ಕಣಿವೆಯಲ್ಲಿ ಶಾಂತಿ ನೆಲೆಸಲಿ ಜಮ್ಮು– ಕಾಶ್ಮೀರದಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಕೊನೆಗೂ ಅಸ್ತಿತ್ವಕ್ಕೆ ಬಂದಿದೆ. ಭಿನ್ನ ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷಗಳು ಎರಡೂವರೆ ತಿಂಗಳ ಹಗ್ಗ– ಜಗ್ಗಾಟದ ಬಳಿಕ ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ದಡಿ ಅಧಿಕಾರ ಹಿಡಿದಿರುವುದು ಸ್ವಾಗ­ತಾರ್ಹ ಕ್ರಮ. ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಮುಖ್ಯ­ಮಂತ್ರಿ­ಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ‘ಪಾಕಿಸ್ತಾನ ಸರ್ಕಾರ, ಉಗ್ರ­ಗಾಮಿ­ಗಳು ಮತ್ತು ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಶಾಂತಿಯುತ ಮತ­ದಾನ ನಡೆಯುವಂತಹ ವಾತಾವರಣ ಸೃಷ್ಟಿಸಿದರು’ ಎಂಬಂಥ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೊದಲಿಂದಲೂ ಪ್ರತ್ಯೇಕತಾವಾದಿಗಳ ವಿಷಯದಲ್ಲಿ ಮೃದು ನಿಲುವು ತಳೆದಿರುವ ಮುಫ್ತಿ ಹೇಳಿಕೆ ಅನಿರೀಕ್ಷಿತವೇನಲ್ಲ. ಬಿಜೆಪಿಗೆ ಇದ­ರಿಂದ ಮುಜುಗರ ಆಗಿರಬಹುದು. ಇಂತಹ ವಿವಾದಗಳು ಮುಂದೆಯೂ ಎದುರಾಗುವ ಸಾಧ್ಯತೆಗಳಿರುವುದರಿಂದ ಅವನ್ನು ಮಿತ್ರ ಪಕ್ಷ­ಗಳು ಹೇಗೆ ನಿಭಾಯಿಸುತ್ತವೆ ಎನ್ನುವುದೇ ಕುತೂಹಲದ ಸಂಗತಿ. ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು, ಕೊಡು– ಕೊಳ್ಳುವ ಮೂಲಕ ಅಧಿಕಾರಕ್ಕೆ ಬಂದಿರುವ ಪಕ್ಷಗಳಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮುಖ್ಯವಾಗಬೇಕೆ ವಿನಾ ವಿವಾದಗಳಲ್ಲ. ಅದನ್ನು ಮೀರಿ ನಿಲ್ಲುವ ರಾಜಕೀಯ ಪ್ರಬುದ್ಧತೆಯನ್ನು ಉಭಯ ಪಕ್ಷಗಳೂ ಪ್ರದರ್ಶಿಸಬೇಕು. ಪಿಡಿಪಿ ಹಾಗೂ ಬಿಜೆಪಿ ಮಧ್ಯೆ ಇದುವರೆಗೂ ಕಗ್ಗಂಟಾಗಿದ್ದು ಜಮ್ಮು– ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಕಲಂ, ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಮತ್ತು ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ಪುನರ್ವಸತಿ ಸಮಸ್ಯೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಲಂ 370 ಅನ್ನು ರದ್ದುಪಡಿಸುವುದಾಗಿ ಪ್ರಕಟಿಸಲಾಗಿತ್ತು. ಈಗ ಒಂದು ಹೆಜ್ಜೆ ಹಿಂದೆ ಸರಿದಿದೆ. ಈ ವಿಷಯದಲ್ಲಿ ಮಿತ್ರ ಪಕ್ಷದ ಒತ್ತಡಕ್ಕೆ ಮಣಿದಿದೆ. ಅದೇ ರೀತಿ ಪಿಡಿಪಿ, ಎಎಫ್‌ಎಸ್‌ಪಿಎ ವಿಚಾರದಲ್ಲಿ ಕಠಿಣ ನಿಲುವಿಗೆ ಅಂಟಿಕೊಂಡಿಲ್ಲ. ವಿಶೇಷ ಕಾಯ್ದೆ ರದ್ದುಗೊಳಿಸುವ ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟಿದೆ. ಜೊತೆಗೆ ‘ಎಎಫ್‌ಎಸ್‌ಪಿಎ ರದ್ದು ಮಾಡುವ ವಿಚಾರ ತಕ್ಷಣ ಆಗುವಂತಹದ್ದಲ್ಲ. ಅದೊಂದು ಪ್ರಕ್ರಿಯೆ’ ಎಂಬಂಥ ಮಾತನ್ನೂ ಪಿಡಿಪಿ ಹೇಳಿದೆ. ಹೀಗಾಗಿ ಚುನಾವಣೆ ವೇಳೆ ಮತದಾರರಿಗೆ ನೀಡಿದ್ದ ಭರವಸೆಯಿಂದ ಪಿಡಿಪಿ ಹಿಂದೆ ಸರಿದಿದೆ ಎಂಬ ಟೀಕೆಗೂ ಒಳಗಾಗಿದೆ. ಭಯೋತ್ಪಾದನೆಯಿಂದ ನಲುಗಿರುವ ಜಮ್ಮು– ಕಾಶ್ಮೀರ­ದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ಮುಫ್ತಿ ಮತ್ತು ಮೋದಿ ಜತೆ­ಗೂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ನೆರೆಯ ಪಾಕಿಸ್ತಾನವನ್ನೂ ಒಳಗೊಳ್ಳ­ಬೇಕಿದೆ. ಪಾಕಿಸ್ತಾನವನ್ನು ಹೊರಗಿಟ್ಟು ಕಣಿವೆಯಲ್ಲಿ ಶಾಂತಿ ಸ್ಥಾಪನೆ ಸಾಧ್ಯ­ವಿಲ್ಲದ ಮಾತು. 1999ರ ಕಾರ್ಗಿಲ್‌ ಯುದ್ಧದ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿತ್ತು. ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಶ್ಮೀರಕ್ಕೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ಸಂಬಂಧ ಸುಧಾರಿಸಿತ್ತು. ಮೋದಿ ಅವರೂ ಅದೇ ಧೋರಣೆ ತಳೆಯ­ಬಹುದು. ಕಾಶ್ಮೀರದ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನದ ಜತೆ ಮಾತು­ಕತೆ ಪುನಃ ಆರಂಭಿಸಬಹುದು. ಇದು ಅಗತ್ಯ ಕ್ರಮವೂ ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.