ರಸ್ತೆ ಸುರಕ್ಷತೆ ಕಾಪಾಡಿ ಬೆಂಗಳೂರಿನ ಹೆಬ್ಬಾಳದ ಸಮೀಪ ಇತ್ತೀಚೆಗೆ ನಡೆದಿರುವ ಅಪಘಾತದ ಭೀಕರತೆ ನಾಗರಿಕರನ್ನು ಬೆಚ್ಚಿಬೀಳಿಸಿದೆ. ರಸ್ತೆ ಸಿಗ್ನಲ್ ಬಳಿ ರಭಸವಾಗಿ ನುಗ್ಗಿದ ಟ್ಯಾಂಕರ್‌, ರಸ್ತೆ ದಾಟುತ್ತಿದ್ದವರು ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ಯರ್ರಾಬಿರ್ರಿ ಚಲಿಸಿದೆ. ಇದರಿಂದ ಇಬ್ಬರು ಸ್ಥಳ­ದಲ್ಲೇ ಸಾವಿಗೀಡಾಗಿ, ಹಲವು ಪಾದಚಾರಿಗಳು ಗಾಯಗೊಂಡಿದ್ದಾರೆ. ಪಾದ­ಚಾರಿಗಳಿಗೆ ಹಸಿರು ದೀಪ ಇದ್ದದ್ದರಿಂದ ರಸ್ತೆ ನಿಯಮಗಳ ಪ್ರಕಾರವೇ ರಸ್ತೆ ದಾಟುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಜೀವ ಕಳೆದುಕೊಂಡಿರುವುದು ಆಘಾ­ತಕಾರಿ. ಹಾಗೆಯೇ ಸಿಗ್ನಲ್ ಬಳಿ ನಿಂತಿದ್ದ ಬೈಕ್‌ಗೂ ಈ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು ದ್ವಿಚಕ್ರವಾಹನದ ಹಿಂಬದಿಯ ಸವಾರನ ಸಾವಿಗೆ ಕಾರಣ­ವಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಗಳು ಅಪ­ಘಾತದ ತೀವ್ರತೆಗೆ ಸಾಕ್ಷಿ. ರಸ್ತೆ ನಿಯಮ­ಗಳನ್ನು ಕಿಂಚಿತ್ತೂ ಲೆಕ್ಕಿಸದೆ ಅಪ­ಘಾತ ಸಂಭವಿಸಿದರೂ ಟ್ಯಾಂಕರ್ ಚಾಲನೆ ಮಾಡಿಕೊಂಡೇ ಮುಂದೆ ಸಾಗಿ­­ರುವ ಚಾಲಕ ಕಡೆಗೆ ವಾಹನವನ್ನು ನಿಲ್ಲಿ­ಸಿದ್ದು ಮುಂದಿನ ಸಿಗ್ನಲ್‌ನಲ್ಲಿ ಎಂಬು­­ದಂತೂ ತೀರಾ ಅಮಾನವೀಯ. ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಜನರ ಜೀವ ಬಲಿ ಪಡೆಯುವ ಇಂತಹ ಅಶಿಸ್ತು ಹಾಗೂ ಅಡ್ಡಾದಿಡ್ಡಿ ಚಾಲನೆ ಪ್ರಕರಣಗಳು ಹೆಚ್ಚುತ್ತಿದ್ದು ರಸ್ತೆಗಳು ಅಭದ್ರತೆಯ ತಾಣ­ಗಳಾ­ಗು­ತ್ತಿವೆ. ಬೆಂಗಳೂರಿನಲ್ಲಿ ಪಾದಚಾರಿಗಳು ಅಂಗೈಯಲ್ಲಿ ಜೀವ ಹಿಡಿದು ಅಡ್ಡಾಡ­ಬೇಕಾಗಿದೆ. ಹಾಗಂತ ವಾಹನ ಚಾಲಕರ ಸ್ಥಿತಿಯೇನೂ ಸುರಕ್ಷಿತ­ವಲ್ಲ. ಅದ­ರಲ್ಲೂ ದ್ವಿಚಕ್ರ ವಾಹನ ಸವಾರರು ರಸ್ತೆ ಮೇಲೆ ಇರುವಷ್ಟು ಹೊತ್ತೂ ಆತಂಕ­ದಲ್ಲೇ ಇರಬೇಕಾದಂಥ ಸ್ಥಿತಿ ಇದೆ. ಇದಕ್ಕೆ ಕಾರಣ ರಸ್ತೆಗಳ ಅವ್ಯವಸ್ಥೆ, ವಾಹನ ದಟ್ಟಣೆ ವಿಪರೀತ ಹೆಚ್ಚಿರುವುದು. ಸಂಚಾರ ನಿಯಮಗಳು ಪಾಲನೆ ಆಗುತ್ತಿಲ್ಲ. ನಿಯಮ ಉಲ್ಲಂಘಿಸಿದರೂ ಪೊಲೀಸರ ಕೈ ಬೆಚ್ಚಗೆ ಮಾಡಿ ಪಾರಾ­­ಗ­ಬಹುದು ಎಂಬ ಮನಸ್ಥಿತಿ ಹೆಚ್ಚುತ್ತಿದೆ. ಸಂಚಾರ ಪೊಲೀಸರ ಮನೋಧರ್ಮವೂ ಇದಕ್ಕೆ ಪೂರಕವಾಗಿದೆ. ಸೆಲ್‌ಫೋನ್‌ನಲ್ಲಿ ಮಾತನಾ­ಡುತ್ತಾ ವಾಹನ ಓಡಿಸುವ ಚಟದಿಂದ ಚಾಲನೆ ಮೇಲಿನ ಏಕಾಗ್ರತೆಗೆ ಭಂಗ ಉಂಟಾಗಿ ಗಂಭೀರ ಅಪಘಾತಗಳು ಸಂಭವಿಸುತ್ತಿವೆ. ಈ ಪಿಡುಗನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ. ಸಿಗ್ನಲ್ ದೀಪಗಳ ಅಳವಡಿಕೆ, ಪಾದಚಾರಿಗಳ ಅನುಕೂಲಕ್ಕಾಗಿ ಸ್ಕೈವಾಕ್‌ಗಳ ನಿರ್ಮಾಣ, ಝೀಬ್ರಾ ಪಟ್ಟಿ– ಇವೆಲ್ಲವೂ ಸರಿಯಾದ ರೀತಿಯಲ್ಲಿ ನಿರ್ವಹಣೆಯಾ­ಗುವುದು ಮುಖ್ಯ. ಈ ಎಲ್ಲಾ ವ್ಯವಸ್ಥೆ ಇದ್ದರೂ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ರಸ್ತೆಗಳು ಅಸುರಕ್ಷಿತವಾಗುವುದು ಮುಂದುವರಿಯುತ್ತದೆ ಎಂಬುದೂ ನೆನಪಿರಬೇಕು. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಅಗತ್ಯ. ಅಪಘಾತಕ್ಕೆ ಕಾರಣರಾಗುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಜಾಗರೂಕತೆ­ಯಿಂದ ಜೀವ ತೆಗೆದ ತಪ್ಪಿತಸ್ಥರು ಸರಳ ಶಿಕ್ಷೆಯಿಂದ ಪಾರಾಗುವಂತಿರ­ಬಾರದು. ಶಿಕ್ಷಾಭಯ ಮೂಡದ ಹೊರತು ಸುಧಾರಣೆ ಅಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.