ್‌ನೆಟ್‌ ಯುಗದಲ್ಲಂತೂ ಲಾಟರಿ, ಜೂಜು, ರೇಸ್‌ಗಳನ್ನು ನಿಲ್ಲಿಸಲು ಸಾಧ್ಯವೇ ಇಲ್ಲವೇನೋ ಎನ್ನುವ ಸ್ಥಿತಿಯಿದೆ. ಮೊಬೈಲ್‌ನಲ್ಲೇ ಲಾಟರಿಗೆ ಬೇಡಿಕೆ ಸಲ್ಲಿಸಿ ಖರೀದಿಸುವಂತಹ ಕಾಲ ಇದು. ಹೀಗಿರುವಾಗ ಲಾಟರಿ ವಿಚಾರ ಸಾರ್ವಜನಿಕ ಚರ್ಚೆಗೆ ಒಳಪಡಬೇಕಾದುದು ಪ್ರಸ್ತುತ. ಯಾವುದೇ ಬಗೆಯ ಜೂಜು, ಕಾನೂನಿನ ನಿಯಂತ್ರಣದಲ್ಲಿರಬೇಕು. ಅಕ್ರಮ ಚಟುವಟಿಕೆಗಳಿಗೆ ಅವಕಾಶಗಳಿರದಂತೆ ನಿರ್ಬಂಧ­ಗಳನ್ನು ಬಿಗಿಗೊಳಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.