ಸಸ್ಯ ಸಂಪತ್ತು ಹೆಚ್ಚಿಸಿ ಬೆಂಗಳೂರು ನಗರದಲ್ಲಿ ಆರು ಜನರಿಗೆ ಕೇವಲ ಒಂದು ಮರ ಉಳಿದಿದೆ ಎನ್ನುವ ಕಠೋರ ಸತ್ಯ ಭಾರತೀಯ ವಿಜ್ಞಾನ ಸಂಸ್ಥೆಯ ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದರೆ ವಿಪರ್ಯಾಸ ಎಂದರೆ ಇಬ್ಬರು ವ್ಯಕ್ತಿಗಳಿಗೆ ಒಂದು ವಾಹನವಿದೆ. ಬೆಂಗಳೂರಿನಲ್ಲಿರುವ ಸುಮಾರು ಒಂದು ಕೋಟಿ ಜನಸಂಖ್ಯೆಗೆ ೫೩ ಲಕ್ಷ ವಾಹನಗಳಿವೆ. ಆದರೆ ಮರಗಳ ಸಂಖ್ಯೆ ಕೇವಲ ೧೪.೭೮ ಲಕ್ಷ. ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿದ್ದರೂ ಇದಕ್ಕೆ ಅನು­ಗುಣ­ವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಸಂಪ್ರದಾಯವೇ ಇಲ್ಲವಾಗಿದೆ ಎನ್ನು­ವುದು ಆಘಾತಕಾರಿ ವಿಷಯ. ಈ ಸ್ಥಿತಿ ಕೇವಲ ರಾಜಧಾನಿಗೆ ಮಾತ್ರ ಸೀಮಿತ­ವಾಗಿಲ್ಲ. ರಾಜ್ಯದ ಉಳಿದ ಜಿಲ್ಲೆಗಳಿಗೂ ಅನ್ವಯಿಸುತ್ತದೆ. ಕೈಗಾರಿಕೆ ಮತ್ತು ವಾಹನಗಳ ಸಂಖ್ಯೆ ಹೆಚ್ಚಾಗಿ ವಾಯುಮಾಲಿನ್ಯದ ಪ್ರಮಾಣ ಮಿತಿ­ಮೀರುತ್ತಿದೆ. ಮರಗಳ ಸಂಖ್ಯೆ ಕಡಿಮೆಯಾಗಿ ಬಿಸಿಲಿನ ತಾಪ ವರ್ಷದಿಂದ ವರ್ಷಕ್ಕೆ ನಿಧಾನವಾಗಿ ಏರುತ್ತಿದೆ ಎನ್ನುವುದು ಅಂಕಿಅಂಶದಿಂದ ಸಾಬೀತಾ­ಗಿದೆ. ಮಾಲಿನ್ಯದ ಪ್ರಮಾಣ ಹಾಗೂ ಬಿಸಿಲಿನ ಬೇಗೆ ಕಡಿಮೆಯಾಗಲು ಗಿಡ ಬೆಳೆಸುವ ಕೆಲಸ ಆಗಬೇಕು. ಬೆಂಗಳೂರಿನಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಬೆಳೆಸಿದ ಬೃಹತ್‌ ಉದ್ಯಾನ­ಗಳಾದ ಲಾಲ್‌ಬಾಗ್‌ ಮತ್ತು ಕಬ್ಬನ್‌ಪಾರ್ಕ್‌ ಹೊರತುಪಡಿಸಿದರೆ ಇವಕ್ಕೆ ಸರಿಸಮಾನ­ವಾಗಿ ಉದ್ಯಾನಗಳನ್ನು ಬೆಳೆಸಿಲ್ಲ. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮಂಡಿಸಿದ ಬಜೆಟ್‌ನಲ್ಲಿ ರಾಜಧಾನಿಯ ನಾಲ್ಕೂ ದಿಕ್ಕಿನಲ್ಲಿ ಲಾಲ್‌ಬಾಗ್‌ ಮಾದರಿಯ ಉದ್ಯಾನ ಬೆಳೆಸುವ ಭರವಸೆ ನೀಡಿ­ದ್ದರು. ಆದರೆ ಭರವಸೆ ಈಡೇರಿಲ್ಲ. ಹಾಗೆಯೇ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ­ಯಾಗಿದ್ದ ಕಾಲದಲ್ಲಿ ಪಾದಚಾರಿ ಮಾರ್ಗದಲ್ಲಿ ಗಿಡ­ಗಳನ್ನು ಬೆಳೆಸಿದ್ದನ್ನು ಹೊರತುಪಡಿಸಿದರೆ ಸಸ್ಯಪ್ರೇಮವನ್ನು ಯಾವ ಮುಖ್ಯ­ಮಂತ್ರಿ­ಯೂ ತೋರಿಸಿಲ್ಲ. ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಬೆಂಗಳೂರಿನ ಅಭಿವೃದ್ಧಿ ಪ್ರಾಧಿಕಾರ ಬೃಹತ್‌ ಉದ್ಯಾನಗಳನ್ನು ಮಾಡಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗವು ರಸ್ತೆ ವಿಸ್ತರಣೆಗಾಗಿ ಮರ ಕತ್ತರಿಸಲು ಅನುಮತಿ ನೀಡುತ್ತಿದ್ದರೆ, ಮೆಟ್ರೊ ಯೋಜನೆಗಾಗಿ ಮತ್ತಷ್ಟು ಮರಗಳ ಹನನವಾಗಿದೆ. ಆದರೆ ಕತ್ತರಿಸಿದ ಮರಗಳ ಬದಲಿಗೆ ಹತ್ತು ಸಸಿಗಳನ್ನಾದರೂ ನೆಡುವ ಕೆಲಸ ಆಗುತ್ತಿಲ್ಲ. ಕಾಡಿನ ಸ್ಥಿತಿಯೂ ಇದಕ್ಕಿಂತ ಬೇರೆಯಾಗಿಲ್ಲ. ೧೯೮೦ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಒಟ್ಟು ೨೩ ಸಾವಿರ ಅಭಿವೃದ್ಧಿ ಯೋಜನೆಗಳಿಗೆ ೪೧.೮೨ ಲಕ್ಷ ಎಕರೆಗೂ ಹೆಚ್ಚು ಅರಣ್ಯವನ್ನು ನೀಡಲಾಗಿದೆ ಎನ್ನುವ ಆಘಾತ­ಕಾರಿ ಅಂಶವನ್ನು ಜೀವವೈವಿಧ್ಯ ಸಂರಕ್ಷಣೆಯ ಕಾರ್ಯತಂತ್ರ ರೂಪಿ­ಸುವ ಸಲು­­ವಾಗಿ ಕೇಂದ್ರ ಪರಿಸರ ಸಚಿವಾಲಯ ತಯಾರಿಸಿರುವ ಐದನೇ ರಾಷ್ಟ್ರೀಯ ವರದಿಯಲ್ಲಿ ತಿಳಿಸಲಾಗಿದೆ. ಕೋಯಿಕ್ಕೋಡಿಗೆ ಕೊಡಗು ಜಿಲ್ಲೆಯ ಮೂಲಕ ಹಾದುಕೋಗುವ ವಿದ್ಯುತ್‌ ತಂತಿ ಹಾಕುವ ಯೋಜನೆ­ಗಾಗಿ ಐದು ಕಿ.ಮೀ. ರಕ್ಷಿತ ಅರಣ್ಯ ನಾಶವಾಗುತ್ತಿದೆ. ಅರಣ್ಯ ಒತ್ತುವರಿ ತೆರವು ತಡವಾಗುತ್ತಿದ್ದು, ಒತ್ತುವರಿಯನ್ನೇ ಸಕ್ರಮ ಮಾಡಿ ಎನ್ನುವ ಕೂಗು ಹೆಚ್ಚುತ್ತಿದೆ. ಜೀವವೈವಿಧ್ಯವನ್ನು ರಕ್ಷಿಸುವ ಉದ್ದೇಶ ಹೊಂದಿ­ರುವ ಡಾ.ಕಸ್ತೂರಿರಂಗನ್‌ ವರದಿಗೂ ಅಲ್ಲಲ್ಲಿ ವಿರೋಧ ಕೇಳಿಬರುತ್ತಿದೆ. ಹೀಗಿರು­ವಾಗ ಸ್ವಚ್ಛ ವಾತಾವರಣಕ್ಕಾಗಿ ನಗರದಲ್ಲೇ ಬೃಹತ್‌ ಉದ್ಯಾನ­ಗಳನ್ನು ಬೆಳೆಸಬೇಕು. ಇಲ್ಲವಾದರೆ ಭೀಕರ ಪರಿಣಾಮ ಎದುರಿಸಲು ಸಿದ್ಧವಾಗ­ಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.