ಆಹಾರ ಭದ್ರತೆ ಬಡತನ ರೇಖೆಗಿಂತ ಮೇಲಿರುವ ಎಪಿಎಲ್ ಕಾರ್ಡ್ ಕುಟುಂಬಗಳಿಗೂ ರಿಯಾ­ಯಿತಿ ದರದ ಪಡಿತರ ಧಾನ್ಯದ ಅಗತ್ಯವಿದೆ ಎಂಬ ವಿಚಾರ ಸಿದ್ದರಾಮಯ್ಯ­­­ನವರ ಸರ್ಕಾರಕ್ಕೆ ಈಗ ಮನವರಿಕೆಯಾದಂತಿದೆ. ಹೀಗಾಗಿ ಈಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ­ಯವರು, ‘ಎಪಿಎಲ್ ಕುಟುಂಬಗಳಿಗೆ ತಿಂಗಳಿಗೆ ಕೆ.ಜಿ.ಗೆ 15 ರೂಪಾಯಿ ದರ­ದಲ್ಲಿ 10 ಕೆ.ಜಿ. ಅಕ್ಕಿ ಮತ್ತು 10 ರೂಪಾಯಿ ದರದಲ್ಲಿ 5 ಕೆ.ಜಿ. ಗೋಧಿ ವಿತರಿಸು­ವ’ ಇಂಗಿತ ಹೊರಹಾಕಿದ್ದಾರೆ. ಅಕ್ಕಿ ದರವನ್ನು ಕೆ.ಜಿ.ಗೆ 10 ರೂಪಾ­ಯಿ­ಗೆ ಇಳಿಸುವ ಸಲಹೆಯನ್ನೂ ಈ ಸಭೆಯಲ್ಲಿ ಶಾಸಕರು ನೀಡಿದ್ದ­ರೆನ್ನ­ಲಾಗಿದೆ. ಇದೇನೇ ಇದ್ದರೂ, ಎಪಿಎಲ್ ಕುಟುಂಬಗಳಿಗೂ ಸಬ್ಸಿಡಿ ದರದ ಆಹಾರ ಧಾನ್ಯ ಸಿಗುವುದು ಸ್ವಾಗತಾರ್ಹ. ಈ ಹಿಂದೆ 1997ರವರೆಗೂ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಎಲ್ಲರಿಗೂ ಸಬ್ಸಿಡಿ ದರದ ಆಹಾರ ಧಾನ್ಯ ಸಿಗುತ್ತಿತ್ತು. ನಂತರ ಬಿಪಿಎಲ್, ಅಂತ್ಯೋ­ದಯ ಹಾಗೂ ಎಪಿಎಲ್ ಕುಟುಂಬ­ಗಳ ವರ್ಗೀಕರಣ ಶುರುವಾಯಿತು. ಹೀಗಿದ್ದೂ ಬಡತನ ರೇಖೆಗಿಂತ ಮೇಲಿನ ಕುಟುಂಬಗಳಿಗೂ ಮುಕ್ತ ಮಾರು­ಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಒಂದಿಷ್ಟು ಆಹಾರ ಧಾನ್ಯ ವಿತರಿಸ­ಲಾಗುತ್ತಿತ್ತು. ನಂತರ ಈ ಯೋಜನೆ ಸ್ಥಗಿತಗೊಂಡಿತ್ತು. ಈಗ ಒಂದು ಅಂದಾಜಿ­ನ ಪ್ರಕಾರ ರಾಜ್ಯದಲ್ಲಿ 19.5 ಲಕ್ಷ ಎಪಿಎಲ್ ಕುಟುಂಬಗಳಿವೆ. ಆಹಾರ ಧಾನ್ಯಗಳ ಬೆಲೆ ಏರಿದರೆ ಅತಿ ಹೆಚ್ಚು ತೊಂದರೆ ಅನುಭವಿ­ಸುವುದು ಕೆಳ ಮಧ್ಯಮ ವರ್ಗಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇದನ್ನೇ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ‘ಬಡವರಾದರೆ ಬೇಡಿ ತಿನ್ನುತ್ತಾರೆ. ಶ್ರೀಮಂತರು ಕೊಂಡು ತಿನ್ನುತ್ತಾರೆ. ಕಷ್ಟ ಏನಿದ್ದರೂ ಮಧ್ಯಮ ವರ್ಗಕ್ಕೆ ಮೀಸಲಾಗಿಬಿಟ್ಟಿದೆ’ ಎಂದು ವ್ಯಾಖ್ಯಾನಿಸಿ­ದ್ದರು. ನಿಶ್ಚಿತ ಅಥವಾ ಸೀಮಿತ ಆದಾಯದಲ್ಲಿಯೇ ದಿನ ನೂಕಬೇಕಾದ ಈ ಕುಟುಂಬಗಳ ವೆಚ್ಚಗಳಲ್ಲಿ ಆಹಾರ ಧಾನ್ಯಗಳದ್ದೇ ಮುಖ್ಯ ಪಾಲು. ಪಡಿತರ ಸಿಕ್ಕರೆ ಈ ಹೊರೆ ಸ್ವಲ್ಪಮಟ್ಟಿಗಾದರೂ ಕಡಿಮೆಯಾಗುತ್ತದೆ. ಇದರೊಂದಿಗೆ ಬಿಪಿಎಲ್ ಹಾಗೂ ಅಂತ್ಯೋದಯ ಯೋಜನೆಯ ಕುಟುಂಬಗಳಿಗೆ ತೊಗರಿ­ಬೇಳೆ, ತಾಳೆಎಣ್ಣೆ, ಅಯೊಡಿನ್ ಯುಕ್ತ ಉಪ್ಪಿನ ಪೊಟ್ಟಣ ವಿತರಿಸುವ ಆಲೋಚನೆ­ಯೂ ಸರ್ಕಾರಕ್ಕಿದೆ ಎಂಬುದು ಶ್ಲಾಘನೀಯ. ಒಂದೆರಡು ದಶಕ­ಗಳ ಹಿಂದಿನವರೆಗೂ ಈ ವ್ಯವಸ್ಥೆ ಜಾರಿಯಲ್ಲಿತ್ತು. ಕ್ರಮೇಣ ನಿಂತೇ ಹೋಗಿತ್ತು. ಇನ್ನು, ಪಡಿತರ ಅಂಗಡಿಗಳಲ್ಲಿ ವಿತರಣೆಯಾಗುವ ಅಕ್ಕಿ, ಗೋಧಿ ಮತ್ತಿ­ತರ ಆಹಾರ ಧಾನ್ಯಗಳ ಕಳಪೆ ಗುಣಮಟ್ಟದ ಬಗ್ಗೆ ದೂರುಗಳು ಸಾಮಾನ್ಯ. ಸರ್ಕಾರ ಈ ಬಗ್ಗೆ ನಿಗಾ ವಹಿಸಬೇಕು. ಜೊತೆಗೆ, ಪಡಿತರವನ್ನು ಕಾಳಸಂತೆ­ಯಲ್ಲಿ ಮಾರುವ ರೇಷನ್ ಅಂಗಡಿ ಮಾಲೀಕರ ಮೇಲೆ ನಿರ್ದಾಕ್ಷಿಣ್ಯ­ವಾಗಿ ಕ್ರಮ ಜರುಗಿಸುವುದು ಕೂಡ ಸಾರ್ವಜನಿಕ ವಿತರಣಾ ಯೋಜನೆಯ ಯಶಸ್ಸಿಗೆ ಅತ್ಯಂತ ಮುಖ್ಯ. ಬೋಗಸ್ ಕಾರ್ಡ್‌ಗಳ ಹಾವಳಿಯಂತೂ ದೊಡ್ಡ ವಿವಾದವಾಗಿತ್ತು. ಇಂತಹ ಯೋಜನೆ­ಗಳೂ ರಾಜಕಿಯ ಲಾಭ ಪಡೆಯುವುದಕ್ಕೆ ಒಂದು ಅಸ್ತ್ರವಾಗಬಾರದು. ಸಬ್ಸಿಡಿ ದರದ ಪಡಿತರ ಪದಾರ್ಥಗಳು ನೇರವಾಗಿ ಫಲಾನುಭವಿಯನ್ನು ತಲು­ಪುವಂತೆ ನೋಡಿಕೊಂಡರೆ ಮಾತ್ರ ಇಡೀ ಉದ್ದೇಶ ಸಾರ್ಥಕವಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.