ಕೃಷಿ ಕ್ಷೇತ್ರಕ್ಕೆ ಕಸುವು ತುಂಬಿ ಪ್ರಸಕ್ತ ಬೆಳೆ ವರ್ಷದಲ್ಲಿ ದೇಶದಲ್ಲಿನ ಆಹಾರ ಧಾನ್ಯ ಉತ್ಪಾದನೆ ಗಣ­ನೀಯ ಪ್ರಮಾಣದಲ್ಲಿ ಕುಸಿತ ಕಾಣಲಿದೆ. ಕೇಂದ್ರ ಕೃಷಿ ಸಚಿವಾಲಯ ಮಾಡಿರುವ ಅಂದಾಜಿನ ಪ್ರಕಾರ 2014-–15ನೇ ಬೆಳೆ ಹಂಗಾಮಿನ ಆಹಾರ ಧಾನ್ಯ ಉತ್ಪಾದನೆ ಪ್ರಮಾಣ 2570.7 ಲಕ್ಷ ಟನ್. ಅಂದರೆ ಇದು ಹಿಂದಿನ ವರ್ಷಕ್ಕಿಂತ 85 ಲಕ್ಷ ಟನ್ ಕಡಿಮೆ. ಮುಂಗಾರು ಮಳೆ ಸಕಾಲಕ್ಕೆ ಸರಿಯಾಗಿ ಬೀಳದೇ ಇರುವುದು, ಪ್ರವಾಹ, ಕೀಟಬಾಧೆ ಮತ್ತಿತರ ಪ್ರಾಕೃತಿಕ ಕಾರಣಗಳು ಬೆಳೆಗಳ ಇಳುವರಿ ಹಾಗೂ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತವೆ. 2014ರಲ್ಲಿ ಮುಂಗಾರು ಮಳೆ ಶೇ 12ರಷ್ಟು ಕೊರತೆಯಾಗಿತ್ತು. ಹೀಗಾಗಿ ಮಳೆಯಾಧಾರಿತ ಬತ್ತ, ಬೇಳೆಕಾಳು, ದ್ವಿದಳ ಧಾನ್ಯಗಳ ಉತ್ಪಾದನೆ ಕಡಿಮೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಸುಧಾರಿತ ಕೃಷಿ ತಂತ್ರಜ್ಞಾನ ಅಳವಡಿಕೆ, ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಅನುದಾನ ಮತ್ತು ಉತ್ತೇಜನ, ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಪರಿಕರಗಳು, ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ, ರಿಯಾಯಿತಿ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ, ನೀರಾವರಿಗೆ ಹೆಚ್ಚು ಹಣ ಒದಗಿಸುವ ಮಾತುಗಳನ್ನಾಡುತ್ತಲೇ ಇರುತ್ತದೆ ಸರ್ಕಾರ. ಹೀಗಿದ್ದೂ ದೇಶದಲ್ಲಿ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬರುತ್ತಿದೆ ಎಂಬುದು ಆತಂಕಕಾರಿ. ಆಹಾರ ಧಾನ್ಯಗಳ ಬದಲಿಗೆ ಹಣ್ಣು, ತರಕಾರಿ, ತೈಲ ಬೀಜ ಬೆಳೆಗೆ ಬದಲಾವಣೆ ಮಾಡಿಕೊಳ್ಳುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇನ್ನು ಕೃಷಿಭೂಮಿ, ಕೈಗಾರಿಕೆ ಅಥವಾ ವಸತಿ ಪ್ರದೇಶವಾಗಿ ಪರಿವರ್ತನೆ­ಯಾಗುತ್ತಾ ಕೃಷಿಭೂಮಿ ಕುಗ್ಗುತ್ತಾ ಸಾಗುತ್ತಿರುವುದು ಕಹಿ ವಾಸ್ತವ. ಇದರಿಂದ ಆಹಾರ ಭದ್ರತೆ ಇಳಿಮುಖವಾಗದಂತೆ ಎಚ್ಚರ ವಹಿಸಬೇಕಾದುದು ಅಗತ್ಯ. ಸ್ವಾತಂತ್ರ್ಯ ಬಂದ ಆರಂಭದ ವರ್ಷಗಳಲ್ಲಿ ಆಹಾರಕ್ಕಾಗಿ ನಾವು ವಿದೇಶ­ಗಳ ಕಡೆ ನೋಡುತ್ತಿದ್ದೆವು. ಆದರೆ 60ರ ದಶಕದಲ್ಲಿ ನಡೆದ ಹಸಿರು ಕ್ರಾಂತಿ ಆಹಾರದ ಮೇಲಿನ ವಿದೇಶಿ ಅವಲಂಬನೆಯನ್ನು ತಪ್ಪಿಸುವಲ್ಲಿ ಸಹಾಯ ಮಾಡಿತು. 90ರ ದಶಕದ ಆರ್ಥಿಕ ಉದಾರೀಕರಣದ ನಂತರ ಕೃಷಿ ಕ್ಷೇತ್ರ­ವನ್ನು ಅವಲಂಬಿಸುವವರ ಸಂಖ್ಯೆ ಇಳಿಮುಖವಾಗುತ್ತ ಬಂದಿದೆ. ಜತೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಕೂಡ ಕಡಿಮೆ­ಯಾಗುತ್ತಿದೆ. 2005ರಲ್ಲಿ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ 22ರಷ್ಟಿತ್ತು. ನಂತರದ ವರ್ಷಗಳಲ್ಲಿ ಇದು ಇಳಿಮುಖವಾಗುತ್ತಲೇ ಸಾಗಿದೆ. 2009–-10ನೇ ಸಾಲಿನಲ್ಲಿ ಜಿಡಿಪಿಗೆ ಕೃಷಿ ಕ್ಷೇತ್ರದ ಕೊಡುಗೆ ಶೇ 14.6 ರಷ್ಟಾಯಿತು. ನಂತರ 2013-–14ರಲ್ಲಿ ಶೇ 13.9ರಷ್ಟು ಮಟ್ಟಕ್ಕೆ ಇಳಿದಿದೆ. ಆದರೆ ಈಗಲೂ ರಾಷ್ಟ್ರದ ಶೇ 60ರಷ್ಟು ಜನರಿಗೆ ಕೃಷಿ ಮತ್ತು ತತ್ಸಂಬಂಧಿ ಚಟು­ವಟಿಕೆಗಳೇ ಜೀವನಾಧಾರ ಎಂಬುದನ್ನು ಮರೆಯುವಂತಿಲ್ಲ. ಹೀಗಾಗಿ, ಕೃಷಿಕರ ಕುಟುಂಬಗಳಲ್ಲಿನ ಕನಿಷ್ಠ ಒಬ್ಬರಿಗಾದರೂ ಕೃಷಿಯೇತರ ಕ್ಷೇತ್ರದಲ್ಲಿ ಉದ್ಯೋಗ ಕಲ್ಪಿಸುವ ಗುರಿಯನ್ನೇನೋ ಸರ್ಕಾರ ಹಾಕಿಕೊಂಡಿದೆ. ಆದರೆ ಕೃಷಿ ಆಧುನೀಕರಣಕ್ಕೂ ಗಮನ ನೀಡುವುದು ಅಗತ್ಯ. ಸಣ್ಣ ಹಿಡುವಳಿಗಳಲ್ಲಿ ಕಡಿಮೆ ನೀರು ಬಳಸಿ ಹೆಚ್ಚು ಹೆಚ್ಚು ಉತ್ಪಾದಿಸುವ ವಿಧಾನಗಳು ಹಾಗೂ ಅಧಿಕ ಇಳುವರಿಯ ತಳಿಗಳ ಅಭಿವೃದ್ಧಿ ಕಡೆ ಲಕ್ಷ್ಯ ವಹಿಸಬೇಕು. ಕೃಷಿ ಎನ್ನುವುದು ಲಾಭ ತರುವ ವೃತ್ತಿಯಾದರಷ್ಟೇ ರೈತರಲ್ಲೂ ಹುಮ್ಮಸ್ಸು ಮೂಡುತ್ತದೆ. ಆಗ ಮಾತ್ರ ಆಹಾರ ಧಾನ್ಯ ಉತ್ಪಾದನೆಯ ಇಳಿಮುಖದ ಆತಂಕದಿಂದ ಪಾರಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.